ಸೋಂಕಿನ ಪ್ರಮಾಣ ಇಳಿಸಲು ಗ್ರಾ.ಪಂ. ಕಾರ್ಯಪಡೆಗಳನ್ನು ಮತ್ತಷ್ಟು ಬಲಪಡಿಸಲು ಕ್ರಮ ಕೈಗೊಳ್ಳಿ : ಸಿಎಂ

6:49 PM, Friday, May 28th, 2021
Share
1 Star2 Stars3 Stars4 Stars5 Stars
(No Ratings Yet)
Loading...

Tumkuru Covid  ಬೆಂಗಳೂರು / ತುಮಕೂರು : ಗ್ರಾಮೀಣ ಪ್ರದೇಶಗಳಲ್ಲಿಯೂ ಹೆಚ್ಚಾಗಿ ಹರಡುತ್ತಿರುವ ಕೋವಿಡ್19 ಎರಡನೇ ಅಲೆ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡುವುದರೊಂದಿಗೆ ಹಳ್ಳಿಗಳ ಕೋವಿಡ್ ನಿರ್ವಹಣೆಗೆ ಗ್ರಾಮ ಪಂಚಾಯ್ತಿ ಕಾರ್ಯಪಡೆಗಳನ್ನು ಮತ್ತಷ್ಟು ಬಲಪಡಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜಿಲ್ಲಾಡಳಿತಕ್ಕೆ ಸೂಚಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಕೋವಿಡ್-19 ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸೋಂಕಿನ ಪಾಸಿಟಿವ್ ಪ್ರಮಾಣದ ಇಳಿಕೆಗೂ ಸೂಚನೆ ನೀಡಿದರು.

ಕೋವಿಡ್ 19 ಎರಡನೇ ಅಲೆ ರಾಜ್ಯವನ್ನು ತೀವ್ರವಾಗಿ ಬಾಧಿಸಿದೆ. ಬೆಂಗಳೂರಿನ ನೆರೆಯ ಜಿಲ್ಲೆಯಾದ ತುಮಕೂರಿನಲ್ಲಿಯೂ ಪರಿಸ್ಥಿತಿ ಗಂಭೀರವಾಗಿತ್ತು. ಸಮರ್ಪಕ ನಿರ್ವಹಣೆಯಿಂದ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದ್ದು, ಸುಧಾರಣೆ ಕಂಡುಬಂದಿದೆ ಎಂದರು.

ಜಿಲ್ಲೆಯಲ್ಲಿ ಕಳೆದ ಏಪ್ರಿಲ್ ಮಾಹೆಯಲ್ಲಿ 18,749 ಕೋವಿಡ್ ಪ್ರಕರಣ ದೃಢವಾಗಿದ್ದು, 131 ಮಂದಿ ಮೃತಪಟ್ಟಿದ್ದಾರೆ. ಅದೇ ರೀತಿ ಮೇ ಮಾಹೆಯಲ್ಲಿ 48,643 ಪ್ರಕರಣಗಳು ದೃಢಪಟ್ಟಿದ್ದು, 314 ಮಂದಿ ಮೃತಪಟ್ಟಿರುವುದು ವರದಿಯಾಗಿದೆ. ಏಪ್ರಿಲ್ ತಿಂಗಳಿಗಿಂತಲೂ ಮೇ ತಿಂಗಳಲ್ಲಿ ಪ್ರಕರಣಗಳ ಸಂಖ್ಯೆ ಹಾಗೂ ಮರಣದ ಸಂಖ್ಯೆ ಹೆಚ್ಚಾಗಿದ್ದು, ಜನರ ಜೀವ ಉಳಿಸಲು ಸಹ ಆದ್ಯತೆ ನೀಡಬೇಕಾಗಿದೆ ಎಂದು ನಿರ್ದೇಶಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರ ನೇತೃತ್ವದಲ್ಲಿ ಜಿಲ್ಲಾಡಳಿತ ಸತತ ಪ್ರಯತ್ನ ನಡೆಸಿದ್ದರ ಫಲವಾಗಿ ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿ ಸುಧಾರಿಸುತ್ತಿರುವುದು ಸಮಾಧಾನ ತಂದಿದೆ. ಆರಂಭದಲ್ಲಿ ಶೇ.45 ರಷ್ಟಿದ್ದ ಸೋಂಕಿನ ಪ್ರಮಾಣ ಹಂತ ಹಂತವಾಗಿ ಇಳಿಕೆಯಾಗಿ ಪ್ರಸ್ತುತ ಶೇ.25ಕ್ಕೆ ಇಳಿದಿದೆ. ಪೂರ್ಣ ಪ್ರಮಾಣದಲ್ಲಿ ಸೋಂಕಿನ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. . ಸಂಘಟಿತ, ಸಾಮೂಹಿಕ ಪ್ರಯತ್ನದಿಂದ ಇದನ್ನು ಸಾಧಿಸಬೇಕು ಎಂದು ನಿರ್ದೇಶಿಸಿದರು.

