ಕ್ರಿಸ್ಮಸ್ ಮನುಷ್ಯರನ್ನು ಪ್ರೀತಿಸುವ ಹಬ್ಬ

4:44 PM, Monday, December 24th, 2012
Share
1 Star2 Stars3 Stars4 Stars5 Stars
(No Ratings Yet)
Loading...

Christmas Celebrationsಮಂಗಳೂರು :ಭಾರತ ಹಬ್ಬಗಳ ನಾಡು. ನಮ್ಮ ಆಚಾರ – ವಿಚಾರಗಳು, ನಮ್ಮಲ್ಲಿ ಹೂತು ಹೋಗಿರುವ ನಂಬಿಕೆ, ಋತುಗಳ ಬದಲಾವಣೆಯಿಂದ ಬೆಳೆದು ಬಂದಿರುವ ಸಂಸ್ಕಾರ, ಸಂಭ್ರಮಗಳೆಲ್ಲ ಹಬ್ಬ ಹರಿದಿನಗಳ ಹೊನಲನ್ನೇ ಹರಿಸಿವೆ ಎಂದರೂ ತಪ್ಪಾಗಲಾರದು. ಹಬ್ಬಗಳು ಒಂದು ರೀತಿಯಲ್ಲಿ ನಮಗೆ ಜೀವಾಳವಾಗಿಬಿಟ್ಟಿವೆ.

ನಾವಾಚರಿಸುವ ಪ್ರತಿಯೊಂದು ಹಬ್ಬಕ್ಕೂ ತನದೇ ಆದ ವೈಶಿಷ್ಟ್ಯವಿದೆ. ಪ್ರತಿ ಹಬ್ಬಕ್ಕೂ ಇತಿಹಾಸವಿದೆ. ಒಂದು ನಿರ್ಧಿಷ್ಟ ಹಿನ್ನೆಲೆ ಇದೆ. ನಮ್ಮ ಸಂಸ್ಕೃತಿಯ ದೇಗುಲದಲ್ಲಿ ಹಬ್ಬಗಳು ದೀಪವಾಗಿ ನಿರಂತರ ಉರಿಯುತ್ತಲೇ ಇರುತ್ತವೆ. ಸಾವಿರಾರು ವರುಷಗಳ ಚರಿತ್ರೆ ಹೊಂದಿರುವ ನಮ್ಮ ನಾಡಲ್ಲಿ ಕೇವಲ ನಮ್ಮ ಹಬ್ಬಗಳಲ್ಲದೆ ನಮಗೆ ಬಳುವಳಿಯಾಗಿ ಇತರೆಡೆಗಳಿಂದ ಹಾಗೂ ಇತರ ಸಂಸ್ಕೃತಿಗಳಿಂದಲೂ ಅವೆಷ್ಟೋ ಬಂದು ಸೇರಿಕೊಂಡಿವೆ; ಮಾತ್ರವಲ್ಲ ಅವುಗಳಲ್ಲಿ ಹಲವು ನಮ್ಮ ಹಬ್ಬಗಳಾಗಿಬಿಟ್ಟಿವೆ. ಅವುಗಳಲ್ಲಿ ಕ್ರಿಸ್ಮಸ್ ಸಹ ಒಂದು.

ಸಾಧು – ಸಂತರುಗಳು, ಪುನೀತರು, ಮಹಾಪುರುಷರು, ದೈವಾವತಾರಿಗಳು ಆ ದೂರದ ಲೋಕದೆಡೆಗೆ ಬೆರಳೆತ್ತಿ ತೋರಿಸಿದರೆ ಕ್ರಿಸ್ಮಸ್ ಈ ಭೂಲೋಕದೆಡೆಗೆ ಕಣ್ಣಾಯಿಸುತ್ತದೆ. ಮಾನವ ದೇವರಂತಾಗಲು ಹಲವು ರೀತಿಯ ತಪಸ್ಸನ್ನು ಕೈಗೊಂಡರೆ ಕ್ರಿಸ್ಮಸ್ ದೇವರೇ ಮನುಷ್ಯತ್ವವನ್ನು ಪ್ರೀತಿಸಿ ಮನುಷ್ಯನಾಗಿ ಜನಿಸಿದ ಸತ್ಯವನ್ನು ಸಾರುತ್ತದೆ. ಕ್ರಿಸ್ತನ ಜನನ ಪೌರಾಣಿಕವಲ್ಲ, ಐತಿಹಾಸಿಕ, ಕಾಲ್ಪನಿಕವಲ್ಲ; ವಾಸ್ತವ. ಯಾವುದೋ ಕಾಲದಲ್ಲಿ ಜರುಗಿದ ಘಟನೆಯಾದರೂ ಇಂದೂ ಪ್ರಸ್ತುತ. ದೇವ ಮಾನವನಾದ – ಅದಕ್ಕೇ ಮಾನವರಾದ ನಮ್ಮೆಲ್ಲರ ಹಬ್ಬ ಇದು.

