ಪೊಲೀಸರು ಜಪ್ತಿ ಮಾಡಿದ 35 ಸಾವಿರ ವಾಹನಗಳ ದಂಡದ ಮೊತ್ತ ನೋಡಿ ಗೃಹ ಸಚಿವರೇ ಶಾಕ್!

9:46 PM, Saturday, May 29th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Bommai ಬೆಂಗಳೂರು : ಕೋವಿಡ್ 19 ಎರಡನೇ ಅಲೆ ಭೀತಿ ಹಿನ್ನೆಲೆಯಲ್ಲಿ ಕಠಿಣ ಲಾಕ್ ಡೌನ್ ನಿಯಮ ಜಾರಿಗೊಳಿಸಲಾಗಿದೆ. ಲಾಕ್ ಡೌನ್ ನಿಯಮ ಉಲ್ಲಂಘಿಸಿ ಬೀದಿಗೆ ಇಳಿದವರ ವಿರುದ್ಧ ದಂಡಾಸ್ತ್ರ ಪ್ರಯೋಗಿಸಿದ ಪೊಲೀಸರು ಬರೋಬ್ಬರಿ 35905 ಸಾವಿರ ವಾಹನ ಜಪ್ತಿ ಮಾಡಿದ್ದಾರೆ. ಅದರಲ್ಲೂ 32 ಸಾವಿರ ದ್ವಿಚಕ್ರ ವಾಹನ. ಇವುಗಳಿಂದ ಸರಾಸರಿ ದಂಡ ಎಷ್ಟು ಸಂಗ್ರಹವಾಗುತ್ತದೆ. ಈ ದಂಡದ ಮೊತ್ತವನ್ನು ಏನು ಮಾಡುತ್ತಾರೆ ಎಂಬುದರ ಪೂರ್ಣ ವಿವರ ಇಲ್ಲಿದೆ ನೋಡಿ!

35 ಸಾವಿರ ವಾಹನ ಜಪ್ತಿ

ರಾಜಧಾನಿಯಲ್ಲಿ ಬೆಳಗ್ಗೆ 6 ಗಂಟೆಯಿಂದ 10 ಗಂಟೆ ವರೆಗೂ ಅಗತ್ಯ ವಸ್ತುಗಳ ಖರೀದಿ ಹಾಗೂ ಜನರ ಓಡಾಟಕ್ಕೆ ಬೆಂಗಳೂರಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ಅನಾವಶ್ಯಕ ಓಡಾಟಕ್ಕೆ ಅವಕಾಶ ನೀಡಿಲ್ಲ. ಆದರೆ ಬೆಂಗಳೂರಿನಲ್ಲಿ ಜನರು ಅನಾವಶ್ಯಕ ಓಡಾಟ ಮಾಡಲು ಹೋಗಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದ 32,203 ದ್ವಿಚಕ್ರ ವಾಹನಗಳನ್ನು ಬೆಂಗಳೂರು ಪೊಲೀಸರು ಜಪ್ತಿ ಮಾಡಿದ್ದಾರೆ. ಅದರಂತೆ 1678 ಆಟೋಗಳು, ನಾಲ್ಕು ಚಕ್ರದ 2024 ವಾಹನಗಳನ್ನು ಜಪ್ತಿ ಮಾಡಿ ಪೊಲೀಸರು ಕೇಸು ದಾಖಲಿಸಿದ್ದಾರೆ. ಒಟ್ಟಾರೆ 35,905 ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಈ ಎಲ್ಲಾ ವಾಹನಗಳಿಗೆ ನ್ಯಾಯಾಧೀಶರು ದಂಡ ವಿಧಿಸಲಿದ್ದು, ದಂಡದ ಮೊತ್ತವನ್ನು ಪಾವತಿಸಿ ವಾಹನ ಪಡೆಯಬೇಕು. ಪ್ರತಿ ವಾಹನಕ್ಕೆ ಸರಾಸರಿ 5 ಸಾವಿರ ದಂಡ ವಿಧಿಸಿದರೂ ಜಪ್ತಿಯಾದ ವಾಹನಗಳ ಬಿಡುಗಡೆಯಿಂದಲೇ ಬೆಂಗಳೂರು ಪೊಲೀಸರ ಖಜಾನೆಗೆ 17 ಕೋಟಿ ರೂ. ತುಂಬಲಿದೆ. ಗೃಹ ಸಚಿವರು ಹೇಳುವ ಪ್ರಕಾರ ಇನ್ನೂ ಒಂದು ತಿಂಗಳು ಲಾಕ್ ಡೌನ್ ವಿಸ್ತರಣೆ ಮಾಡುವ ಸುಳಿವು ನೀಡಿದ್ದಾರೆ. ಆಗೇನಾದರೂ ಆದರೆ, ಬರೋಬ್ಬರಿ ಪೊಲೀಸರು ಜಪ್ತಿ ಮಾಡುವ ವಾಹನ ಹಾಗೂ ವಿಧಿಸುವ ದಂಡದ ಮೊತ್ತ 50 ಕೋಟಿ ರೂ. ಆದರೂ ಅಚ್ಚರಿ ಪಡಬೇಕಿಲ್ಲ.

