ಸೋಂಕಿನಿಂದ ಸಾವನ್ನಪ್ಪಿದವರ ಅಸ್ಥಿಯನ್ನ 15 ದಿನಗಳೊಳಗೆ ಪಡೆದುಕೊಳ್ಳದಿದ್ದರೆ ಸರ್ಕಾರದಿಂದಲೇ ವಿಸರ್ಜನೆ

7:34 PM, Saturday, May 22nd, 2021
Share
1 Star2 Stars3 Stars4 Stars5 Stars
(5 rating, 1 votes)
Loading...

R Ashoka ಬೆಂಗಳೂರು : ಕೋವಿಡ್ ಸೋಂಕಿನಿಂದ ಪ್ರಾಣ ಕಳೆದುಕೊಂಡವರ ಅಂತಿಮ ಕ್ರಿಯೆಯ ನಂತರದಲ್ಲಿ ಸಾವಿರಾರು ಜನರ ಅಸ್ಥಿಗಳು ಹಿಂಪಡೆಯದೆ ಚಿತಾಗಾರದಲ್ಲಿ ಹಾಗೇ ಉಳಿದುಕೊಂಡಿವೆ. ಇಂಥಹ ಚಿತಾಭಸ್ಮವನ್ನ 15 ದಿನಗಳ ನಂತರ ಸರ್ಕಾರವೇ ಗೌರವಪೂರ್ವಕವಾಗಿ ವಿಸರ್ಜನೆ ಮಾಡಲಿದೆ ಎಂದು ಕಂದಾಯ ಸಚಿವ ಆರ್ ಅಶೋಕ ತಿಳಿಸಿದ್ದಾರೆ.

ಈ ಕುರಿತಂತೆ ಮಾಹಿತಿ ನೀಡಿದ ಸಚಿವ ಆರ್ ಅಶೋಕ,”ನಾನಾ ಕಾರಣಗಳಿಂದ ಸೋಂಕಿನಿಂದ ಸಾವನ್ನಪ್ಪಿದವರ ಚಿತಾಭಸ್ಮವನ್ನ ಅವರ ಕುಟುಂಬಸ್ಥರು ಇಂದಿಗೂ ಚಿತಾಗಾರದಿಂದ ತೆಗದುಕೊಂಡು ಹೋಗಿಲ್ಲ. ಈಗಾಗಲೇ ಸಾವಿರಕ್ಕೂ ಅಧಿಕ ಅಸ್ಥಿಗಳು ಚಿತಾಗಾರಗಳಲ್ಲಿ ಉಳಿದುಕೊಂಡಿವೆ. ಸಾಮಾನ್ಯವಾಗಿ ಒಂದೆರಡು ದಿನಗಳ ನಂತರ ಅವರ ಸಂಬಂಧಿಗಳು ಬಂದು ಅಸ್ಥಿ ತೆಗೆದುಕೊಂಡು ಹೋಗುತ್ತಾರೆ. ಆದರೆ ಕೆಲ ಪ್ರಕರಣಗಳಲ್ಲಿ ಹಲವು ದಿನಗಳಿಂದ ಸಂಬಂಧಿಸಿದವರು ಬರದೆ ಅನೇಕ ಅಸ್ಥಿಗಳು ಚಿತಾಗಾರಗಳಲ್ಲಿ ಹಾಗೇ ಉಳಿದುಕೊಂಡಿವೆ. ಈಗಾಗಲೇ ಸಂಬಂಧಿಸಿದವರನ್ನ ಕರೆ ಮಾಡಿ ಸಂಪರ್ಕಿಸಲು ಪ್ರಯತ್ನಿಸಲಾಗಿದ್ದು, ಅವರ ಫೋನ್ ನಂಬರ್ ಸ್ವಿಚ್ ಆಫ್ ಆಗಿವೆ. ಹೀಗಾಗಿ ಆ ಚಿತಾಭಸ್ಮವನ್ನ ಸರ್ಕಾರವೇ ಗೌರವಪೂರ್ವಕವಾಗಿ ವಿಸರ್ಜನೆ ಮಾಡುವ ನಿರ್ಧಾರ ಮಾಡಿದೆ”, ಎಂದು ತಿಳಿಸಿದರು.

ಈ ಕುರಿತಂತೆ ಗಡುವು ನಿಗದಿಪಡಿಸಿದ್ದರ ಕುರಿತು ಮಾತನಾಡಿದ ಸಚಿವರು,”ಇನ್ನು ಮುಂದೆ ಸಂಬಂಧಿಸಿದವರ ಅಸ್ಥಿಗಳನ್ನ 15 ದಿನಗಳ ಕಾಲ ಕುಟುಂಬಸ್ಥರಿಗೆ ಹಸ್ತಾಂತರಿಸುವದಕ್ಕಾಗಿ ಕಾಯ್ದಿರಿಸಲಾಗುತ್ತದೆ. ಅಷ್ಟರೊಳಗೆ ಸಂಬಂಧಪಟ್ಟವರು ಬಂದು ತೆಗೆದುಕೊಂಡು ಹೋಗದಿದ್ದಲ್ಲಿ, ಅವರ ಪರವಾಗಿ ಸರ್ಕಾರವೇ ವಿಧಿವತ್ತಾಗಿ ಆ ಅಸ್ಥಿಗಳನ್ನ ನೀರಿನಲ್ಲಿ ವಿಸರ್ಜಿಸುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಹೀಗಾಗಿ 15 ದಿನಗಳೊಳಗೆ ಬಂದು ತಮ್ಮವರ ಚಿತಾಭಸ್ಮವನ್ನ ಪಡೆದುಕೊಂಡು ಹೋಗಬೇಕು,” ಎಂದು ಮನವಿ ಮಾಡಿಕೊಂಡಿದ್ದಾರೆ.

ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್‌ ಬ್ಯೂರೋ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English