ಕರ್ನಾಟಕದಲ್ಲಿ 16.29 ಲಕ್ಷ ಟನ್ ರಸಗೊಬ್ಬರ ದಾಸ್ತಾನು, ಸಬ್ಸಿಡಿ ದರ ಹೆಚ್ಚಳ

12:22 PM, Friday, May 21st, 2021
Share
1 Star2 Stars3 Stars4 Stars5 Stars
(5 rating, 1 votes)
Loading...

DV Sadananda  Gowdaಬೆಂಗಳೂರು: ಮುಂಗಾರು ಹಂಗಾಮಿಗಿನಲ್ಲಿ ಡಿಎಪಿ ಹಾಗೂ ಪಿ & ಕೆ ರಸಗೊಬ್ಬರ ಸಬ್ಸಿಡಿಯನ್ನು 50-ಕೆ.ಜಿ. ಚೀಲವೊಂದಕ್ಕೆ 511 ರೂಪಾಯಿಯಿಂದ 1211 ರೂಪಾಯಿಗೆ (ಶೇಕಡಾ 140) ಹೆಚ್ಚಳ ಮಾಡಿ ಕೇಂದ್ರ ರಸಗೊಬ್ಬರ ಇಲಾಖೆಯು ಇಂದು ಅಧಿಕೃತ ಆದೇಶ ಹೊರಡಿಸಿದೆ.

ಪೋಷಕಾಂಶ ಆಧಾರಿತ ರಸಗೊಬ್ಬರ ಸಬ್ಸಿಡಿ (ಎನ್.ಬಿ.ಎಸ್.) ಯೋಜನೆಯಡಿ ಗುರುವಾರ ಹೊರಡಿಸಿದ ಪರಿಷ್ಕೃತ ಆದೇಶದ ಪ್ರಕಾರ ರಸಗೊಬ್ಬರದಲ್ಲಿ ಬಳಕೆಯಾಗುವ ಪ್ರತಿ ಟನ್ ನೈಟ್ರೋಜನ್ (Nitrogen – N)ಗೆ 18,789 ರೂ, ಫೊಸ್ಫೇಟ್ (Phosphate – P)ಗೆ 45,323 ರೂ, ಪೊಟಾಷ್ (Potash – K) 10,116 ರೂ ಮತ್ತು ಸಲ್ಫರ್ (Sulphur – S)ಗೆ 2374 ರೂ ಸಬ್ಸಿಡಿ ದೊರೆಯಲಿದೆ. ಪೋಷಕಾಂಶ ಆಧಾರಿತ ರಸಗೊಬ್ಬರ ಸಬ್ಸಿಡಿ (ಎನ್.ಬಿ.ಎಸ್.) ಯೋಜನೆಯಡಿ 22 ನಮೂನೆ ಗೊಬ್ಬರಗಳಿದ್ದು ಈ ಪಟ್ಟಿಗೆ ಹೊಸದಾಗಿ ಎನ್’ಪಿಕೆ 8-21-21 ಮತ್ತು ಎನ್’ಪಿಕೆ 9-24-24 ನಮೂನೆ ರಸಗೊಬ್ಬರಗಳನ್ನು ಸೇರಿಸಲಾಗಿದೆ. ಪರಿಷ್ಕೃತ ಸಬ್ಸಿಡಿ ದರ ಮುಂಗಾರು ಹಂಗಾಮಿನವರೆಗೆ (ಅಕ್ಪೋಬರ್ 31, 2021) ಜಾರಿಯಲ್ಲಿರಲಿದೆ.

