ಸುಲಿಗೆ ಮಾಡುವ ಆ್ಯಂಬುಲೆನ್ಸ್ ಚಾಲಕರ ವಿರುದ್ಧ ಕಠಿಣ ಕ್ರಮ: ಆರ್ ಅಶೋಕ

11:50 PM, Sunday, May 30th, 2021
Share
1 Star2 Stars3 Stars4 Stars5 Stars
(No Ratings Yet)
Loading...

R Ashoka ಬೆಂಗಳೂರು : ದುಬಾರಿ ಹಣ ವಸೂಲಿ ಮಾಡುವುದು ಗಮನಕ್ಕೆ ಬಂದರೆ ಅಂತಹ ಆ್ಯಂಬುಲೆನ್ಸ್ ಚಾಲಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್ ಅಶೋಕ ತಿಳಿಸಿದರು.

“ಪ್ರಧಾನಿ ಮೋದಿಯವರ ಆಡಳಿತಕ್ಕೆ ಏಳು ವರ್ಷ ತುಂಬಿದ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಕ್ಷೇತ್ರದಲ್ಲಿ ಚಾಲನೆ ನೀಡಿ ಮಾತನಾಡುತ್ತಾ,”ಕೆಲ ಆ್ಯಂಬುಲೆನ್ಸ್ ಚಾಲಕರು ಸೋಂಕಿನಿಂದ ಸಾವನ್ನಪ್ಪಿರುವವರ ಶವ ಸಾಗಿಸಲು, ಸೋಂಕಿತರನ್ನ ಆಸ್ಪತ್ರೆಗೆ ದಾಖಲಿಸಲು ಸುಲಿಗೆ ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ. ಇಂಥಹ ಚಾಲಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಈಗಾಗಲೇ ಈ ಕುರಿತಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಜನ ಕೂಡಾ ಈ ರೀತಿ ಪ್ರಕರಣಗಳ ಕುರಿತು ದೂರು ದಾಖಲಿಸಬೇಕು”, ಎಂದು ಹೇಳಿದರು.

“ನಗರದಲ್ಲಿ ನಿಧಾನಕ್ಕೆ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ. ಸೋಂಕು ನಿಯಂತ್ರಿಸಲು ಸಾಕಷ್ಟು ಕ್ರಮಗಳನ್ನ ಅನುಸರಿಸಲಾಗುತ್ತಿದೆ. ಸೋಂಕಿತರ ಪರೀಕ್ಷೆಯಲ್ಲಿ ಮಹತ್ತರ ನಿರ್ಧಾರವೊಂದನ್ನ ತೆಗೆದುಕೊಳ್ಳಲಾಗಿದೆ. ಬೆಂಗಳೂರು ದಕ್ಷಿಣ ಭಾಗದಲ್ಲಿ ಆರ್ ಟಿ ಪಿ ಸಿ ಆರ್ ಪರೀಕ್ಷೆಯ ಜೊತೆಗೆ ರಕ್ತದ ಮಾದರಿಯನ್ನು ತೆಗೆದುಕೊಳ್ಳಲಾಗುತ್ತಿದೆ. ಈ ಮೂಲಕ ಸೋಂಕಿನ ತೀವ್ರತೆಯನ್ನ ತಿಳಿಯಬಹುದಾಗಿದೆ. ಸೋಂಕಿತರಿಗೆ ಆಕ್ಸಿಜನ್ ಬೆಂಬಲ, ಐಸಿಯೂ ಅಥವಾ ವೆಂಟಿಲೇಟರ್ ಚಿಕಿತ್ಸೆ ನೀಡಬೇಕಾ ಎಂಬುದು ಈ ರಕ್ತದ ಮಾದರಿಯ ಪರೀಕ್ಷೆಯಿಂದ ತಿಳಿದು ಬರಲಿದೆ. ಮೊದಲು ಬೆಂಗಳೂರು ದಕ್ಷಿಣ ಭಾಗದಲ್ಲಿ ಇದನ್ನ ಜಾರಿಗೊಳಿಸಿ ನಂತರ ಉಳಿದ ಭಾಗಕ್ಕೂ ಜಾರಿಗೊಳಿಸಲಾಗುವುದು. ಈ ಪರೀಕ್ಷೆ ಸಂಪೂರ್ಣ ಉಚಿತವಾಗಿರುತ್ತದೆ.

ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಕುರಿತಂತೆ ಪ್ರತಿಕ್ರಿಯೆ ನೀಡಿದ ಸಚಿವರು, ರವಿ ಸುಬ್ರಹ್ಮಣ್ಯ ಅವರು ನನಗೆ ಇಪ್ಪತ್ತು ವರ್ಷದಿಂದ ಪರಿಚಿತರು. ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯಬೇಕೆಂಬ ದುರುದ್ದೇಶ ಇಟ್ಟುಕೊಂಡೆ ಈ ತಿರುಚಿದ ಆಡಿಯೋ ಬಿಡುಗಡೆ ಮಾಡಲಾಗಿದೆ. ತನಿಖೆಗೆ ಆದೇಶಿಸಲಾಗಿದೆ. ಸಧ್ಯದಲ್ಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜನರ ನಡುವೆ ಇದ್ದು ಅವರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಆದರೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಕೇವಲ ಟ್ವೀಟ್ ನಲ್ಲಿ ಟೀಕೆ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ ಎಂದು ಪ್ರತಿಪಕ್ಷಗಳ ಟೀಕೆಗೆ ಉತ್ತರಿಸಿದರು.

ಸಿ ಪಿ ಯೋಗೇಶ್ವರ್ ಕುರಿತಂತೆ ಮಾತನಾಡಿದ ಆರ್ ಅಶೋಕ,”ಇದು ಮೂರು ಪಕ್ಷಗಳ ಸರ್ಕಾರ ಎಂದವರು ಯಾವ ಪಕ್ಷದಲ್ಲಿದ್ದರು, ಯಾವ ಪಕ್ಷದಿಂದ ಬಂದವರು ಎಂಬುದನ್ನ ಅರ್ಥ ಮಾಡಿಕೊಳ್ಳಬೇಕು. ಯಾರಿಗಾದರು ಅಸಮಾಧಾನವಿದ್ದರೆ ಅದನ್ನ ಪಕ್ಷದೊಳಗೆ ಆಂತರಿಕವಾಗಿ ವiತನಾಡಿ ಬಗೆಹರಿಸಿಕೊಳ್ಳಬೇಕು. ಅದನ್ನ ಸಾರ್ವಜನಿಕವಾಗಿ ಮಾತನಾಡುವುದಲ್ಲ. ನಮಗೆ ಹೆಮ್ಮೆ ಇದೆ ರಾಜ್ಯದಲ್ಲಿ ಯಡಿಯೂರಪ್ಪನವರ ಸರ್ಕಾರ ಹಾಗೂ ಕೇಂದ್ರದಲ್ಲಿ ಮೋದಿಯವರ ಸರ್ಕಾರ ಜನತೆಯ ಸಂಕಷ್ಟಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ”, ಎಂದು ತಿಳಿಸಿದರು.

ಕಂದಾಯ ಸಚಿವರು ಇಡೀ ದಿನ ತಮ್ಮ ಕ್ಷೇತ್ರದಾದ್ಯಂತ ಹಲವು ಸೇವಾ ಕಾರ್ಯಗಳನ್ನ ಕೈಗೊಂಡು ಬಡವರಿಗೆ, ಅರ್ಚಕರಿಗೆ, ಕಾರ್ಮಿಕರಿಗೆ ದಿನಸಿ, ತರಕಾರಿ ವಿತರಣೆ ಮಾಡುವ ಮೂಲಕ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಒಳಗಾಗಿರುವವರಿಗೆ ನೆರವಾಗುವ ಕಾರ್ಯ ಮಾಡಿದರು.

ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್‌ ಬ್ಯುರೋ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English