ಕೋವಿಡ್ ಪರೀಕ್ಷೆಗಳನ್ನೂ ಹೆಚ್ಚಾಗಿ ನಡೆಸಬೇಕಾಗಿದೆ. ಇದಕ್ಕಾಗಿ ನಿನ್ನೆಯಷ್ಟೇ ಸಂಸ್ಥೆಗಳ ಸಹಕಾರದೊಂದಿಗೆ ಸಂಚಾರಿ ಪರೀಕ್ಷಾ ಪ್ರಯೋಗಾಲಯಗಳಿಗೆ ಚಾಲನೆ ನೀಡಲಾಗಿದೆ. ಜಿಲ್ಲೆಯ ಶಿರಾ ತಾಲೂಕಿನಲ್ಲಿ ಮುಂದಿನ ವಾರದಲ್ಲಿ ಪ್ರಾರಂಭವಾಗುವ ನಿರೀಕ್ಷೆ ಇದೆ. ಇದರಿಂದಾಗಿ ಜಿಲ್ಲೆಯಲ್ಲಿ ಪರೀಕ್ಷಾ ವರದಿಗಳನ್ನು ಬೇಗನೆ ಪಡೆಯಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಈವರೆಗೂ 415776 ಮಂದಿಗೆ ಮೊದಲ ಡೋಸ್ ಹಾಗೂ 1,13,781 ಮಂದಿಗೆ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದ್ದು, ಮೊದಲನೇ ಡೋಸ್ ಲಸಿಕೆ ಪಡೆದವರಿಗೆ ಎರಡನೇ ಡೋಸ್ ಲಸಿಕೆ ನೀಡಲು ಆದ್ಯತೆ ನೀಡಬೇಕುಮ. ಲಭ್ಯತೆ ಆಧಾರದಲ್ಲಿ ಎಲ್ಲಾ ಅರ್ಹರಿಗೂ ಲಸಿಕೆ ನೀಡಲು ಕ್ರಮಕೈಗೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಒಟ್ಟು 566 ಆಕ್ಸಿಜನ್ ಕಾನ್ಸೆಂಟ್ರೇಟರ್ಸ್‍ಗಳು ಲಭ್ಯವಿದ್ದು, 300 ಆಕ್ಸಿಜನ್ ಕಾನ್ಸೆಂಟ್ರೇಟರ್ಸ್ ಗಳನ್ನು ಹಂಚಿಕೆ ಮಾಡಲು ಬಾಕಿ ಇರುತ್ತದೆ. ಬಾಕಿ ಇರುವ ಆಕ್ಸಿಜನ್ ಕಾನ್ಸೆಂಟ್ರೇಟರ್ಸ್‍ಗಳು ಕೂಡಲೇ ಹಂಚಿಕೆ ಮಾಡಲು ಕ್ರಮಕೈಗೊಳ್ಳಿ ಎಂದು ಸೂಚಿಸಿದರು.

