ಮಂಗಳೂರು : ತೌಕ್ತೆ ಚಂಡಮಾರುತದ ಪ್ರಭಾವದಿಂದ ವಿಪರೀತವಾಗಿ ಬೀಸಿದ ಬಿರುಗಾಳಿ, ಮಳೆಗೆ ಹೊಯಿಗೆ ಬಜಾರ್ ಸರಕಾರಿ ಜಮೀನಿನಲ್ಲಿ ಟೆಂಟ್ ಹಾಕಿ ಬದುಕುತ್ತಿದ್ದ ಅಲೆಮಾರಿ ಶಿಳ್ಳೆಕ್ಯಾತ ಸಮುದಾಯದ ಕುಟುಂಬಗಳ ಗುಡಿಸಲುಗಳು ಹಾರಿಹೋಗಿ ಗಾಳಿ, ಮಳೆಯಿಂದ ತಮ್ಮನ್ನು ತಾವು ಕಾಪಾಡಲು ಸಮಸ್ಯೆಯನ್ನು, ಬಹಳ ನಷ್ಟವನ್ನು ಅನುಭವಿಸಿದ್ದರು. ಮಾತ್ರವಲ್ಲದೆ ಕೋರೋನಾ ರೋಗದ ಈ ಕಾಲಘಟ್ಟದಲ್ಲಿ ಉಂಟಾದ ಸಮಸ್ಯೆ ಮತ್ತು ಲಾಕ್ಡೌನ್ ತಮ್ಮ ಬದುಕಿಗೆ ಮೂಲ ಆಧಾರವಾಗಿದ್ದ ಕುಲ ಕಸುಬನ್ನೇ ಕಸಿದುಕೊಂಡಿದ್ದು, ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದ ಈ ಸಮುದಾಯಕ್ಕೆ ಜಿಲ್ಲಾಡಳಿತ ಕೂಡಲೇ ಮದ್ಯಪ್ರವೇಶಿಸಿ ಆಹಾರ ಭದ್ರತೆ ಸಹಿತ ಪ್ರಾಕೃತಿಕ ವಿಕೋಪದ ಅಡಿಯಲ್ಲಿ ಆರ್ಥಿಕ ನೆರವು ನೀಡಬೇಕೆಂದು ಪತ್ರಿಕಾ ಪ್ರಕಟಣೆ ಮೂಲಕ ಒತ್ತಾಯಿಸಲಾಗಿತ್ತು.
ಈ ಬಗ್ಗೆ ಗಮನಹರಿಸಿದ ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕೆ. ರವೀಂದ್ರ ಶೆಟ್ಟಿ ಹೊಯಿಗೆ ಬಜಾರ್ ನ ಶಿಳ್ಳೆಕ್ಯಾತ ಸಮುದಾಯದ ಕ್ಯಾಂಪ್ ಗೆ ಭೇಟಿಕೊಟ್ಟು ಅವರ ಸಮಸ್ಯೆಗಳನ್ನು ಆಲಿಸಿರುತ್ತಾರೆ ಹಾಗೂ ಚಂಡಮಾರುತದಿಂದಾದ ಸಮಸ್ಯೆ ಮತ್ತು ಅವರ ಸಾಮಾಜಿಕ, ಆರ್ಥಿಕ ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ಸರಿಪಡಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆಯನ್ನಿತ್ತರು.
ಈ ವೇಳೆ ಕರಾವಳಿ ವೃತ್ತಿನಿರತ ಅಲೆಮಾರಿ ಶಿಳ್ಳೆಕ್ಯಾತ ಹಕ್ಕುಗಳ ಸಮಿತಿಯ ಗೌರವಾಧ್ಯಕ್ಷರು, ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ , ಅಲೆಮಾರಿ ನಿಗಮದ ಅಧಿಕಾರಿ ಸೋಮಪ್ಪ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English