ಮಂಗಳೂರು :ಮಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿ, ಜೆಡಿಎಸ್ ಹೊಯ್ ಗೆ ಬಜಾರ್ ಮೀನುಗಾರಿಕಾ ಘಟಕದ ಅಧ್ಯಕ್ಷರಾಗಿದ್ದ ಗಿರೀಶ್ ಪುತ್ರನ್(50) ಎಂಬವರ ಮೃತದೇಹ ಭೀಕರವಾಗಿ ಕೊಲೆಗೀಡಾದ ಸ್ಥಿತಿಯಲ್ಲಿ ಶನಿವಾರ ರಾತ್ರಿ ಪೆರ್ಮುದೆ ಗ್ರಾಮದ ಬೊಳ್ಳುಳ್ಳಿಮಾರ್ ಮೂರುಕೋಡಿ ಎಂಬಲ್ಲಿ ಪತ್ತೆಯಾಗಿದೆ. ಗಿರೀಶ್ ಕಳೆದ ಡಿಸೆಂಬರ್ 21 ಶುಕ್ರವಾರದಂದು ಸಂಜೆ ಮನೆಯಿಂದ ಹೊರಗೆ ತೆರಳಿದ್ದವರು ನಾಪತ್ತೆಯಾಗಿದ್ದರು. ಈ ಬಗ್ಗೆ ಅವರ ಪತ್ನಿ ಪ್ರಫುಲ್ಲ ಅವರು ಪಾಂಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದರು.
ಪೊಲೀಸರು ಹಾಗೂ ಮನೆಯವರು ಹುಡುಕಾಟ ನಡೆಸುತ್ತಿದ್ದು ನಿನ್ನೆ ಸಂಜೆ ಎಂಆರ್ಪಿಎಲ್ನ ದ್ರವ ತ್ಯಾಜ್ಯ ವಿಲೇವಾರಿ ಮಾಡುವ ಜಾಗದ ಬಳಿಯ ಪೊದೆಯಲ್ಲಿ ಗಿರೀಶ್ ಪುತ್ರನ್ ಅವರ ಮೃತದೇಹ ಪತ್ತೆಯಾಗಿದೆ. ಮೃತದೇಹದ ಮೇಲೆ ಚಾಕು ಚೂರಿಯಿಂದ ಇರಿದ ಗುರುತುಗಳಿದ್ದು, ಆರೋಪಿಗಳು ಅಪಹರಿಸಿ ಕೊಲೆ ನಡೆಸಿರಬೇಕು ಎಂದು ಶಂಕಿಸಲಾಗಿದೆ. ಘಟನಾ ಸ್ಥಳದಲ್ಲಿ ಕೊಲೆ ನಡೆದಿರುವ ಬಗ್ಗೆ ಯಾವುದೇ ಸುಳಿವಿಲ್ಲದ ಕಾರಣ ಬೇರೆಡೆ ಕೃತ್ಯವೆಸಗಿ ಬಳಿಕ ಈ ಸ್ಥಳಕ್ಕೆ ತಂದು ಎಸೆದಿರುವುದಾಗಿ ಶಂಕಿಸಲಾಗಿದೆ. ತ್ಯಾಜ್ಯ ವಿಲೇವಾರಿ ಸ್ಥಳದಲ್ಲಿರುವ ಸಿಸಿ ಕ್ಯಾಮರಾದ ಆಧಾರದಲ್ಲಿ ಆರೋಪಿಗಳ ಸುಳಿವು ಪತ್ತೆಯಾಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಬಜಪೆ ಇನ್ಸ್ಪೆಕ್ಟರ್ ದಿನಕರ ಶೆಟ್ಟಿ ನೇತೃತ್ವದ ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿದೆ.
Click this button or press Ctrl+G to toggle between Kannada and English