ರಸಗೊಬ್ಬರ ಸಬ್ಸಿಡಿಗಾಗಿ ಕೇಂದ್ರ ಸರ್ಕಾರವು ಪ್ರತಿವರ್ಷ ಸುಮಾರು 80,000 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ. ಈಗಿನ ಸಬ್ಸಿಡಿ ಹೆಚ್ಚಳದಿಂದಾಗಿ ಕೇಂದ್ರವು ಹೆಚ್ಚುವರಿಯಾಗಿ 14,775 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದ್ದು ದೇಶಾದ್ಯಂತ 9.57 ಕೋಟಿಗಿಂತ ಹೆಚ್ಚು ರೈತರಿಗೆ ಇದರ ಲಾಭ ದೊರೆಯಲಿದೆ. ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜೆಯಡಿ ಕರ್ನಾಟಕದ ಸುಮಾರು 55 ಲಕ್ಷ ರೈತರು ಕಳೆದ ವಾರ 985 ಕೋಟಿ ರೂಪಾಯಿ ನೆರವು ಪಡೆದಿದ್ದರು. ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ರೈತರು ಅಂದಾಜು 5 ಲಕ್ಷ ಟನ್ ಡಿಎಪಿ ಮತ್ತ ಪಿ&ಕೆ ರಸಗೊಬ್ಬರ ಬಳಸುತ್ತಿದ್ದು ಇದೀಗ ರಸಗೊಬ್ಬರ ಸಬ್ಸಿಡಿ ಹೆಚ್ಚಿಸಿರುವುದರಿಂದ ರಾಜ್ಯದ ರೈತರಿಗೆ ಕನಿಷ್ಠ ಪಕ್ಷ 700 ಕೋಟಿ ರೂಪಾಯಿ ಉಳಿತಾಯ ಆಗಲಿದೆ.

ಇಂದು ಇಲ್ಲಿ ಪತ್ರಿಕಾ ಹೇಳಿಕೆಯೊಂದರಲ್ಲಿ ಈ ವಿಷಯ ತಿಳಿಸಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಅವರು ರೈತಾಪಿ ಜನರ ನೆರವಿಗಾಗಿ ಸಬ್ಸಿಡಿ ಹೆಚ್ಚಳದ ಐತಿಹಾಸಿಕ ನಿರ್ಣಯ ಕೈಗೊಂಡ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದರು.
ಮುಂಗಾರು ಹಂಗಾಮಿನಲ್ಲಿ ಕೋವಿಡ್ ಸಂಕಷ್ಟದ ಮಧ್ಯಯೂ ಯೂರಿಯಾ, ಡಿಎಪಿ ಸೇರಿದಂತೆ ಎಲ್ಲ ನಮೂನೆಯ ರಸಗೊಬ್ಬರಗಳನ್ನು ಉತ್ಪಾದನೆ, ಆಮದು ಮತ್ತು ಪೂರೈಕೆ ಮಾಡಲು ನಮ್ಮ ರಸಗೊಬ್ಬರ ಇಲಾಖೆಯು ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಅಗತ್ಯಕ್ಕಿಂತ ಹೆಚ್ಚೇ ರಸಗೊಬ್ಬರ ದಾಸ್ತಾನಿದೆ. ಉದಾಹರಣೆಗೆ ಮೇ ತಿಂಗಳಲ್ಲಿ 26.44 ಲಕ್ಷ ಟನ್ ಯೂರಿಯಾ ಬೇಕು. ನಮ್ಮಲ್ಲಿ 75.56 ಲಕ್ಷ ಟನ್ ಯೂರಿಯಾ ಲಭ್ಯವಿದೆ. ಅದೇ ರೀತಿ 10.87 ಲಕ್ಷ ಟನ್ ಡಿಎಪಿ ಬೇಕಿದ್ದರೆ 17.71 ಲಕ್ಷ ಟನ್ ಲಭ್ಯವಿದೆ. ಎಂಓಪಿ ರಸಗೊಬ್ಬರದ ಅಗತ್ಯ 2.97 ಲಕ್ಷ ಟನ್ ಇದ್ದರೆ ಲಭ್ಯವಿರುವುದು 10.9 ಲಕ್ಷ ಟನ್. ಉಳಿದಂತೆ 8.27 ಲಕ್ಷ ಟನ್ ಎನ್ಪಿಕೆಎಸ್ ರಸಗೊಬ್ಬರ ಅಗತ್ಯವಿದೆ. ಆದರೆ 37.45 ಲಕ್ಷ ಟನ್ ಲಭ್ಯವಿದೆ. ಕರ್ನಾಟಕದ ಅವಶ್ಯಕತೆ (ಎಲ್ಲ ನಮೂನೆಯ ರಸಗೊಬ್ಬರ) 6.36 ಲಕ್ಷ ಟನ್ನಾದರೆ ಲಭ್ಯವಿರುವ ದಾಸ್ತಾನು 16.29 ಲಕ್ಷ ಎಂದು ಸದಾನಂದ ಗೌಡ ವಿವರಿಸಿದರು.

