ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದವರ ಅಸ್ಥಿ ವಿಸರ್ಜನೆಗೆ ತೆರಳುವವರನ್ನ ಮಾರ್ಗ ಮಧ್ಯೆ ಯಾರು ತಡೆಯದ ಕುರಿತಂತೆ ಸರ್ಕಾರ ಆದೇಶ ಹೊರಡಿಸಿದೆ.
ಈ ಕುರಿತಂತೆ ಮಾಹಿತಿ ನೀಡಿದ ಕಂದಾಯ ಸಚಿವ ಹಾಗೂ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷ ಆರ್ ಅಶೋಕ, “ಸೋಂಕಿನಿಂದ ಮರಣ ಹೊಂದಿದವರ ಅಸ್ಥಿಯನ್ನು ಸಂಬಂಧಿಗಳು ತಮ್ಮಿಷ್ಟದ ಸ್ಥಳದಲ್ಲಿ ವಿಸರ್ಜನೆ ಮಾಡುವುದಕ್ಕೆ ಅನುಮತಿ ನೀಡಲಾಗಿದೆ. ಈಗಾಗಲೇ ಕುಟುಂಬಸ್ಥರಿಗೆ ಅಸ್ಥಿ ವಿಸರ್ಜನೆ ಮಾಡಲು ತೆರಳುವ ಮಾರ್ಗ ಮಧ್ಯೆ ಹಾಗೂ ವಿಸರ್ಜನೆಯ ಸ್ಥಳದಲ್ಲಿ ಅಡ್ಡಿಪಡಿಸುತ್ತಿರುವ ಕುರಿತಂತೆ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಈ ಕಾರಣಕ್ಕೆ ಸರ್ಕಾರ ಆದೇಶ ಹೊರಡಿಸಲಾಗಿದ್ದು, ಸಾವನ್ನಪ್ಪಿದವರ ಕುಟುಂಬದವರು ತಮ್ಮಿಷ್ಟದ ಸ್ಥಳದಲ್ಲಿ ಅಸ್ಥಿ ವಿಸರ್ಜನೆ ಮಾಡಲು ಅನುಮತಿಸಲಾಗಿದೆ. ಆದರೆ ಕೇವಲ ನಾಲ್ಕು ಜನ ಮಾತ್ರ ತೆರಳಲು ಅವಕಾಶ ನೀಡಲಾಗಿದ್ದು, ಕೋವಿಡ್ ನಿಯಮಾವಳಿಗಳನ್ನ ಕಡ್ಡಾಯವಾಗಿ ಪಾಲಿಸಬೇಕು. ಈ ವೇಳೆ ಅವರಿಗೆ ಅಧಿಕಾರಿಗಳಾಗಲಿ ಮತ್ತು ಸ್ಥಳಿಯರಾಗಲಿ ಯಾವುದೇ ಕಾರಣಕ್ಕೂ ಅಡ್ಡಿಪಡಿಸುವಂತಿಲ್ಲ. ಈ ಕುರಿತಂತೆ ಈಗಾಗಲೇ ಬಿಬಿಎಂಪಿ ಮುಖ್ಯ ಆಯುಕ್ತರು, ಬೆಂಗಳೂರು ನಗರ ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ವರಿಷ್ಠಾಧಿಕಾರಿಗಳು ಈ ಆದೇಶವನ್ನ ಪಾಲಿಸಲು ತಿಳಿಸಲಾಗಿದೆ” ಎಂದು ಹೇಳಿದರು.
ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್ ಬ್ಯೂರೋ.
Click this button or press Ctrl+G to toggle between Kannada and English