ಪತ್ನಿ ಸಾವಿನ ನಾಲ್ಕೇ ದಿನದಲ್ಲಿ, ಸ್ಯಾಕ್ಸೊಫೋನ್ ಕಲಾವಿದ ಮಚ್ಚೇಂದ್ರನಾಥ್ ಜೋಗಿ ಮೃತ್ಯು

6:59 PM, Sunday, May 23rd, 2021
Share
1 Star2 Stars3 Stars4 Stars5 Stars
(8 rating, 2 votes)
Loading...

Machendranath ಮಂಗಳೂರು : ಮಂಗಳಾದೇವಿ ದೇವಸ್ಥಾನದಲ್ಲಿ ಸುಮಾರು ಮೂವತ್ತ ನಾಲ್ಕು ವರ್ಷಗಳಿಂದ ಸ್ಯಾಕ್ಸೊಫೋನ್ ಕಲಾವಿದ ರಾಗಿದ್ದ, ಅಂತರರಾಷ್ಟ್ರೀಯ ಸ್ಯಾಕ್ಸೊಫೋನ್ ಕಲಾವಿದ ಮಚ್ಚೇಂದ್ರನಾಥ್ ಜೋಗಿ ಅವರು ಕೊರೋನಾ ಸೋಂಕು ಬಾಧಿತರಾಗಿ ಭಾನುವಾರ ಮದ್ಯಾಹ್ನ ನಿಧನರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು.

ಅವರ ಪತ್ನಿ ಸುಶೀಲಾ ಮಚ್ಚೇಂದ್ರನಾಥ್ ಅವರು ನಾಲ್ಕು ದಿನದ ಹಿಂದೆ ಮೇ 19ರಂದು ಕೊರೋನಾ ಸೋಂಕಿಗೆ ತುತ್ತಾಗಿ ಮೃತರಾಗಿದ್ದರು. ಗಂಡ ಹೆಂಡತಿ ಇಬ್ಬರು ಕೊರೋನಾ ಸೋಂಕು ಕಾಣಿಸಿಕೊಂಡು ದೇರಳಕಟ್ಟೆಯ ಕೆ.ಯಸ್ ಹೆಗ್ಡೆ ಆಸ್ಪತ್ರೆಯಲ್ಲಿ ಮೇ  ಮೊದಲ ವಾರದಿಂದ  ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಬುಧವಾರ ಹೆಂಡತಿ ಕೊನೆಯುಸಿರೆಳೆದಿದ್ದರು. ಮಚ್ಚೇಂದ್ರನಾಥ್ ತೀವ್ರ ನಿಗಾ ಘಟಕದಲ್ಲಿದ್ದು ಕೊರೋನಾದ ಜೊತೆ ಡಯಾಬಿಟಿಸ್ ಮತ್ತು ಕಿಡ್ನಿ ಸಮಸ್ಯೆಯನ್ನು ಎದುರಿಸುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ  ಭಾನುವಾರ ಮೇ 23 ರಂದು ಮದ್ಯಾಹ್ನ ನಿಧನರಾಗಿದ್ದಾರೆ.

Machendranath ಮೃತರು ಪುತ್ತೂರಿನ ಕಲ್ಲಾರೆಯವರಾಗಿದ್ದು 1955 ರಲ್ಲಿ ಜನಿಸಿದ್ದರು. ತಂದೆ ಬಾಬು ಮತ್ತು ಸಹೋದರ ಹರಿಶ್ಚಂದ್ರ ಅವರಿಂದ ಸಂಗೀತಾಭ್ಯಾಸ ಮಾಡಿ ಹತ್ತೊಂಬತ್ತರ ಹರೆಯದಲ್ಲಿಯೇ ಸ್ಯಾಕ್ಸೊಫೋನ್ ಕಲಾವಿದರಾಗಿದ್ದರು.

ಮಚ್ಚೇಂದ್ರನಾಥ್ ಅವರಿಗೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಕಲಾರತ್ನ ಪ್ರಶಸ್ತಿ, ಕಲಾಶ್ರೀ ರಾಜ್ಯ ಪ್ರಶಸ್ತಿ, ಕನ್ನಡ ರತ್ನ ರಾಜ್ಯ ಪ್ರಶಸ್ತಿ, ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ, ಬಸವ ಜ್ಯೋತಿ ಪ್ರಶಸ್ತಿ, ಅರ್ರ್ಯಭಟ ಪ್ರಶಸ್ತಿ, ಸಮಾಜ ರತ್ನ ಪ್ರಶಸ್ತಿ, ದೇವರ ದಾಸಿಮಯ್ಯ ರಾಷ್ಟೀಯ ರತ್ನ ಪ್ರಶಸ್ತಿ, ಸೌರಭ ಪ್ರಶಸ್ತಿ, ಸಾಧನ ಪ್ರಶಸ್ತಿ, ಚೈತನ್ಯ ಶ್ರೀ ಪ್ರಶಸ್ತಿ, ಕರ್ನಾಟಕ ಪದ್ಮಶ್ರೀ ಪ್ರಶಸ್ತಿ ಮೊದಲಾದವು ಲಭಿಸಿದೆ.

ಇವರ ಪತ್ನಿ ಸುಶೀಲ ಸ್ವತಃ ಸಂಗೀತ ಕಲಾವಿದೆಯಾಗಿದ್ದರು. ಮಗಳು ಸಿಂಧೂ ಭೈರವಿ ಅಂತರರಾಷ್ಟ್ರೀಯ ಸ್ಯಾಕ್ಸೊಫೋನ್ ಕಲಾವಿದೆಯಾಗಿದ್ದಾಳೆ. ಆಕೆ ಆಸ್ಟ್ರೇಲಿಯಾದಲ್ಲಿ ಗಂಡನ ಜೊತೆ ನೆಲೆಸಿದ್ದಾರೆ. ಮಗ ಲಕ್ಷ್ಮಿ ಚರಣ್ ಕೂಡ ಸಂಗೀತ ಕಲಾವಿದರಾಗಿದ್ದಾರೆ.

ಮೃತರು ಮಗ, ಮಗಳು ಹಾಗೂ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ.

ಮಚ್ಚೇಂದ್ರನಾಥ್ ನಿಧನಕ್ಕೆ ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ಸಂತಾಪ ಸೂಚಿಸಿದೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English