ಬೆಂಗಳೂರು : ಟ್ರಾಫಿಕ್ ಸಮಸ್ಯೆ ದೂರ ಮಾಡುವ ನಿಟ್ಟಿನಲ್ಲಿ ನಗರದಲ್ಲಿ ಮತ್ತೊಂದು ಮೆಟ್ರೋ ಮಾರ್ಗ ಸಾರ್ವಜನಿಕ ಸಂಚಾರಕ್ಕೆ ಲಭ್ಯವಾಗಲಿದ್ದು, ಆ ನಿಟ್ಟಿನಲ್ಲಿ ಇಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಕಾಮಗಾರಿಯ ಪರಿಶೀಲನೆ ನಡೆಸಿದರು.
ಇಂದು ಸಂಪುಟದ ಸಹೋದ್ಯೋಗಿಗಳ ಜೊತೆಗೆ ಹಂತ 2ರ ರೀಚ್ 2 ಮೈಸೂರು ರಸ್ತೆಯ ನಾಯಂಡಹಳ್ಳಿ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ಮೆಟ್ರೋ ನಿಲ್ದಾಣದವರೆಗಿನ ನೂತನ ಮಾರ್ಗದ ಕಾಮಗಾರಿಯನ್ನ ಪರಿವೀಕ್ಷಣೆ ಮಾಡಿದರು. ವಿಧಾನಸೌಧ ಮೆಟ್ರೋ ನಿಲ್ದಾಣದಿಂದ ಖುದ್ದು ಮೆಟ್ರೋ ರೈಲಿನಲ್ಲಿಯೇ ಪ್ರಯಾಣಿಸಿದ ಮುಖ್ಯಮಂತ್ರಿಗಳು ಕೆಂಗೇರಿ ವರೆಗಿನ ಕಾಮಗಾರಿಯ ಸಂಪೂರ್ಣ ಮಾಹಿತಿಯನ್ನ ಪಡೆದರು.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿಗಳು, ” ಜುಲೈ ತಿಂಗಳ ಅಂತ್ಯಕ್ಕೆ ಈ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ. ವಯಾಡಕ್ಟ್, ನಿಲ್ದಾಣದ ಕೆಲಸ, ವಿದ್ಯುತ್ ಕಾಮಗಾರಿ, ಸಿಸ್ಟಮ್ ವರ್ಕ್ ಹಾಗೂ ಟ್ರ್ಯಾಕ್ ಲೈನಿಂಗ್ ಸಂಪೂರ್ಣಗೊಂಡಿದ್ದು, ಈಗಾಗಲೇ ಏಪ್ರಿಲ್ 15ರಿಂದ ಪರೀಕ್ಷಾರ್ಥ ಓಡಾಟ ಕೂಡಾ ಆರಂಭವಾಗಿದೆ. ಈ ಮೂಲಕ ಪ್ರತಿನಿತ್ಯ 75 ಸಾವಿರ ಪ್ರಯಾಣಿಕರಿಗೆ ಪ್ರಯೋಜನವಾಗಲಿದೆ,” ಎಂದು ತಿಳಿಸಿದರು.
ಈ ವೇಳೆ ಕಂದಾಯ ಸಚಿವ ಆರ್ ಅಶೋಕ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ವಸತಿ ಸಚಿವ ವಿ.ಸೋಮಣ್ಣ, ಶಾಸಕ ಎಸ್. ಮುನಿರತ್ನ ಹಾಗೂ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಹಾಗೂ ನಮ್ಮ ಮೆಟ್ರೋ ರೈಲು ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಸಿಂಗ್ ಅವರು ಉಪಸ್ಥಿತರಿದ್ದರು.
ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್ ಬ್ಯೂರೋ.
Click this button or press Ctrl+G to toggle between Kannada and English