ಮಂಗಳೂರು : ಸ್ಮಾರ್ಟ್ ಸಿಟಿ ಯೋಜನೆಯಡಿ ನೂತನ ಮಾರುಕಟ್ಟೆಯ ಕಟ್ಟಡ ನಿರ್ಮಾಣಕ್ಕಾಗಿ ನಗರದ ಸೆಂಟ್ರಲ್ ಮಾರುಕಟ್ಟೆಯ ಈಗಿರುವ ಕಟ್ಟಡವನ್ನು ಬುಧವಾರ ಮೇ 26 ರಂದು ನೆಲಸಮ ಮಾಡಲಾಯಿತು.
ಸುಮಾರು 55 ವರ್ಷಗಳ ಹಿಂದೆ ನಿರ್ಮಿಸಲ್ಪಟ್ಟ ಸೆಂಟ್ರಲ್ ಮಾರುಕಟ್ಟೆಯ ಕಟ್ಟಡ ಪೊಲೀಸ್ ಬಂದೋಬಸ್ತ್‌ನಲ್ಲಿ ಜೆಸಿಬಿ ಬಳಸಿಕೊಂಡು ಬುಧವಾರ ಪೂರ್ವಾಹ್ನ ಸುಮಾರು 11 ಗಂಟೆಗೆ ಒಳಗಿನ ಕಟ್ಟಡವನ್ನು ನೆಲಸಮ ಮಾಡಲಾಯಿತು.
ಯಾರೂ ಒಳಗೆ ಪ್ರವೇಶಿದಂತೆ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದರು. ಈ ಮಧ್ಯೆ ವಿಷಯ ತಿಳಿದ ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಮುಖಂಡರು, ಮನಪಾದ ವಿಪಕ್ಷ ನಾಯಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಸೆಂಟ್ರಲ್ ಮಾರುಕಟ್ಟೆಗೆ ಹೊಸ ವಿನ್ಯಾಸ ಕೊಡಲು ಮಂಗಳೂರು ಮಹಾನಗರ ಪಾಲಿಕೆಯು 11 ವರ್ಷದ ಹಿಂದೆಯೇ ಪ್ರಯತ್ನಿಸಿತ್ತು. ಆವಾಗ ಕೃಷ್ಣ ಜೆ.ಪಾಲೆಮಾರ್ ದ.ಕ.ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರು. ಆದರೆ ನಾನಾ ಕಾರಣದಿಂದ ಅದು ನನೆಗುದಿಗೆ ಬಿದ್ದಿತ್ತು.
ಮಂಗಳೂರು ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಮುಖಂಡರು ಮನಪಾ ಹಾಗೂ ಜಿಲ್ಲಾಡಳಿತದ ವಿರುದ್ಧ ಹೈಕೋರ್ಟ್‌ನ ಮೊರೆ ಹೊಕ್ಕಿದ್ದರು. ಕಳೆದೊಂದು ವರ್ಷದಿಂದ ಬಂದ್ ಆಗಿದ್ದ ಸೆಂಟ್ರಲ್ ಮಾರುಕಟ್ಟೆಯು ಇದೀಗ ಸಂಪೂರ್ಣವಾಗಿ ನೆಲಸಮವಾಗಿದೆ. ಇದರಿಂದ ಇಲ್ಲಿನ 151 ಸಗಟು ಮತ್ತು 337 ಚಿಲ್ಲರೆ ವ್ಯಾಪಾರಿಗಳು, ಅಂಗಡಿಗಳ ಕೆಲಸಗಾರರು, ತಲೆಹೊರೆ ಹಾಗೂ ಕೂಲಿ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ.
ಹೊರಗಿನ ಕಟ್ಟಡದಲ್ಲಿ 13-14 ವ್ಯಾಪಾರಿಗಳ ಸಾಮಗ್ರಿಗಳಿವೆ. ಗುರುವಾರ ಬೆಳಗ್ಗೆ 6ರಿಂದ 9ರೊಳಗೆ ತಮ್ಮ ಸಾಮಗ್ರಿಗಳನ್ನು ಖಾಲಿ ಮಾಡುವಂತೆ ಅವರಿಗೆ ತಿಳಿಸಲಾಗಿದೆ. ಆ ಬಳಿಕ ಮಾರುಕಟ್ಟೆಯ ಹೊರಗಿನ ಕಟ್ಟಡವನ್ನೂ ಕೆಡವಲಾಗುವುದು ಎಂದು ಪಾಲಿಕೆ ಆಯುಕ್ತರು ಹೇಳಿದ್ದಾರೆ.
Click this button or press Ctrl+G to toggle between Kannada and English