ಮಂಗಳೂರು : ಟೌಟೆ ಚಂಡಮಾರುತದ ಪರಿಣಾಮ ಕರಾವಳಿ ಜಿಲ್ಲೆಗಳಲ್ಲಿ ಹಾನಿಗೀಡಾದ ಪ್ರದೇಶಗಳಿಗೆ ಕಂದಾಯ ಸಚಿವ ಆರ್ ಅಶೋಕ್ ಅವರು ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದರು. ಪ್ರಕೃತಿ ವಿಕೋಪದಿಂದಾಗಿ ನೂರಾರು ಮನೆಗಳಿಗೆ ಹಾನಿಯುಂಟಾಗಿದ್ದು, ದುರಂತದಲ್ಲಿ ಒರ್ವ ವ್ಯಕ್ತಿ ಮೃತಪಟ್ಟಿದ್ದಾನೆ. ಸಾರ್ವಜನಿಕ ಆಸ್ತಿಗೂ ಸಾಕಷ್ಟು ನಷ್ಟ ಉಂಟಾಗಿದ್ದು, ಸಚಿವರು ಈ ಎಲ್ಲಾ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕುರಿತು ಮಾತನಾಡಿದ ಸಚಿವ ಅಶೋಕ್ ಅವರು,”ಚಂಡಮಾರುತದ ಪರಿಣಾಮ ಸಾಕಷ್ಟು ಹಾನಿ ಸಂಭವಿಸಿದೆ. ಬೆಳೆ ಹಾನಿ, ಸಾರ್ವಜನಿಕ ಆಸ್ತಿ ಹಾನಿ ಕುರಿತಂತೆ ಅಂದಾಜು ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈ ನಿಟ್ಟಿನಲ್ಲಿ ತಕ್ಷಣವೇ ಪರಿಹಾರ ಕಾರ್ಯ ಕೈಗೊಳ್ಳಲು ಸೂಚಿಸಲಾಗಿದೆ. ಮನೆಗಳಿಗೆ ನೀರು ನುಗ್ಗಿದ್ದರೆ ಅಂಥವರಿಗೆ ತಕ್ಷಣ ರೂ.10 ಸಾವಿರ, ಭಾಗಶಃ ಮನೆ ಹಾನಿಗೊಳಗಾಗಿದ್ದರೆ ರೂ.1 ಲಕ್ಷ ಹಾಗೂ ಪೂರ್ಣ ಮನೆ ಕಳೆದುಕೊಂಡವರಿಗೆ ತಕ್ಷಣ ಮೊದಲ ಕಂತಿನ ರೂಪದಲ್ಲಿ ರೂ.1 ಲಕ್ಷದಂತೆ ಒಟ್ಟು ರೂ. 5 ಲಕ್ಷ ಪರಿಹಾರವನ್ನ ನೀಡಬೇಕು ಎಂದು ಜಿಲ್ಲಾಧಿಖಾರಿಗಳು ಹಾಗೂ ತಹಶೀಲ್ದಾರರಿಗೆ ಸೂಚಿಸಿದ್ದೇನೆ. ಸಾಕಷ್ಟು ಕಡೆ ವಿದ್ಯುತ್ ಲೈನ್ ಗಳಿಗೂ ಕೂಡಾ ಹಾನಿ ಸಂಭವಿಸಿದೆ. ಅಧಿಖಾರಿಗಳಿಗೆ ಕೂಡಲೇ ಅದನ್ನೆಲ್ಲಾ ಸರಿ ಪಡಿಸುವಂತೆ ತಿಳಿಸಿದ್ದೇನೆ. ಇದಕ್ಕಾಗಿ ಎನ್ ಡಿ ಆರ್ ಎಫ್ ಹಣವನ್ನ ತಕ್ಷಣ ಬಿಡುಗಡೆಗಿಳಿಸಲಾಗುವುದು”, ಎಂದು ಹೇಳಿದರು.
“ನಮ್ಮ ಮೊದಲ ಆದ್ಯತೆ ರಸ್ತೆಗಳ ದುರಸ್ಥಿಯಾಗಿದೆ. ಈ ಕಾರ್ಯವನ್ನ ತಕ್ಷಣ ಕೈಗೆತ್ತಿಕೊಳ್ಳುವಂತೆ ಸೂಚಿಸಿದ್ದೇನೆ. ಅಪಾರ ಪ್ರಮಾಣದ ಹಾನಿ ಸಂಭವಿಸಿದ್ದು, ಈ ಕುರಿತಂತೆ ಮುಖ್ಯಮಂತ್ರಿಗಳಿಗೂ ಮಾಹಿತಿ ನೀಡುತ್ತೇನೆ,” ಎಂದರು.
ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್ ಬ್ಯೂರೋ.
Click this button or press Ctrl+G to toggle between Kannada and English