ಮಾಸ್ಕ್ ಹಾಕದವರಿಂದ 3.5 ಕೋಟಿ ದಂಡ:

ದಂಡ ಹಾಕುವ ಮೂಲಕವೇ ಜನರನ್ನು ನಿಯಂತ್ರಣ ಮಾಡುತ್ತೇವೆ ಎಂದು ನಿರ್ಧರಿಸಿರುವ ಬೆಂಗಳೂರು ಪೊಲೀಸರು ಮುಖಕ್ಕೆ ಮಾಸ್ಕ್ ಧರಿಸದ 2.62 ಲಕ್ಷ ಮಂದಿಗೆ ದಂಡ ವಿಧಿಸಿದ್ದಾರೆ. ಇದರಿಂದ 3.31 ಕೋಟಿ ರೂ. ದಂಡ ವಸೂಲಿ ಮಾಡಿದ್ದಾರೆ. ಸಾಮಾನ್ಯವಾಗಿ ಎಲ್ಲರೂ ಮಾಸ್ಕ್ ಧರಿಸಿದ್ದಾರೆ. ಆದರೆ, ಕೆಲವರು ಧರಿಸಿದರೂ ಅದನ್ನು ಮೂಗಿಗೆ ಹಾಕುವ ಬದಲು ಗಡ್ಡಕ್ಕೆ ಹಾಕಿ ಸಿಕ್ಕಿಬಿದ್ದಿದ್ದಾರೆ. ಇನ್ನು ಪ್ರತಿ ಪೊಲೀಸ್ ಠಾಣೆಗೂ ಇಂತಿಷ್ಟು ಕೇಸು ದಾಖಲಿಸುವ ಟಾರ್ಗೆಟ್ ನೀಡಲಾಗಿತ್ತು ಎಂಬ ಮಾತು ಕೇಳಿ ಬರುತ್ತಿದೆ. ಅಂತೂ ಎರಡೂವರೆ ಲಕ್ಷ ಮಂದಿಗೆ ಮಾಸ್ಕ್ ಧರಿಸದ ಕಾರಣಕ್ಕೆ ದಂಡ ವಿಧಿಸಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ಸರ್ಕಾರದ ಖಜಾನೆ ತುಂಬಿಸಿದ್ದಾರೆ.

ಸಾಮಾಜಿಕ ಅಂತರಕ್ಕೂ ದಂಡ ಬಿತ್ತು

ಇನ್ನು ಸಾಮಾಜಿಕ ಅಂತರ ಕಾಪಾಡಲಿಲ್ಲ ಎಂಬ ಕಾರಣಕ್ಕೆ 24,305 ಮಂದಿಗೆ ದಂಡ ವಿಧಿಸಲಾಗಿದೆ. ಇದರಿಂದಲೂ ಬರೋಬ್ಬರಿ 58 ಲಕ್ಷ ರೂ. ದಂಡವನ್ನು ಬೆಂಗಳೂರು ನಗರ ಪೊಲೀಸರು ಸಂಗ್ರಹಿಸಿದ್ದಾರೆ. ಇನ್ನೂ ಒಟ್ಟಾರೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಉಲ್ಲಂಘನೆ ಪ್ರಕರಣ ಒಗ್ಗೂಡಿಸಿ ಹೇಳುವುದಾದರೆ 3.91 ಕೋಟಿ ರೂಪಾಯಿ ದಂಡವನ್ನು ವಸೂಲಿ ಮಾಡಲಾಗಿದೆ. ಇನ್ನು ಜಪ್ತಿಯಾಗಿರುವ ವಾಹನಗಳಿಂದ ಸಂಗ್ರಹವಾಗುವ ದಂಡದ ಮೊತ್ತವನ್ನು ಒಗ್ಗೂಡಿಸಿದರೆ ಬರೋಬ್ಬರಿ 25 ಕೋಟಿ ದಾಟುವ ಸಾಧ್ಯೆಯಿದೆ. ಇಷ್ಟು ಪ್ರಮಾಣದ ದಂಡದ ಮೊತ್ತ ಸಂಗ್ರಹ ಅಗಿರುವ ಅಂಕಿ ಅಂಶಗಳನ್ನು ನೋಡಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರೇ ಶಾಕ್ ಆಗಿದ್ದಾರೆ. ಮಾತ್ರವಲ್ಲ, ಕೊರೊನಾ ನಿಯಂತ್ರಣಕ್ಕೆ ಬರುವ ವರೆಗೂ ಕಠಿಣ ಲಾಕ್ ಡೌನ್ ನಿಯಮ ಜಾರಿ ಮಾಡುವಂತೆ ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English