ಚಿತ್ರರಂಗದ ಕಾರ್ಮಿಕರಿಗೂ ಪ್ಯಾಕೇಜ್ ಘೋಷಿಸಲು ಸಿಎಂಗೆ ಮನವಿ

10:04 PM, Friday, May 21st, 2021
Share
1 Star2 Stars3 Stars4 Stars5 Stars
(No Ratings Yet)
Loading...

KFCCಬೆಂಗಳೂರು : ಕೋವಿಡ್ ನಿಂದಾಗಿ ಲಾಕ್ ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ ಚಿತ್ರರಂಗದ ಕಾರ್ಮಿಕರು, ತಂತ್ರಜ್ಞರು, ಸಹ ಹಾಗೂ ಸಹಾಯಕ ನಿರ್ದೇಶಕರಿಗೂ ಸರ್ಕಾರ ಪ್ಯಾಕೇಜ್ ಘೋಷಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಇಂದು ಮುಖ್ಯಮಂತ್ರಿಗಳನ್ನ ಭೇಟಿ ಮಾಡಿದ ಚಲನಚಿತ್ರ ಕಾರ್ಮಿಕ ಒಕ್ಕೂಟದ ಗೌರವಾಧ್ಯಕ್ಷ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ ರಾ ಗೋವಿಂದು, ವಾಣಿಜ್ಯ ಮಂಡಳಿಯ ಗೌರವ ಕಾರ್ಯದರ್ಶಿ ಎನ್ ಎಂ ಸುರೇಶ್, ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಹಾಗೂ ನಟಿ ತಾರಾ ಅನುರಾಧಾ ಮುಖ್ಯಮಂತ್ರಿಗಳನ್ನ ಭೇಟಿ ಮಾಡಿ ಚಿತ್ರರಂಗದಲ್ಲಿ ತೆರೆಮರೆಯಲ್ಲಿ ಕಾರ್ಯನಿರ್ವಹಿಸುವ ಸುಮಾರು 18 ಸಾವಿರ ಜನರಿದ್ದಾರೆ. ಅವರಿಗೂ ಸರ್ಕಾರ ಸಹಾಯ ಹಸ್ತ ಚಾಚಬೇಕು ಎಂದು ಕೋರಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ವಾಣಿಜ್ಯ ಮಂಡಳಿಯ ಗೌರವ ಕಾರ್ಯದರ್ಶಿ ಎನ್ ಎಂ ಸುರೇಶ್,”ಲಾಕ್ ಡೌನ್ ನಿಂದಾಗಿ ಚಿತ್ರ ನಿರ್ಮಾಣದ ಚಟುವಟಿಕೆಗಳು ಸಂಪೂರ್ಣವಾಗಿ ಸ್ತಬ್ಧಗೊಂಡಿವೆ. ಹೀಗಾಗಿ ಸಾವಿರಾರು ತಂತ್ರಜ್ಞರು, ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಸರ್ಕಾರ ಹಲವು ವಲಯಗಳಿಗೆ ರೂ. 1250 ಕೋಟಿಗೂ ಅಧಿಕ ಮೊತ್ತದ ಪ್ಯಾಕೇಜ್ ಘೋಷಿಸಿದೆ. ಇದಕ್ಕಾಗಿ ಮುಖ್ಯಮಂತ್ರಿಗಳಿಗೆ ಧನ್ಯವಾದಗಳನ್ನ ಸಲ್ಲಿಸುತ್ತೇನೆ. ಅದರಂತೆ ನಮ್ಮ ಸಿನಿಮಾ ರಂಗದ ತಂತ್ರಜ್ಞರಿಗೂ ಸರ್ಕಾರ ಆರ್ಥಿಕ ನೆರವು ನೀಡಬೇಕು. ಅವರ ಹಿತ ಕಾಪಾಡಬೇಕು”, ಎಂದು ವಿನಂತಿಸಿಕೊಂಡಿದ್ದೇವೆ ಎಂದರು.

ಒಕ್ಕೂಟದ ಗೌರವಾಧ್ಯಕ್ಷ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ ರಾ ಗೋವಿಂದು ಮಾತನಾಡಿ, “ಚಿತ್ರರಂಗದ ತಂತ್ರಜ್ಞರು ಸೇರಿದಂತೆ ಹಲವರು ಕಷ್ಟದಲ್ಲಿದ್ದಾರೆ. ನಿರ್ಮಾಪಕರು ಕೂಡಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳಿಗೆ ನೆರವು ನೀಡಲು ಮನವಿ ಮಾಡಿಕೊಂಡಿದ್ದೇವೆ. ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕೂಡಲೇ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಈ ಸಮಯದಲ್ಲಿ ಸರ್ಕಾರ ನಮ್ಮವರ ಸಹಾಯಕ್ಕೆ ಬಂದರೆ ನಾವು ಅಭಾರಿಯಾಗಿರುತ್ತೇವೆ”, ಎಂದು ತಿಳಿಸಿದರು.

ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್‌ ಬ್ಯೂರೋ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English