‘ವೈದ್ಯರ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮಕ್ಕೆ ಹುಬ್ಬಳ್ಳಿಯಲ್ಲಿ ಶೆಟ್ಟರ್ ಚಾಲನೆ

2:41 PM, Monday, May 31st, 2021
Share
1 Star2 Stars3 Stars4 Stars5 Stars
(5 rating, 1 votes)
Loading...

 

Shettarಹುಬ್ಬಳ್ಳಿ: ಸೋಂಕು ತಗುಲಿದ ವ್ಯಕ್ತಿಗಳನ್ನು ತಕ್ಷಣ ಕೋವಿಡ್ ಕೇರ್ ಸೆಂಟರ್‍ಗೆ ಸೇರಿಸಲೇಬೇಕು. ಜೊತೆಗೆ ಸ್ಥಳದಲ್ಲಿಯೇ ಕೊರೊನಾ ಪರೀಕ್ಷೆ ಮಾಡುವ ಮೂಲಕ ಗ್ರಾಮೀಣ ಭಾಗದಲ್ಲಿ ಸೋಂಕಿತರನ್ನು ಕಡಿಮೆ ಮಾಡುವ ಉದ್ದೇಶವಿದೆ. ಈ ಹಿನ್ನೆಲೆಯಲ್ಲಿ ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ನಗರದ ಕಿಮ್ಸ್ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಧಾರವಾಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಧಾರವಾಡ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಗಳ ಸಹಯೋಗದ ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮದ ವಾಹನಗಳಿಗೆ ಹಸಿರು ಭಾವುಟ ಪ್ರದರ್ಶಿಸುವ ಮೂಲಕ ಚಾಲನೆ ಕೊಟ್ಟು ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಆಸೆಯಂತೆ ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಚಾಲನೆ ಕೊಡಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ 66 ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಅದರಲ್ಲಿ 11 ನಗರದಲ್ಲಿದ್ದರೇ, 55 ಗ್ರಾಮೀಣ ಭಾಗದಲ್ಲಿಯೇ ಇದೆ. ಇವುಗಳಲ್ಲಿ 2133 ಬೆಡ್ ಗಳನ್ನು ನಿರ್ಮಾಣ ಮಾಡಿದ್ದು, ಧಾರವಾಡ ಜಿಲ್ಲೆಯ ಪ್ರತಿ ಹಳ್ಳಿಗಳಿಗೆ ಭೇಟಿ ನೀಡುವ ವೈದ್ಯರ ತಂಡವು ಪರೀಕ್ಷೆ ಮಾಡುವಾಗ ಯಾರಿಗೆ ಕೊರೋನಾ ಪಾಸಿಟಿವ್ ಇದೆ ಅವರನ್ನು ಕೊರೋನಾ ಕೇಂದ್ರಕ್ಕೆ ಸೇರಿಸುವ ಕೆಲಸ ಮಾಡುತ್ತಾರೆ. ಸ್ಥಳದಲ್ಲಿಯೇ ಮಾತ್ರೆಗಳನ್ನು ಕೊಡಲು ತಂಡವಾಗಿ ಕೆಲಸ ಮಾಡುವ ಉತ್ತಮ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.

ಮೊದಲ ದಿನದಲ್ಲಿ 7 ವಾಹನವನ್ನು ವಿವಿಧ ತಾಲೂಕಿನ ಗ್ರಾಮಗಳಿಗೆ ಕಳುಹಿಸಲಾಗುವುದು. ಯಾವ ತಾಲೂಕಿಗೆ ಇನ್ನು ಹೆಚ್ಚಿನ ವಾಹನದ ಅವಶ್ಯಕತೆ ಇದ್ದರೆ ಕಳುಹಿಸುವ ಕೆಲಸ ಮಾಡಲಾಗುವುದು. ವೈದ್ಯರ ತಂಡವು ಗ್ರಾಮಗಳಿಗೆ ಹೋಗಿ ಕಾರ್ಯಕ್ರಮವನ್ನು ಯಶಸ್ವಿ ಮಾಡಲಿದೆ ಎಂಬ ನಂಬಿಕೆ ಇದೆ. ಇಂದು ಕಿಮ್ಸ್ ನ 15, ಎಸ್ ಡಿಎಂ ನ 25 ನ ವೈದ್ಯರು ಪಾಲ್ಗೊಳ್ಳಲಿದ್ದಾರೆ. ಪ್ರತಿನಿತ್ಯ ಎರಡರಿಂದ ಮೂರು ಹಳ್ಳಿಗಳಿಗೆ ಭೇಟಿ ಮಾಡಲಿದೆ. ಇಂದಿನಿಂದ ಪ್ರತಿ ಮನೆಯಲ್ಲಿಯೂ ಸೋಂಕಿತರು ಎಷ್ಟು ಇದ್ದಾರೆ ಎಂಬುದು ಗೊತ್ತಾಗಲಿದೆ. ಸೊಂಕಿತರ ಪತ್ತೆ ಮಾಡಿ ಚಿಕಿತ್ಸೆ ನೀಡುತ್ತೇವೆ. ಇನ್ನೂ ಜಿಲ್ಲೆಯಲ್ಲಿ 135 ಬ್ಲ್ಯಾಕ್ ಫಂಗಸ್ ರೋಗಿಗಳಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ನಡೆಯುತ್ತಿದೆ. ಅಲ್ಲದೇ ಜಿಲ್ಲೆಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ಬ್ಲ್ಯಾಕ್ ಫಂಗಸ್ ಔಷಧಿ ಬರುತ್ತಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಅರವಿಂದ ಬೆಲ್ಲದ್, ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ, ಜಿಲ್ಲಾಧಿಕಾರಿ ನಿತೀಶ್ ಪಾಟೀಲ್, ಡಿಹೆಚ್ ಓ ವಸಂತ ಮಧೀನಕರ್ ಸೇರಿದಂತೆ ಮುಂತಾದವರು ಇದ್ದರು.

ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್‌ ಬ್ಯುರೋ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English