ಮನುಷ್ಯ ಮನುಷ್ಯತ್ವದ ಕುರಿತು ಮತ್ತೊಮ್ಮೆ ಚಿಂತಿಸಲು, ಮನುಷ್ಯತ್ವವನ್ನು ಇನ್ನೂ ಸ್ವಲ್ಪ ಹೆಚ್ಚಾಗಿ ಪ್ರೀತಿಸಲು ಕರೆಕೊಡುವ ಹಬ್ಬ. ಕ್ರಿಸ್ಮಸ್ ಸಾರವನ್ನು ಒಂದೇ ಮಾತಿನಲ್ಲಿ ಸೆರೆ ಹಿಡಿಯುವುದಾದರೆ ಅದನ್ನು ಹೀಗೆ ಹೇಳಬಹುದು:

ದೇವರು ನಮ್ಮ ದೈವತ್ವವನ್ನು ಕಳೆದುಕೊಂಡು ಮನುಷ್ಯತ್ವವನ್ನು ಬಯಸಿ ಮಗುವಾಗಿ ಜನಿಸಿದ ಪುಣ್ಯದಿನ?. ಸಂತ ಪೌಲರು “ದೇವರಿಗೆ ಸಮನಾದ ಪ್ರಭು ಕ್ರಿಸ್ತ ತನ್ನನ್ನೇ ಬರಿದು ಮಾಡಿಕೊಂಡು ಮಾನವ ರೂಪ ಧರಿಸಿ ಭುವಿಗೆ ಬಂದರು” ಎಂದು ನುಡಿಯುತ್ತಾರೆ. ಅದೊಂದು ದಿನ ಮರಿಯಾಳು ತನ್ನ ದಿನನಿತ್ಯದ ಕೆಲಸದಲ್ಲಿ ನಿರತಳಾಗಿದ್ದಾಗ ಈಕೆಯೆಡೆಗೆ ದೇವದೂತನೊಬ್ಬ ಕಾಣಿಸಿಕೊಂಡು,

“ಮರಿಯಾ, ನಿನಗೆ ಶುಭವಾಗಲಿ! ದೇವರ ಅನುಗ್ರಹ ನಿನ್ನ ಮೇಲಿದೆ. ಇಗೋ ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ. ಆ ಮಗುವಿಗೆ ಯೇಸು ಎಂದು ಹೆಸರಿಡಬೇಕು, ಆತನು ಮಹಾಪುರುಷನಾಗುವನು. ಪರಾತ್ಪರ ದೇವರ ಪುತ್ರ ಎನಿಸಿಕೊಳ್ಳುವನು. ಯಾಕೋಬನ ವಂಶವನ್ನು ಸದಾಕಾಲ ಆಳುವನು. ಆತನ ರಾಜ್ಯಕ್ಕೆ ಅಂತ್ಯವೇ ಇರದು” ಎಂದಾಗ ಯಾವ ಪುರುಷನ ಸಂಸರ್ಗವಿಲ್ಲದ ಮರಿಯಾಳು ತಬ್ಬಿಬ್ಬಾಗುತ್ತಾಳೆ. “ಇದು ಹೇಗೆ ಸಾಧ್ಯ” ಎಂಬ ಪ್ರಶ್ನೆಗೆ ಸಹಜವಾಗಿಯೇ ಗುರಿಯಾಗುತ್ತಾಳೆ.

ದೂತನು ಮತ್ತೆ ಮಾತನ್ನು ಮುಂದುವರಿಸಿ, “ನಿನ್ನ ಮೇಲೆ ಪವಿತ್ರಾತ್ಮರು ಬರುವರು, ಪರಾತ್ಪರನ ಶಕ್ತಿ ನಿನ್ನನಾವರಿಸುವುದು. ಆದ್ದರಿಂದ ಹುಟ್ಟಲಿರುವ ಆ ಪವಿತ್ರ ಶಿಶು ದೇವರ ಪುತ್ರ ಎನಿಸಿಕೊಳ್ಳುವನು…..” ಎಂದು ಹೇಳಿ ಅದೃಶ್ಯನಾಗುವನು. ಹೀಗೆ ಕನ್ನಿಕೆಯಾದ ಮರಿಯಾಳು ಪವಿತ್ರಾತ್ಮರಿಂದ ಗರ್ಭ ಧರಿಸಿ ಒಂದು ಮಗುವಿಗೆ ಜನ್ಮವೀಯುತ್ತಾಳೆ. ಹೀಗೆ ದೇವರ ವೇಷವಾದ ಮಧ್ಯಸ್ಥಿಕೆಯಿಂದ ಜನಿಸಿದ ಮಗುವೇ ಕ್ರಿಸ್ತ. ಆತನ ಜನ್ಮ ದಿನಾಚರಣೆಯೇ ಕ್ರಿಸ್ಮಸ್! ಆದರೆ ವಿಚಿತ್ರವೆಂದರೆ ಆ ದೇವರ ಶಿಶು ಹುಟ್ಟಿದ್ದು ಅರಮನೆಯಲ್ಲಲ್ಲ, ದನದ ಗೋದಲಿಯಲ್ಲಿ! ಮನುಷ್ಯತ್ವ ಕಳೆದು ಹೋಗಿರುವ ಮನುಷ್ಯರ ಮಧ್ಯೆ ಅಲ್ಲ, ಮನುಷ್ಯನ ಉಳಿವಿಗೆ ಹಾಲುಣಿಸುವ ಹಸುಗಳ ಮಧ್ಯೆ! ಹುಟ್ಟಿದ ಆ ಮಗುವನ್ನು ಮೊತ್ತ ಮೊದಲನೆಯದಾಗಿ ಕಾಣುವ ಭಾಗ್ಯ ಸಿಗುವುದು ಧರ್ಮಾಧಿಕಾರಿಗಲಳಿಗಲ್ಲ , ಕುರಿ ಕಾಯುತ್ತಿರುವ ಕುರಿಗಾಹಿಗಳಿಗೆ! ಮಾನವನ ಊಹೆಗೂ ನಿಲುಕದ ರೀತಿ ಒಂದು ವಿಶೇಷ ಜನನ, ಪವಿತ್ರ ಕಥನ ಎರಡು ಸಾವಿರ ವರುಷಗಳ ಹಿಂದೆ ಮಾನವನ ಚರಿತ್ರೆಯಲ್ಲಿ ಆರಂಭಗೊಳ್ಳುತ್ತದೆ.