ಸರ್ಕಾರದೊಂದಿಗೆ ಸಂಘ-ಸಂಸ್ಥೆಗಳು, ಉದ್ಯಮಿಗಳ ನೆರವಿನೊಂದಿಗೆ ಸೋಂಕು ನಿಯಂತ್ರಿಸಬೇಕು. ಗ್ರಾಮೀಣ ಜನರಿಗೆ ಸೋಂಕು ತಗುಲಿದಾಗ ಹೋಂ ಐಸೋಲೇಷಗೆ ಅವರ ಮನೆಯಲ್ಲಿ ಹೆಚ್ಚಿನ ಅನುಕೂಲತೆಗಳು ಇಲ್ಲದಿದ್ದರೆ ಕೋವಿಡ್ ಕೇರ್ ಸೆಂಟರ್ ಗಳಿಗೆ ದಾಖಲಿಸುವುದು ಸೂಕ್ತ. ಈ ನಿಟ್ಟಿನಲ್ಲಿ ಹೆಚ್ಚಿನ ಹೆಜ್ಜೆಯಿಡಬೇಕು. ಜಿಲ್ಲೆಯಲ್ಲಿ ಇಲ್ಲಿವರೆಗೂ ಕೋವಿಡ್ ಪರಿಸ್ಥಿತಿಯನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದೀರಿ, ಮುಂದೆಯೂ ನಿರ್ವಹಿಸುವಿರಿ ಎಂಬ ವಿಶ್ವಾಸ ನನಗಿದೆ. ಸರ್ಕಾರ ನಿಮ್ಮೊಂದಿಗಿದೆ. ನಿಮಗೆ ಕೋವಿಡ್ ನಿಯಂತ್ರಣಕ್ಕೆ ಎಲ್ಲ ರೀತಿಯಲ್ಲೂ ಬೆಂಬಲ ನೀಡುತ್ತೇನೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಕೋವಿಡ್-19 ಎರಡನೇ ಅಲೆ ಆರಂಭದಲ್ಲಿ ಜಿಲ್ಲೆಯಲ್ಲಿ 29ಸಾವಿರ ಸೋಂಕಿನ ಪ್ರಕರಣಗಳು ಕಂಡು ಬರುತ್ತಿತ್ತು. ಈಗ 15 ಸಾವಿರಕ್ಕೆ ಇಳಿದಿದೆ. ಶೇ.47% ರಷ್ಟಿದ್ದ ಸೋಂಕಿನ ಪ್ರಮಾಣ ಶೇ.25ಕ್ಕೆ ಇಳಿದಿದೆ. ಇಡೀ ರಾಜ್ಯದಲ್ಲಿ ಎಲ್ಲರಿಗಿಂತಲೂ ಮೊದಲು ಕೊರೋನಾ ಆರೈಕೆ ಕೇಂದ್ರ ಪ್ರಾರಂಭಿಸಿ ಸೋಂಕಿನ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳಿಂದಾಗಿ ನಿಯಂತ್ರಣಕ್ಕೆ ಬಂದಿದೆ ಎಂದು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು.

ಜಿಲ್ಲಾಸ್ಪತ್ರೆಯಲ್ಲಿ 285 ಕೋವಿಡ್ ಹಾಸಿಗೆಗಳು ಸೇರಿದಂತೆ ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿಯೂ 50 ಆಮ್ಲಜನಕ ಹಾಸಿಗೆಗಳ ವ್ಯವಸ್ಥೆಯಿದೆ. ಕ್ವಾರಿ, ಕ್ರಷರ್ ಸೇರಿದಂತೆ ಅನೇಕ ದಾನಿಗಳ ನೆರವಿನಿಂದ 300 ಆಮ್ಲಜನಕ ಸಾಂದ್ರಕಗಳು ಲಭ್ಯವಿದ್ದು, ಜಿಲ್ಲೆಯಲ್ಲಿರುವ 150 ಪಿಎಚ್ ಸಿ(ನಗರ ಮತ್ತು ಗ್ರಾಮೀಣ) ಗಳಲ್ಲಿಯೂ 5-10 ಆಮ್ಲಜನಕ ಹಾಸಿಗೆಗಳ ವ್ಯವಸ್ಥೆ ಮಾಡಲು ಚಿಂತನೆ ನಡೆಸಲಾಗಿದೆ. ಶ್ರೀದೇವಿ, ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿಯೂ ಆಮ್ಲಜನಕದ ಅಗತ್ಯಕ್ಕೆ ಅನುಗುಣವಾಗಿ ಹಾಸಿಗೆಗಳನ್ನು ಬಳಸಿಕೊಳ್ಳಲಾಗಿದೆ. ಸಿದ್ಧಗಂಗಾ ಆಸ್ಪತ್ರೆಯಿಂದಲೂ ಸರ್ಕಾರದ ಆದೇಶದನ್ವಯ ಹಾಸಿಗೆಗಳನ್ನು ಪಡೆಯಲಾಗಿದೆ. ಜಿಲ್ಲೆಯಲ್ಲಿ ಜಿಲ್ಲಾಡಳಿತದ ಸೂಕ್ತ ನಿರ್ವಹಣೆಯಿಂದಾಗಿ ಆಮ್ಲಜನಕದ ಕೊರತೆ ನಡುವೆಯೂ ಕೋವಿಡ್ ನಿರ್ವಹಣೆ ಮಾಡಲಾಗುತ್ತಿದೆ ಎಂದರು.

