ಚಿಕ್ಕಮಗಳೂರು : ಆತ ಪ್ರಾಣ ಉಳಿಸಿಕೊಳ್ಳಲು ವಿಲವಿಲ ಎಂದು ಒದ್ದಾಡುತ್ತಿದ್ದಾಗ, ಅದೇ ದಾರಿಯಲ್ಲಿ ಹೋಗುತ್ತಿದ್ದ ಶಾಸಕ ಕ್ಯಾರೇ ಅನ್ನದೆ ಅಲ್ಲಿಂದ ಕಾಲ್ಕಿತ್ತ ಅಮಾನವೀಯ ಘಟನೆ ತರೀಕೆರೆಯ ಲಕ್ಕವಳ್ಳಿ ಕ್ರಾಸ್ ಬಳಿ ಬುಧವಾರ ಬೆಳಿಗ್ಗೆ ನಡೆದಿದೆ.
ಕೊರೋನಾ ಡ್ಯೂಟಿ ಮುಗಿಸಿ ತೆರಳುತ್ತಿದ್ದ ಹಿರಿಯ ಆರೋಗ್ಯಾಧಿಕಾರಿಗೆ ತರೀಕೆರೆಯ ಲಕ್ಕವಳ್ಳಿ ಕ್ರಾಸ್ ಬಳಿ ಅಪಘಾತವಾಗಿತ್ತು. ಆರೋಗ್ಯಾಧಿಕಾರಿ ರಮೇಶ್ ಅವರ ಬೈಕ್ಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿತ್ತು. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಲು ಸ್ಥಳೀಯರು ಆ್ಯಂಬುಲೆನ್ಸ್ಗೆ ಫೋನ್ ಮಾಡಿದ್ದರು. ಆದರೂ ಆ್ಯಂಬುಲೆನ್ಸ್ ಬಂದಿರಲಿಲ್ಲ. ಅಷ್ಟರಲ್ಲಿ ಅದೇ ಮಾರ್ಗದಲ್ಲಿ ಬಂದ ತರೀಕೆರೆ ಬಿಜೆಪಿ ಶಾಸಕ ಡಿ.ಎಸ್. ಸುರೇಶ್ ಆರೋಗ್ಯಾಧಿಕಾರಿ ರಮೇಶ್ಗೆ ಸಹಾಯ ಮಾಡಲು ಕಾರಿನಿಂದ ಕೆಳಗೆ ಇಳಿಯದೆ ಹಾಗೆ ಹೊರತು ಹೋಗಿದ್ದಾರೆ.
ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲಿ ರಕ್ತದ ಮಡುವಿನಲ್ಲೇ ಒದ್ದಾಡಿದ ಕೊರೋನಾ ವಾರಿಯರ್ ಆರೋಗ್ಯಾಧಿಕಾರಿ ನೋವಿನಿಂದ ನರಳಾಡುತ್ತಿದ್ದರೂ ಶಾಸಕ ಸುರೇಶ್ ಸಹಾಯ ನೀಡಲಿಲ್ಲ.
ಅಪಘಾತ ಸಂಭವಿಸಿ ಅರ್ಧ ಗಂಟೆಯ ಬಳಿಕ ಆ್ಯಂಬುಲೆನ್ಸ್ನಲ್ಲಿ ಅವರನ್ನು ಶಿವಮೊಗ್ಗಕ್ಕೆ ರವಾನೆ ಮಾಡಲಾಯಿತು. ಆದರೆ, ತೀವ್ರ ರಕ್ತಸ್ರಾವದಿಂದ ಮಾರ್ಗಮಧ್ಯೆ ಆರೋಗ್ಯಾಧಿಕಾರಿ ರಮೇಶ್ ಸಾವನ್ನಪ್ಪಿದ್ದಾರೆ. ಮಾನವೀಯತೆ ಮರೆತು ದರ್ಪ ತೋರಿದ ತರೀಕೆರೆ ಶಾಸಕರ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
Click this button or press Ctrl+G to toggle between Kannada and English