ಉಡುಪಿ: ಕಳೆದ ವರ್ಷ ಆ.5ರಂದು ಪ್ರಧಾನಿ ಮೋದಿಯವರು ಮಂದಿರ ನಿರ್ಮಾಣದ ಭೂಮಿಪೂಜೆ ನೆರವೇರಿಸಿದ ನಂತರ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ನಿಧಿ ಸಮರ್ಪಣಾ ಅಭಿಯಾನ ಯಶಸ್ವಿಯಾಗಿ ಪೂರ್ಣಗೊಂಡಿದೆ. ಮಾ.31ರ ವರೆಗಿನ ಲೆಕ್ಕಾಚಾರದ ಪ್ರಕಾರ ಮಂದಿರಕ್ಕೆ 3,200 ಕೋಟಿ ರೂ.ಸಮರ್ಪಣೆಯಾಗಿದೆ.
ಕಟ್ಟಡ ನಿರ್ಮಾಣ ಕಾರ್ಯಕ್ಕಾಗಿ 2 ಸಾವಿರ ಕೋಟಿ ರೂ.ವೆಚ್ಚ ಅಂದಾಜು ಮಾಡಲಾಗಿದೆ. ಉಳಿದ ಧನದ ಸದುಪಯೋಗ ಕುರಿತು ಆರ್ಥಿಕ ತಜ್ಞರ ಸಮಿತಿಯ ಸಲಹೆಯನ್ನೂ ಪಡೆಯಲಾಗಿದೆ. ಈ ಬಗ್ಗೆ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿನ ಮುಂದಿನ ಸಭೆಯಲ್ಲಿ ಅಂತಿಮ ನಿರ್ಧಾರವಾಗಲಿದೆ .
ಪ್ರಧಾನಿ ಮೋದಿಯವರು ಮಂದಿರ ನಿರ್ಮಾಣದ ಭೂಮಿಪೂಜೆ ನೆರವೇರಿಸಿದ್ದರು. ಮೇ 17ರಂದು 14 ಮೀಟರ್ ಆಳದ ಗರ್ಭಗುಡಿಯ ಭಾಗದಲ್ಲಿ ಕೂರ್ಮ ಶಿಲೆ ಹಾಗೂ ಎಂಟು ಮೂಲೆಗಳಲ್ಲಿ ವಿವಿಧ ಶಿಲೆಗಳನ್ನಿಡುವ ಕಾರ್ಯ ಶಾಸ್ತ್ರ ಶುದ್ಧ ಪೂಜಾವಿಧಿ ಪೂರ್ಣಗೊಂಡಿದೆ. 300×400 ಅಡಿ ಪ್ರದೇಶದಲ್ಲಿರುವ 12 ಮೀಟರ್ (40 ಅಡಿ) ಆಳದ ಮಣ್ಣನ್ನು ತೆಗೆಯಲಾಗಿದೆ. ಆ ಭಾಗದಲ್ಲಿ ಕಡಿ, ಮರಳು, ಬೂದಿ, ಸ್ವಲ್ಪ ಪ್ರಮಾಣದ ಸಿಮೆಂಟಿನ ಮಿಶ್ರಣ ತುಂಬಿಸುವ ಕೆಲಸ ನಡೆಯುತ್ತಿದೆ. ಈ ಕೆಲಸ ಅಕ್ಟೋಬರ್ ಅಂತ್ಯದಲ್ಲಿ ಪೂರ್ಣಗೊಳ್ಳಲಿದೆ.
ಮಂದಿರ ನಿರ್ಮಾಣಕ್ಕೆ ಅವಶ್ಯವಿರುವ ಜನ್ಮಭೂಮಿ ಪರಿಸರದ ಅಕ್ಕಪಕ್ಕದ ಸ್ಥಾನಗಳನ್ನು ಖರೀದಿಸುವ ಪ್ರಯತ್ನ ನಡೆಯುತ್ತಿದೆ.
ಫಕೀರರಾಮ ಮಂದಿರ, ಕೌಸಲ್ಯಾ ಭವನವನ್ನು ಟ್ರಸ್ಟ್ ತನ್ನದಾಗಿಸಿಕೊಂಡಿದೆ. ಉಳಿದವರ ಜತೆಗೆ ಮಾತುಕತೆ ನಡೆದಿದೆ. ಅಗತ್ಯ ಭೂಮಿ ಸಿಗುವ ವಿಶ್ವಾಸ ಇದೆ. ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಧರ್ಮಶಾಲೆ ನಿರ್ಮಿಸಲು ಸ್ಥಳ ಖರೀದಿಸಲಾಗುತ್ತಿದೆ. ಶ್ರೀರಾಮ ಮಂದಿರ ನಿರ್ಮಾಣದ ಜತೆಗೆ ಯಾಗಶಾಲೆ, ಗೋಶಾಲೆ, ವೇದ ಪಾಠಶಾಲೆ, ಮ್ಯೂಸಿಯಂ ಇತ್ಯಾದಿಗಳ ನಿರ್ಮಾಣವಾಗಲಿದೆ. ಯೋಜನೆಗಳ ನೀಲಿನಕ್ಷೆ ಅಂತಿಮ ಹಂತದಲ್ಲಿದೆ .
Click this button or press Ctrl+G to toggle between Kannada and English