ಧಾರವಾಡ: ರಾಜ್ಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವು ಹರಡುತ್ತಿರುವ ಹಿನ್ನಲೆಯಲ್ಲಿ ಜೂನ್ 7 ರ ವರೆಗೆ ಲಾಕ್‍ಡೌನ್ ಮಾಡಲಾಗಿದ್ದು, ಈ ಅವಧಿಯಲ್ಲಿ ವಾರಸುದಾರರಿಲ್ಲದೇ ರಸ್ತೆಯಲ್ಲಿ ಸಂಚರಿಸುವ ದನಗಳಿಗೆ ಮೇವು ಮತ್ತು ನಾಯಿಗಳಿಗೆ ಆಹಾರ ನೀಡಬಯಸುವ ದಾನಿಗಳಿಂದ ಮೇವು, ಆಹಾರ ಸ್ವೀಕರಿಸಲು ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಪ್ರತ್ಯೇಕವಾದ ಎರಡು ಸ್ವೀಕೃತಿ ಕೇಂದ್ರಗಳನ್ನು ಜಿಲ್ಲಾಡಳಿತದಿಂದ ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ದಾನಿಗಳಿಂದ ಮೇವು, ಆಹಾರ ಸ್ವೀಕರಿಸಲು ಧಾರವಾಡ ಮತ್ತು ಹುಬ್ಬಳ್ಳಿ ತಾಲೂಕಿನ ಸ್ವೀಕೃತಿ ಕೇಂದ್ರಗಳನ್ನು ತರೆಯಲಾಗಿದೆ ಮತ್ತು ಕೇಂದ್ರಗಳ ಉಸ್ತುವಾರಿಗಾಗಿ ಅಧಿಕಾರಿಗಳನ್ನು ನೇಮಿಸಲಾಗಿದೆ. ಧಾರವಾಡದಲ್ಲಿರುವ ಪಶು ವೈದ್ಯಕೀಯ ಆಸ್ಪತ್ರೆ ಉಪ ನಿರ್ದೇಶಕರ ಕಚೇರಿ ಆವರಣದಲ್ಲಿ ತೆರೆದಿರುವ ಸ್ವೀಕೃತಿ ಕೇಂದ್ರಕ್ಕೆ, ಪಶು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಎಸ್.ವಿ.ಅರಗಂಜಿ (9242242399), ಜಾನುವಾರು ಅಭಿವೃದ್ಧಿ ಅಧಿಕಾರಿ ಎಸ್.ಬಿ.ನಾಯಕ, ಹಿರಿಯ ಪಶುವೈದ್ಯಕೀಯ ಪರೀಕ್ಷಕ ಪಿ.ಬಿ.ಹೊಸಮನಿ ಅವರನ್ನು ನೇಮಿಸಲಾಗಿದೆ.
ಹುಬ್ಬಳ್ಳಿ ಪಶು ಆಸ್ಪತ್ರೆಯ ಮುಖ್ಯ ಪಶು ವೈದ್ಯಾಧಿಕಾರಿಗಳ ಕಚೇರಿಯ ಆವರಣದಲ್ಲಿ ಸ್ಥಾಪಿಸಿರುವ ಸ್ವೀಕೃತಿ ಕೇಂದ್ರಕ್ಕೆ ಮುಖ್ಯ ಪಶುವೈದ್ಯಾಧಿಕಾರಿ ಡಾ. ಎಸ್.ಬಿ.ಹೊನ್ನಿನಾಯ್ಕರ್ (9448692656), ಹಿರಿಯ ಪಶುವೈದ್ಯಕೀಯ ಪರೀಕ್ಷಕರಾದ ಎಸ್.ಹೆಚ್.ಕೋನರೆಡ್ಡಿ ಹಾಗೂ ಎಸ್.ಎಮ್.ಗೌಡನಾಯ್ಕ ಅವರನ್ನು ನೇಮಿಸಲಾಗಿದೆ. ಮೇವು ಹಾಗೂ ಆಹಾರವನ್ನು ದಾನ ನೀಡುವ ದಾನಿಗಳು ಈ ಅಧಿಕಾರಿಗಳನ್ನು ಸಂಪರ್ಕಿಸಬಹುದೆಂದು ಮತ್ತು ಜಿಲ್ಲಾಡಳಿತ ಸ್ಥಾಪಿಸಿರುವ ಈ ಸ್ವೀಕೃತಿ ಕೇಂದ್ರಗಳಿಗೆ ತಲುಪಿಸಬಹುದೆಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್ ಬ್ಯೂರೋ.
Click this button or press Ctrl+G to toggle between Kannada and English