ಕೋವಿಡ್ ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಮೈಸೂರು ವಿವಿ ಉಚಿತ ಸೀಟು

8:55 PM, Saturday, May 29th, 2021
Share
1 Star2 Stars3 Stars4 Stars5 Stars
(No Ratings Yet)
Loading...

Hemanth-Kumarಮೈಸೂರು: ಕೋವಿಡ್‌-19ನಿಂದ ತಂದೆ–ತಾಯಿ, ಪೋಷಕರನ್ನು ಕಳೆದುಕೊಂಡಿರುವ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಾತಿ ನೀಡಲು ಮೈಸೂರು ವಿಶ್ವವಿದ್ಯಾಲಯ ನಿರ್ಧರಿಸಿದೆ.

ಕೊರೋನಾ ಸೋಂಕಿನಿಂದ ಪೋಷಕರನ್ನು ಕಳೆದುಕೊಂಡು ವಿದ್ಯಾಭ್ಯಾಸ ಮಾಡಲು ಅಶಕ್ತರಾದವರಿಗೆ ‘ಉಚಿತ ಸೀಟು’ ನೀಡುವ ಮಹತ್ವದ ತೀರ್ಮಾನವನ್ನು ಮೈಸೂರು ವಿಶ್ವವಿದ್ಯಾನಿಲಯ ತೆಗೆದುಕೊಂಡಿದೆ. ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ನೇತೃತ್ವದಲ್ಲಿ ಶುಕ್ರವಾರ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ಕುರಿತು ತೀರ್ಮಾನಿಸಲಾಯಿತು.

ಕೋವಿಡ್-19 ವೈರಾಣು 2ನೇ ಆಲೆಯಿಂದ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಒಳಪಡುವ ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಸಾವು- ನೋವು ಉಂಟಾಗಿ ಅನೇಕರು ತಂದೆ -ತಾಯಿ ಹಾಗೂ ಮಕ್ಕಳನ್ನು ಕಳೆದುಕೊಂಡಿದ್ದಾರೆ. ಕೆಲವು ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ತಂದೆ ಅಥವಾ ತಾಯಿಯನ್ನು ಕಳೆದುಕೊಂಡು ವಿದ್ಯಾರ್ಜನೆ ಮುಂದುವರಿಸಲು ಕಷ್ಟ-ಸಾಧ್ಯವಾಗಿದೆ.

ಈ ಜಾಗತಿಕ ಸಂಕಷ್ಟದ ಸಮಯದಲ್ಲಿ ಮೈಸೂರು ವಿಶ್ವವಿದ್ಯಾನಿಲಯ, ಈ ರೀತಿ ತಂದೆ- ತಾಯಂದಿರನ್ನು ಅಥವಾ ಕುಟುಂಬದ ಜವಾಬ್ದಾರಿಯನ್ನು ವಹಿಸಿಕೊಂಡ ಮುಖ್ಯಸ್ಥರನ್ನು ಕಳೆದುಕೊಂಡು ವಿದ್ಯಾರ್ಜನೆ ಮುಂದುವರೆಸಲು ಸಾಧ್ಯವಾಗದಿರುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಮುಂದುವರಿಸಲು ಹಾಗೂ ಅವರ ಬದುಕಿನ ಭವಿಷ್ಯವನ್ನು ರೂಪಿಸಲು ಪ್ರಸ್ತಾವನೆಯನ್ನು ತಯಾರಿಸಿರುವುದನ್ನು ಸಭೆಯ ಮುಂದೆ ಮಂಡಿಸಲಾಯಿತು.

ವಿವಿ ವ್ಯಾಪ್ತಿಗೆ ಬರುವ ಮಹಾರಾಜ ಕಾಲೇಜು, ಯುವರಾಜ ಕಾಲೇಜು, ಸಂಜೆ ಕಾಲೇಜು ಮತ್ತು ಲಲಿತಕಲಾ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಗಳಿಗೆ ಐದು ಸೀಟು ಕಾಯ್ದಿರಿಸಲಾಗುವುದು. ಅದೇ ರೀತಿ ನಮ್ಮ ಮೈಸೂರು, ಮಂಡ್ಯ, ಹಾಸನ ಮತ್ತು ಚಾಮರಾಜನಗರ ಪಿಜಿ ಕ್ಯಾಂಪಸ್‌ಗಳಲ್ಲಿ ಸ್ನಾತಕೋತ್ತರ ಕೋರ್ಸ್‌ಗಳಿಗೆ ಮೂರು ಉಚಿತ ಸೀಟುಗಳನ್ನು ಕಾಯ್ದಿರಿಸಲಾಗುವುದು. ಈ ಸೀಟುಗಳನ್ನು ಅರ್ಹರಿಗೆ ಮತ್ತು ಕುಟುಂಬದಲ್ಲಿ ಗಳಿಸುವ ಸದಸ್ಯರನ್ನು ಕಳೆದುಕೊಂಡವರಿಗೆ ಮೆರಿಟ್ ಆಧಾರದ ಮೇಲೆ ನೀಡಲಾಗುವುದು ಎಂದು ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಜಿ.ಹೆಮಂತ ಕುಮಾರ್ ಹೇಳಿದ್ದಾರೆ.

ಬಡ ವಿದ್ಯಾರ್ಥಿಗಳಿಗೆ ಮತ್ತು ಕೋವಿಡ್‌ ನಿಂದ ಪೋಷಕರನ್ನು ಕಳೆದುಕೊಂಡಿರುವ, ಆರ್ಥಿಕವಾಗಿ ದುರ್ಬಲ ಕುಟುಂಬಗಳಿಂದ ಬರುವವರಿಗೆ ಉಚಿತ ಸೀಟು ಒದಗಿಸಲು ನಾನು ವಿವಿ ಅಧಿಕಾರಿಗಳಿಗೆ ಮನವಿ ಮಾಡಿದ್ದೆ, ನನ್ನ ಮನವಿಯನ್ನು ವಿವಿ ಅಂಗೀಕರಿಸಿದೆ ಎಂದು ವಿವಿ ಸಿಂಡಿಕೇಟ್ ಸದಸ್ಯ ನಾಗರಾಜ ಗೌಡ ಹೇಳಿದ್ದಾರೆ.

ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್‌ ಬ್ಯುರೋ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English