Tumkuru Covid ಮುಖ್ಯಮಂತ್ರಿಗಳಿಗೆ ಹಲವಾರು ಬೇಡಿಕೆ:

ಜಿಲ್ಲೆಗೆ ಮಂಜೂರಾಗಿರುವ 100 ಹಾಸಿಗೆಗಳ ಎಂಸಿಎಚ್( (Maternal and child health -ಗರ್ಭಿಣಿ ಮತ್ತು ಮಕ್ಕಳ) ಆಸ್ಪತ್ರೆಯನ್ನು 200 ಹಾಸಿಗೆಗಳಿಗೆ ಹೆಚ್ಚಿಸಿ ಆದಷ್ಟು ಬೇಗ ಕಾಮಗಾರಿಗೆ ಚಾಲನೆ ನೀಡಬೇಕು. ಇದರಿಂದ ಮಗು ಮತ್ತು ಬಾಣಂತಿಯರ ಆರೈಕೆ ಸುಲಭವಾಗಲಿದೆ. ಜಿಲ್ಲೆಯಲ್ಲಿ 6000 ಹೆರಿಗೆ ಆಗುತ್ತಿದ್ದು, ಎಂಸಿಹೆಚ್ ಆಸ್ಪತ್ರೆ ನಿರ್ಮಾಣವಾದಲ್ಲಿ ಹೆರಿಗೆ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಇದಲ್ಲದೆ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕಾಗಿ ಸರ್ಕಾರದಿಂದ 100 ಕೋಟಿ ರೂ.ಈಗಾಗಲೇ ಬಿಡುಗಡೆ ಆಗಿದ್ದರೂ ಟೆಂಡರ್ ಪ್ರಕ್ರಿಯೆ ಅಂತಿಮಗೊಳ್ಳದೆ ಕಾಮಗಾರಿ ಪ್ರಾರಂಭವಾಗಿಲ್ಲ. ಇದನ್ನೂ ಬೇಗ ಮಾಡಿಕೊಡಬೇಕು ಎಂದು ಬೇಡಿಕೆ ಇಟ್ಟರಲ್ಲದೆ ಜಿಲ್ಲೆಯಲ್ಲಿ 3-4 ಕಡೆ ಸಿಟಿ ಸ್ಕ್ಯಾನ್ ವ್ಯವಸ್ಥೆ ಮಾಡಿಕೊಡಬೇಕು. ಹುಳಿಯಾರಿನಲ್ಲಿ ಸಮುದಾಯ ಆರೋಗ್ಯ ಕೇಂದ್ರ ಪ್ರಾರಂಭಿಸಬೇಕು ಎಂದು ಮನವಿ ಮಾಡಿದರು.