ಹಿನ್ನೆಲೆ:

ಫಾಸ್ಫಾಟಿಕ್ ಮತ್ತು ಪೊಟಾಸ್ಸಿಕ್ (ಪಿ & ಕೆ) ರಸಗೊಬ್ಬರಗಳ ಗರಿಷ್ಠ ಮಾರಾಟ ದರವನ್ನು (ಎಂ.ಎಸ್.ಪಿ) ನಿಗದಿ ಮಾಡುವ ಅಥವಾ ನಿಯಂತ್ರಿಸುವ ಅಧಿಕಾರ ಕೇಂದ್ರದ ಬಳಿ ಇಲ್ಲ. ಇದಕ್ಕೆ ಬೇಕಾದ ಕಚ್ಚಾವಸ್ತುಗಳು ಹಾಗೂ ಸಿದ್ದವಸ್ತುಗಳನ್ನು ಬಹುತೇಕವಾಗಿ (ಶೇ 90ಕ್ಕಿಂತ ಹೆಚ್ಚು) ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅವುಗಳ ಬೆಲೆಯ ಆಧಾರದ ಮೇಲೆ ಇಲ್ಲಿನ ಆಮದುಗಾರರು, ಉತ್ಪಾದಕರು ಭಾರತದಲ್ಲಿ ಅವುಗಳ ಬೆಲೆಯನ್ನು ನಿರ್ಧರಿಸುತ್ತಾರೆ. ಇತ್ತೀಚಿನ ತಿಂಗಳುಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಿಎಪಿ ಮತ್ತು ಅದರ ಕಚ್ಚಾ ವಸ್ತುಗಳಾದ ಫಾಸ್ಫಾರಿಕ್ ಆಸಿಡ್, ಅಮೊನಿಯ ಮತ್ತು ಸಲ್ಫರ್’ನ ದರದಲ್ಲಿ ಶೇಕಡಾ 60ರಿಂದ 70ರಷ್ಟು ಹೆಚ್ಚಳವಾಗಿದೆ.
ಭಾರತದಲ್ಲಿ ಮಾರ್ಚ್’ವರೆಗೆ ಸಬ್ಸಿಡಿಯ ನಂತರ 50 ಕೆಜಿ ಚೀಲವೊಂದಕ್ಕೆ ಡಿಎಪಿ ದರ 1200 ರೂ ಇತ್ತು. ಆದರೆ ಏಪ್ರಿಲ್ ವೇಳೆಗೆ 1900 ರೂಗೆ ಏರಿಕೆಯಾಯಿತು. ಇದೇ ಹಿನ್ನೆಲೆಯಲ್ಲಿ ಕೇಂದ್ರವು 14,775 ರೂ ಹೆಚ್ಚುವರಿ ಸಬ್ಸಿಡಿ ನೀಡಿ ರೈತರಿಗೆ ಹಳೆ ದರಕ್ಕೇ ಗೊಬ್ಬರ ಸಿಗುವಂತೆ ಮಾಡಿದೆ.

ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್ ಬ್ಯೂರೋ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English