ದಿವದಲಿ ಕುಳಿತು ನೋಡುವೆಯ ಮುನಿದು? ಧರೆಗಿಳಿದು ಬಂದು ಬಾಳು ನೀನಿಂದು ಓಡುವೆ ಎರಡೇ ದಿನಕ್ಕೆ ಇಲ್ಲಿನ ಕಷ್ಟ ನೀ ತಿಳಿದು!? ಎಂಬ ಮಾನವ ಕೂಗು ಮುಗಿಲಿಗೆ ಮುಟ್ಟಿರಬೇಕು. ಅದಕ್ಕುತ್ತರವಾಗಿ ಭಗವಂತನೇ ಮನಮರುಗಿ ಭುವಿಯ ಬದುಕನ್ನು ಅನುಭವಿಸಲು ತಾನಾಗಿಯೇ ಹುಟ್ಟಿ ಬಂದಿರಬೇಕು! ಅದೂ ಒಬ್ಬ ಬಡವನಾಗಿ, ಬಡ ಬಡಾಗಿಯ ಕೂಸಾಗಿ; ದೇವರ, ಧರ್ಮದ ಹೆಸರಿನಲ್ಲಿ ಬಡಪಾಯಿ ಮಾನವನನ್ನು ಧಾರ್ಮಿಕರು, ಅಧಿಕಾರಿಗಳು ಸೂರೆ ಮಾಡುತ್ತಿದ್ದ ಕಾಲದಲ್ಲಿ, ಸ್ಥಳದಲ್ಲಿ, ವಿಚಿತ್ರಗಳಲ್ಲಿ ವಿಚಿತ್ರ! ಹೀಗೆ ಮಾನವನ ದೂರದ ಕನಸು ಫಲಿಸಿದಂತಾಗುತ್ತದೆ. ಅವನ ಕಣ್ಣೀರಿನ ಮೊರೆಗೆ ಉತ್ತರ ದೊರಕಿದಂತಾಗುತ್ತದೆ. ಅವನ ಕಾರಿರುಳಿನ ಬಾಳಲ್ಲಿ ಮತ್ತೊಮ್ಮೆ ಬೆಳದಿಂಗಳು ಮೂಡುತ್ತದೆ. ನಗುವು ಚೆಲುವು ಚಿತ್ತಾರವಾಗುತ್ತದೆ.

ಇತಿಹಾಸದಲ್ಲಿ ಅತ್ಯಂತ ಶ್ರೇಷ್ಠವಾದ ಘಟನೆಯನ್ನು ಬಿತ್ತರಿಸುವ ಈ ಹಬ್ಬದಲ್ಲಿ ಅಪವಿತ್ರವೆನಿಸಲ್ಪಟ್ಟ ಮನುಷ್ಯತ್ವ ಪುನೀತವಾಗುತ್ತದೆ. ಗೌಣವಸ್ತುವೆಂದೆನಿಸಿದ ಮಾನವ ದೇಹ ಮಹತ್ವ ಪಡೆಯುತ್ತದೆ. ಅಂದರೆ ಬಲಹೀನತೆ ಶಕ್ತಿಯಾಗಿ, ಬಡತನ ಭಾಗ್ಯವಾಗಿ, ಮಿತಿಯೇ ಅಪರಿಮಿತವಾಗಿ, ಮನುಷ್ಯತ್ವವೇ ಮಹತ್ವದ ಮಾಣಕ್ಯವಾಗುತ್ತದೆ. ಅದಕ್ಕೆ ತಾನೇ ಆ ದೇವ ಮಾನವನಾಗಿ ