ಬೆಂಗಳೂರು: ರಾಷ್ಟ್ರೀಯ ಸೇವಾ ಯೋಜನೆ ಕೋಶ, ಬೆಂಗಳೂರು ವಿಶ್ವವಿದ್ಯಾಲಯ ಇವರ ವರಿಯಿಂದ ಆಯೋಜಿಸಿದ್ದ “ಭಾರತದ ಸಂವಿಧಾನದ ಅಡಿಯಲ್ಲಿ ಸಾಮಾಜಿಕ ನ್ಯಾಯ” ಕುರಿತು ಏರ್ಪಡಿಸಲಾದ ವಿಚಾರ ಕಲರವ ಮೂರನೇ ಉಪನ್ಯಾಸ ಮಾಲಿಕೆಯಲ್ಲಿ ನಿವೃತ್ತ ಉಚ್ಛನ್ಯಾಯಾಲಯದ ನ್ಯಾಯಾಧೀಶರಾದ ಹೆಚ್. ನಾಗಮೋಹನ್‍ದಾಸ್ ರವರು ಭಾಗವಹಿಸಿದ್ದರು.
ಭಾರತವನ್ನು ಅರಿಯದೇ ಸಂವಿದಾನವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಸಮಾಜದಲ್ಲಿರುವ ದುರ್ಬಲರು, ಬಡತನದಿಂದ ಬಳಲುತ್ತಿರುವವರು, ಅನಕ್ಷರಸ್ಥರು, ಭೂ ಹೀನರು, ರೋಗಗ್ರಸ್ಥರು, ನಿರುದ್ಯೋಗಿಗಳು, ಹಿಂದುಳಿದ ವರ್ಗದವರನ್ನು ಮುಂದೆ ತಂದು ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವುದೇ ಸಂವಿಧಾನದ ಬಹು ಮುಖ್ಯ ಉದ್ದೇಶ ಎಂದು ನಿವೃತ್ತ ನ್ಯಾಯಮೂರ್ತಿ ಹೆಚ್. ನಾಗಮೋಹನ ದಾಸ್ ಅವರು ಹೇಳಿದರು.
ಸಾಮಾಜಿಕ ನ್ಯಾಯವನ್ನು ಮಾನವ ಹಕ್ಕುಗಳ ವ್ಯಾಖ್ಯಾನದಡಿ ತಂದು ಹಲವಾರು ಹಕ್ಕುಗಳನ್ನು ರಕ್ಷಣೆ ಮಾಡಬೇಕಾಗಿದೆ. ಮೀಸಲಾತಿ ಒಂದೇ ಸಾಮಾಜಿಕ ನ್ಯಾಯ ವ್ಯಾಪ್ತಿಯಡಿಯಲ್ಲಿ ಬರುವುದಿಲ್ಲ ಹಾಗೂ ಸಾಮಾಜಿಕ ನ್ಯಾಯವೆಂದರೆ ಕೇವಲ ಮೀಸಲಾತಿ ಸಿದ್ದಾಂತವನ್ನು ಒಳಪಡಿಸುವುದಲ್ಲ. ಇಂದಿನ ದಿನಗಳಲ್ಲಿ ಮೀಸಲಾತಿ ತನ್ನ ಮಹತ್ವವನ್ನೇ ಕಳೆದುಕೊಂಡಿದೆ. ಸರ್ಕಾರಗಳು ಸಾರ್ವಜನಿಕ ವಲಯಗಳನ್ನು ಖಾಸಗಿ ವಲಯಗಳಾಗಿ ಮಾರ್ಪಡಿಸಿದ ಸಂದರ್ಭದಲ್ಲಿ ಸಾಮಾಜಿಕ ನ್ಯಾಯದ ಗುರಿ, ಉದ್ದೇಶಗಳನ್ನ ವಿಫಲ ಮಾಡಿದಂತೆ ಎಂದು ಹೇಳಿದರು.
ಎಷ್ಟೋ ಸರ್ಕಾರಿ ಸಂಸ್ಥೆಗಳಲ್ಲಿ ಕಾಲಕಾಲಕ್ಕೆ ಆಗಬೇಕಾದ ನೇಮಕಾತಿಗಳನ್ನು ಮುಂದೂಡಿ, ಇಂದಿಗೂ ಒಪ್ಪಂದ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಜನರಿಗೆ ಉದ್ಯೋಗವನ್ನು ನೀಡುತ್ತಿರುವುದು ಸಾಮಾಜಿಕ ನ್ಯಾಯದ ಉದ್ದೇಶಗಳನ್ನು ಬುಡಮೇಲು ಮಾಡಿದಂತಾಗಿದೆ. ಹಿಂದೆ ರೈತರು ಗ್ರಾಮಗಳಲ್ಲಿ ಜನರಿಗೆ ಉದ್ಯೋಗ ನೀಡುತ್ತಿದ್ದರು. ಆದರೆ ಇಂದಿನ ಸರ್ಕಾರಗಳ ಅವೈಜ್ಞಾನಿಕ ಹಾಗೂ ಅಸಮಂಜಸ ಕೃಷಿ ನೀತಿಗಳಿಂದ ರೈತರು ಕಂಗಾಲಾಗಿ ಮೀಸಲಾತಿಯನ್ನು ಕೇಳುವಂತಾಗಿದೆ. ಆರ್ಥಿಕ ಆಧಾರದ ಮೇಲೆ ಶೇಕಡ 10 ರಷ್ಟು ಕೊಟ್ಟಿರುವ ಮೀಸಲಾತಿ ಅಸಂವಿದಾನ ಹಾಗೂ ಇದರ ಬಗ್ಗೆ ಯಾವುದೇ ಆಯೋಗಗಳನ್ನು ರಚಿಸದೆ ತರಾತುರಿಯಲ್ಲಿ ಯಾವುದೇ ಚರ್ಚೆಗೆ ಒಳಪಡಿಸದೆ ಸಂವಿಧಾನ ತಿದ್ದುಪಡಿ ಮಾಡಿರುವುದು ನಿಜಕ್ಕೂ ವಿಷಾದನೀಯ ಎಂದ ನಿವೃತ್ತ ನ್ಯಾಯಮೂರ್ತಿಗಳು ಸರ್ವೋಚ್ಛ ನ್ಯಾಯಾಲಯದ ಹಲವಾರು ತೀರ್ಪುಗಳ ಬಗ್ಗೆ ಸವಿವರಾಗಿ ತಿಳಿಸಿಕೊಟ್ಟರು.
ಬೆಂಗಳೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಕೆ.ಆರ್. ವೇಣುಗೋಪಾಲ್ ಅವರು ಸಾಮಾಜಿಕ ನ್ಯಾಯ ವಿಚಾರದಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಾಮೂಹಿಕವಾಗಿ ಕರ್ತವ್ಯ ನಿರ್ವಹಿಸಿ ಮೌಲ್ಯ ಮತ್ತು ಉದ್ದೇಶಗಳನ್ನು ಎತ್ತಿಹಿಡಿಯಬೇಕು ಎಂದು ಹೇಳಿದರು.
ಈ ಆನ್‍ಲೈನ್ ಕಾರ್ಯಕ್ರಮದಲ್ಲಿ ರಾಜ್ಯ ಎನ್.ಎಸ್.ಎಸ್. ಅಧಿಕಾರಿ ಪ್ರತಾಪ್ ಲಿಂಗಯ್ಯ, ಸಂಯೋಜನಾಧಿಕಾರಿ ಡಾ. ಎನ್. ಸತೀಶ್ ಗೌಡ, ರಾಜ್ಯದ ಎಲ್ಲಾ ವಿಶ್ವ ವಿದ್ಯಾಲಯಗಳ ವಿದ್ಯಾರ್ಥಿಗಳು, ಅಧ್ಯಾಪಕರುಗಳು, ಎನ್.ಎಸ್.ಎಸ್ ಸಂಯೋಜನಾಧಿಕಾರಿಗಳು, ಸಾರ್ವಜನಿಕರು ಸೇರಿದಂತೆ ಮೂರು ಸಾವಿರಕ್ಕು ಹೆಚ್ಚು ಜನರು ಯೂ ಟ್ಯೂಬ್ ಹಾಗೂ ಜೂಮ್ ಮೂಲಕ ಭಾಗವಹಿಸಿದ್ದರು.
ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್ ಬ್ಯುರೋ.
Click this button or press Ctrl+G to toggle between Kannada and English