ಬೆಂಗಳೂರು : ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಕನ್ನಡ ಚಿತ್ರರಂಗದ ಸಾವಿರಾರು ಕಾರ್ಮಿಕರಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಪ್ಯಾಕೇಜ್ ಘೋಷಿಸಿದ್ದಾರೆ. ಸರ್ಕಾರದ ಈ ನಿರ್ಧಾರಕ್ಕೆ ವಾಣಿಜ್ಯ ಮಂಡಳಿ ಹಾಗೂ ಕಾರ್ಮಿಕ ಒಕ್ಕೂಟ ಮುಖ್ಯಮಂತ್ರಿಗಳಿಗೆ ಧನ್ಯವಾದಗಳನ್ನ ತಿಳಿಸಿದೆ.
ಈಗಾಗಲೇ ಹಲವು ವೃತ್ತಿ ಹಾಗೂ ವಲಯಗಳ ಕಾರ್ಮಿಕರಿಗೆ ಪ್ಯಾಕೇಜ್ ಘೋಷಣೆ ಮಾಡಿದ್ದ ಮುಖ್ಯಮಂತ್ರಿಗಳನ್ನ ಚಲನಚಿತ್ರ ಕಾರ್ಮಿಕ ಒಕ್ಕೂಟದ ಗೌರವಾಧ್ಯಕ್ಷ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ ರಾ ಗೋವಿಂದು, ವಾಣಿಜ್ಯ ಮಂಡಳಿಯ ಗೌರವ ಕಾರ್ಯದರ್ಶಿ ಎನ್ ಎಂ ಸುರೇಶ್, ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಹಾಗೂ ನಟಿ ತಾರಾ ಅನುರಾಧಾ ಅವರು ಭೇಟಿ ಮಾಡಿ ತಮ್ಮ ಉದ್ಯಮದವರು ಕಷ್ಟಕ್ಕೆ ಸಿಲುಕಿದ್ದು, ಅವರಿಗೂ ಸಹಾಯ ಧನ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದರು.
ಈ ವೇಳೆ ಅವರ ಕೋರಿಕೆಗೆ ಸಹಮತಿ ಸೂಚಿಸಿದ್ದ ಮುಖ್ಯಮಂತ್ರಿಗಳು, ಇಂದು ಚಿತ್ರರಂಗದ ಕಾರ್ಮಿಕರಿಗೂ ಸರ್ಕಾರದ ನೆರವು ಘೋಷಿಸಿದ್ದಾರೆ. ಈ ವೇಳೆ ಮಾತನಾಡಿದ ವಾಣಿಜ್ಯ ಮಂಡಳಿಯ ಗೌರವ ಕಾರ್ಯದರ್ಶಿ ಎನ್ ಎಂ ಸುರೇಶ್,”ಎಲ್ಲ ಕಾರ್ಮಿಕರಂತೆ ನಮ್ಮ ಉದ್ಯತಮದವರೂ ಸಾಕಷ್ಟು ಕಷ್ಟಕ್ಕೆ ಒಳಗಾಗಿದ್ದರು. ಈ ಕಾರಣಕ್ಕೆ ಸಿಎಂ ಅವರಿಗೆ ನೆರವು ನೀಡುವಂತೆ ಮನವಿ ಮಾಡಿಕೊಂಡಿದ್ದೇವು. ನಮ್ಮ ಕೋರಿಕೆಗೆ ತಕ್ಷಣ ಸ್ಪಂದಿಸಿ, ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಕಾರ್ಮಿಕರ ಕಷ್ಟಕ್ಕೆ ಸರ್ಕಾರ ಸಕಾಲದಲ್ಲಿ ನೆರವಾಗಿರುವುದಕ್ಕೆ ಚಿತ್ರರಂಗದ ಪರವಾಗಿ ಮುಖ್ಯಮಂತ್ರಿಗಳಿಗೆ ಹೃದಯಪೂರ್ವಕವಾಗಿ ಧನ್ಯವಾದಗಳನ್ನ ಸಲ್ಲಿಸುತ್ತೇನೆ”, ಎಂದು ತಿಳಿಸಿದರು.
ಒಕ್ಕೂಟದ ಗೌರವಾಧ್ಯಕ್ಷ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ ರಾ ಗೋವಿಂದು ಮಾತನಾಡಿ,” ಚಿತ್ರರಂಗವನ್ನೇ ನಂಬಿ ಬದುಕು ಕಟ್ಟಿಕೊಂಡ ಸಾವಿರಾರು ಕುಟುಂಬಗಳು ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದವು. ಇಂಥಹ ಪರಿಸ್ಥಿತಿಯಲ್ಲಿ ಸರ್ಕಾರ ನಮ್ಮ ಕೋರಿಕೆಯನ್ನ ಪುರಸ್ಕರಿಸಿ ನೆರವಿಗೆ ಬಂದಿರುವುದು ನೆಮ್ಮದಿ ತಂದಿದೆ. ಈ ನಿರ್ಧಾರಕ್ಕೆ ಮುಖ್ಯಮಂತ್ರಿಗಳಿಗೆ ಧನ್ಯವಾದಗಳನ್ನ ಹೇಳುತ್ತೇನೆ,” ಎಂದರು.
ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್ ಬ್ಯುರೋ.
Click this button or press Ctrl+G to toggle between Kannada and English