ಆಮ್ಲಜನಕದ ಕೊರತೆಯಿರುವುದನ್ನು ಮನಗಂಡು ಜಿಲ್ಲೆಯಲ್ಲಿ ಮೂರು ಕಡೆ ಸರ್ಕಾರಿ ಹಣದಿಂದ ಆಕ್ಸಿಜನ್ ಘಟಕ ಸ್ಥಾಪನೆಗೆ ಅನುಮತಿ ದೊರೆತಿದೆ. ಸಚಿವ ಸುಧಾಕರ್ ಅವರೂ ಸಹ ಮತ್ತೊಂದು ಘಟಕ ಸ್ಥಾಪನೆಗೆ ಅನುದಾನ ಒದಗಿಸಲಾಗುವುದೆಂದು ಭರವಸೆ ನೀಡಿದ್ದಾರೆ. ಇದರ ಜೊತೆಗೆ ಹೈಡಲ್ ಬರ್ಗ್ ಸಿಮೆಂಟ್ ಕಾರ್ಖಾನೆಯು ತುರುವೇಕೆರೆ, ಬಿಇಎಲ್ ಸಂಸ್ಥೆಯು ಕುಣಿಗಲ್, ವಿಪ್ರೋ ಸಂಸ್ಥೆಯು ಕೊರಟಗೆರೆಯಲ್ಲಿ ಆಮ್ಲಜನಕ ಘಟಕ ಸ್ಥಾಪನೆ ಮಾಡಲು ಮುಂದೆ ಬಂದಿದೆ. ಪಾವಗಡದಲ್ಲಿ ಈಗಾಗಲೇ ಆಮ್ಲಜನಕ ಘಟಕ ಸ್ಥಾಪನೆ ಕಾರ್ಯ ಆರಂಭವಾಗಿದೆ. ಜಿಲ್ಲಾಸ್ಪತ್ರೆಗೆ ಟಿಮ್ಯಾಕ್ ಕಂಪನಿಯಿಂದಲೂ 2ಕೆಎಲ್ ಆಕ್ಸಿಜನ್ ಘಟಕ ಸ್ಥಾಪನೆಗೆ ಒಪ್ಪಿಕೊಂಡಿದ್ದಾರೆ. ಇದೆಲ್ಲವನ್ನೂ ಮುಂದಿನ ಕೋವಿಡ್ ಅಲೆಯೊಳಗೆ ಜೂನ್ ಅಂತ್ಯ ಅಥವಾ ಜುಲೈ ಮಾಹೆಯೊಳಗೆ ತಯಾರಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಪ್ರತಿ ತಾಲೂಕಿನಲ್ಲಿಯೂ ಆಯಾ ಶಾಸಕರು ಮತ್ತು ಜನಪ್ರತಿನಿಧಿಗಳ ಉತ್ತಮ ಕಾರ್ಯನಿರ್ವಹಣೆಯಿಂದಾಗಿ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ನಿರೀಕ್ಷೆಗಿಂತಲೂ ಹೆಚ್ಚು ಹತೋಟಿಗೆ ಬಂದಿದೆ. ಇನ್ನೂ ಕಡಿಮೆ ಮಾಡಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಸಚಿವ ಜೆ.ಸಿ. ಮಾಧುಸ್ವಾಮಿ ಅವರ ಮನವಿ ಆಲಿಸಿದ ಮುಖ್ಯಮಂತ್ರಿಗಳು ಬೇಡಿಕೆಗಳನ್ನು ಈಡೇರಿಸಲು ಸಮ್ಮತಿ ನೀಡಿದರು. ಬಳಿಕ ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ ಅವರು ಮಾತನಾಡಿ, ಸರ್ಕಾರ ಮೊದಲ ಆದ್ಯತೆಯನ್ನು ಆರೋಗ್ಯಕ್ಕೆ ನೀಡಿದೆ. ಆಸ್ಪತ್ರೆಗಳ ಸಿಬ್ಬಂದಿಗಳ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಕಡೆ ಆಕ್ಸಿಜನ್ ಜನರೇಟ್ ಮಾಡಲು ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದೆ. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ರೀತಿಯ ಸವಲತ್ತು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಮಾತನಾಡಿ, ಜಿಲ್ಲೆಯಲ್ಲಿ ಅತ್ಯುತ್ತಮ ನಿರ್ವಹಣಾ ಕ್ರಮಗಳನ್ನು ಕೈಗೊಂಡು ಸೋಂಕನ್ನು ನಿಯಂತ್ರಣಕ್ಕೆ ತರಲಾಗಿದೆ. ಎಲ್ಲಿಯೂ ಸಮಸ್ಯೆಯಾಗದಂತೆ ನಿರ್ವಹಣೆ ಮಾಡಲಾಗುತ್ತಿದೆ ಎಂದು ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳನ್ನು ಮುಖ್ಯಮಂತ್ರಿಗಳಿಗೆ ಒದಗಿಸಿದರು.

ಸಭೆಯಲ್ಲಿ ಸಂಸದರಾದ ಜಿ.ಎಸ್. ಬಸವರಾಜು, ನಾರಾಯಣಸ್ವಾಮಿ, ಶಾಸಕರುಗಳು ಹಾಗೂ ಡಾ. ರಾಕೇಶ್ ಸಿಂಗ್ ಸೇರಿದಂತೆ ಜಿಲ್ಲಾ ಪಂಚಾಯತ್ ಡಾ.ಕೆ. ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ವಂಶಿಕೃಷ್ಣ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.

ಸಭೆ ಬಳಿಕ ಶ್ರೀ ಸಿದ್ಧಗಂಗಾ ಮಠದಲ್ಲಿರುವ ಕೋವಿಡ್ ಕೇರ್ ಸೆಂಟರ್‍ಗೆ ಭೇಟಿ ನೀಡಿ ಪರೀಶಿಲನೆ ನಡೆಸಿದರು.

ಸೋಂಕಿನ ಪ್ರಮಾಣ ಶೇ.10ರೊಳಗೆ ಇಳಿಸಿ:

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ತುಮಕೂರು ಜಿಲ್ಲೆಗೆ ಸಂಬಂಧಿಸಿದಂತೆ ಕೋವಿಡ್-19 ಎರಡನೇ ಅಲೆಯಲ್ಲಿ 67392 ಪ್ರಕರಣಗಳು ಕಂಡುಬಂದಿದ್ದು, 445 ಸೋಂಕಿತರು ಸಾವನ್ನಪ್ಪಿದ್ದಾರೆ. ಮರಣ ಪ್ರಮಾಣ ಶೇ.0.66 ಇದ್ದು, ಪಾಸಿಟಿವ್ ಪ್ರಮಾಣ ಶೇ.25.27%ರμÁ್ಟಗಿದೆ. ಈ ಸೋಂಕಿನ ಪ್ರಮಾಣವನ್ನು ಶೇ.10ರೊಳಗೆ ಇಳಿಸಬೇಕಾಗಿದೆ ಎಂದರು
.
ಎರಡನೇ ಅಲೆಯಲ್ಲಿ ಜಿಲ್ಲೆಯಲ್ಲಿರುವ ಎರಡು ಸರ್ಕಾರಿ ಆರ್ ಟಿಪಿಸಿಆರ್ ಲ್ಯಾಬ್ ಗಳನ್ನು ಬಳಸಿಕೊಂಡು 266645 ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ಸೋಂಕು ದೃಢಪಟ್ಟವರಿಗೆ ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿಯು ಚಿಕಿತ್ಸೆ ನೀಡಲಾಗಿದೆ. ಜಿಲ್ಲೆಗೆ 23ಕೆಎಲ್ ಆಮ್ಲಜನಕ ಪೂರೈಕೆ ಮಾಡಿ ಯಾವುದೇ ಸೋಂಕಿತರಿಗೆ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ. ನೋಡಲ್ ಅಧಿಕಾರಿಗಳನ್ನು ನೇಮಿಸಿ ಹಾಸಿಗೆಗಳ ನಿರ್ವಹಣೆ ಮಾಡಲಾಗಿದೆ. ಸರ್ಕಾರ ಹಾಗೂ ದಾನಿಗಳ ನೆರವಿನಿಂದ ಜಿಲ್ಲಾಸ್ಪತ್ರೆ ಸೇರಿದಂತೆ ಎಲ್ಲಾ ತಾಲೂಕುಗಳಲ್ಲಿಯೂ ಆಮ್ಲಜನಕ ಉತ್ಪಾದನೆ ಘಟಕ ಮಾಡಲು ಕ್ರಮ ವಹಿಸಲಾಗಿದೆ ಹಾಗೂ 566 ಆಮ್ಲಜನಕ ಸಾಂದ್ರಕಗಳನ್ನು ಪಡೆದು ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಪಾವಗಡ ತಾಲೂಕಿನಲ್ಲಿ 100 ಎಲ್ ಪಿಎಂ ಆಮ್ಲಜನಕ ಉತ್ಪಾದನಾ ಘಟಕ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.

