ಮೈಸೂರು: ಮಾಧ್ಯಮಗಳಲ್ಲಿ ಪಾಲಿಕೆ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂಬ ವರದಿ ಬಂದ ಹಿನ್ನೆಲೆಯಲ್ಲಿ ನನ್ನನ್ನು ಗುರಿಯಾಗಿಸಿಕೊಂಡಿದ್ದಾರೆ. ಕೇಸ್ ಇಲ್ಲದ ಏರಿಯಾಗಳನ್ನ ರೆಡ್ ಜೋನ್ ಅಂತಾ ಘೋಷಣೆ ಮಾಡಿದ್ದಾರೆ. ಪಾಲಿಕೆಯ ಕೆಳ ಹಂತದ ಅಧಿಕಾರಿಗಳನ್ನು ಟಾರ್ಗೆಟ್ ಮಾಡುವುದನ್ನು ನಾನು ಸಹಿಸುವುದಿಲ್ಲಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮೇಲೆ ಆರೋಪ ಹೊರಿಸಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ರಾಜೀನಾಮೆ ಸಲ್ಲಿಸಿದ್ದಾರೆ.
ಸೂಕ್ತವಾಗಿ ಕೊರೋನಾ ನಿರ್ವಹಣೆ ಮಾಡಿದರೂ, ಪಾಲಿಕೆ ಕೆಲಸ ಮಾಡುತ್ತಿಲ್ಲ ಎಂದು ಬಿಂಬಿಸಲಾಗುತ್ತಿದೆ. ಸಿಎಸ್‌ಆರ್ ಫಂಡ್‌ನಿಂದ ನಾವು ಕೆಲಸ ಮಾಡುತ್ತಿದ್ದೇವೆ. ಒಬ್ಬರು ಐಎಎಸ್ ಅಧಿಕಾರಿಯಾಗಿ ಮತ್ತೊಬ್ಬ ಅಧಿಕಾರಿ ಮೇಲೆ ದಬ್ಬಾಳಿಕೆ ಮಾಡೋದು ಎಷ್ಟು ಸರಿ. ನನ್ನನ್ನು ತುಳಿಯುವ ವ್ಯವಸ್ಥಿತ ಪಿತೂರಿ ನಡೆದಿದೆ ಎಂದು ನೇರವಾಗಿ ರೋಹಿಣಿ ಸಿಂಧೂರಿ ವಿರುದ್ದ ಆರೋಪ ಮಾಡಿದರು.
ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ. ಉಸಿರುಗಟ್ಟಿಸುವ ವಾತಾವರಣದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ಜಾತಿ ವಿಚಾರದಲ್ಲೂ ನನ್ನ ಬಗ್ಗೆ ಅಪಪ್ರಚಾರ ನಡೆಸಿದ್ದಾರೆ ಹೀಗಾಗಿ ಈ ನಿರ್ಧಾರಕ್ಕೆ ಬಂದಿದ್ದೇನೆ. ನನ್ನ ಈ ನಿರ್ಧಾರದಿಂದ ಯಾರಿಗೆ ಸಂತೋಷ ಆಗುತ್ತದೆ ಆಗಲಿ. ನಿರಂತರ ಅಪಮಾನವನ್ನು ಸಹಿಸಲು ಸಾಧ್ಯವಿಲ್ಲ ಎಂದು ಬೇಸರ ಹೊರ ಹಾಕಿದರು.
ಶಿಲ್ಪಾ ನಾಗ್ ಪರ ವಹಿಸಿ ಸುದ್ದಿಗೋಷ್ಠಿ ನಡೆಸಿದ 65 ಕಾರ್ಪೋರೇಟರ್ಗಳು, ಇದು ಮೈಸೂರು ಮಹಾನಗರ ಪಾಲಿಕೆಯ ಕರಾಳ ದಿನ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಶಿಲ್ಪಾ ನಾಗ್ ಮೈಸೂರು ಮಹಾನಗರ ಪಾಲಿಕೆಗೆ ಉತ್ತಮ ಅಧಿಕಾರಿಯಾಗಿದ್ದರು. ಅವರು ಒಳ್ಳೆಯ ಕೆಲಸ ಮಾಡುತ್ತಿದ್ದರು, ಒಳ್ಳೆಯ ಕೆಲಸ ಮಾಡುವುದೇ ತಪ್ಪಾ? ಎಂದು ಪ್ರಶ್ನಿಸಿರುವ ಕಾರ್ಪೋರೇಟರ್ಗಳು, ಶಿಲ್ಪಾ ನಾಗ್ ಅವರ ರಾಜೀನಾಮೆ ಅಂಗೀಕರಿಸಬಾರದು ಎಂದು ಆಗ್ರಹಿಸಿದ್ದಾರೆ.
ಸಾಮೂಹಿಕವಾಗಿ ಸರ್ವಪಕ್ಷಗಳ ಕಾರ್ಪೋರೇಟರ್‌ಗಳು ಈ ಆಗ್ರಹ ವ್ಯಕ್ತಪಡಿಸಿದ್ದು, ಒಬ್ಬ ಅಧಿಕಾರಿಗೆ ಇಷ್ಟೆಲ್ಲ ಕಿರುಕುಳ ಕೊಡುತ್ತಿರುವುದು ಸರಿಯಲ್ಲ. ಅವರು ಸಿಎಸ್ಆರ್ ಫಂಡ್ ಉಪಯೋಗಿಸಿದ್ದಾರೆ ನಿಜ. ಅವರಿಗೇಕೆ ಇಷ್ಟು ಹಿಂಸೆ ಕೊಟ್ಟಿದ್ದೀರಿ ಎಂದು ಈ ಕಾರ್ಪೋರೇಟರ್ಗಳು ರೋಹಿಣಿ ಸಿಂಧೂರಿ ಅವರನ್ನುದ್ದೇಶಿಸಿ ಪ್ರಶ್ನಿಸಿದ್ದಾರೆ.
Click this button or press Ctrl+G to toggle between Kannada and English