ಜಿಲ್ಲೆಯ ಪ್ರತಿಯೋರ್ವ ಸೋಂಕಿತನಿಗೂ ಅಗತ್ಯ ಔಷದೋಪಾಚಾರವನ್ನು ಒದಗಿಸಲಾಗುತ್ತಿದೆ. ಹೋಂ ಐಸೋಲೇಷನ್ ನಲ್ಲಿರುವ ಸೋಂಕಿತರಿಗೆ ಆಶಾ ಕಾರ್ಯಕರ್ತೆಯರು ಮತ್ತು ಅಧಿಕಾರಿಗಳಿಂದ ಕೋವಿಡ್ ಕಿಟ್ ನೀಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಪಾಸಿಟಿವ್ ಪ್ರಕರಣಗಳು ಕಡಿಮೆಯಾಗುತ್ತಿದೆ. ಸೋಂಕು ಇಳಿಕೆ ಸಮಾಧಾನ ತಂದಿದೆ. ಸೋಂಕಿನ ಪ್ರಮಾಣವನ್ನು ಶೇ.10ಕ್ಕೆ ಇಳಿಸಲು ಎಲ್ಲರೂ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಲಾಗಿದೆ. ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಎಲ್ಲಾ ರೀತಿಯಲ್ಲಿಯೂ ಸಹಕಾರ ಸಿಗಲಿದೆ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದ್ದಾರೆ. ಏನೇನು ಸಾಧ್ಯವೋ ಅದನ್ನೆಲ್ಲವನ್ನೂ ಈಡೇರಿಸಲು ಸಮ್ಮತಿ ನೀಡಿದ್ದೇನೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಹಿಡಿದು ಜನಪ್ರತಿನಿಧಿಗಳು ಸೇರಿದಂತೆ ವಿಶೇಷವಾಗಿ ಜಿಲ್ಲಾಡಳಿತ ಹಗಲು-ರಾತ್ರಿ ಶ್ರಮಿಸುತ್ತಿದೆ. ಅವರಿಗೆ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಸರ್ಕಾರದಿಂದ ಘೋಷಿಸಲಾಗಿರುವ ವಿಶೇಷ ಪ್ಯಾಕೇಜನ್ನು ಎಲ್ಲರಿಗೂ ತಲುಪಿಸುವ ಕಾರ್ಯ ಆರಂಭವಾಗಿದೆ. ಹಣವನ್ನು ಬಿಡುಗಡೆ ಮಾಡುತ್ತೇವೆ. ಅದರಲ್ಲಿ ಯಾವುದೇ ಅನುಮಾನ ಬೇಡ. ಯಾವುದೇ ಕಾರಣಕ್ಕೂ ಘೋಷಿಸಲಾಗಿರುವ ಹಣವನ್ನು ಕೊಡುತ್ತೇವೆ. ಮೂರನೇ ಅಲೆ ನಿಯಂತ್ರಣಕ್ಕೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ಲಭ್ಯತೆ ಆಧಾರದಲ್ಲಿ 18-44 ವರ್ಷದೊಳಗಿನವರಿಗೆ ಲಸಿಕೆ ನೀಡಲಾಗುವುದು. ತುಮಕೂರು ಜಿಲ್ಲೆಗೂ ಹೆಚ್ಚು ಲಸಿಕೆ ನೀಡಲಾಗುವುದು ಎಂದು ಹೇಳಿದರು.

ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್‌ ಬ್ಯುರೋ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English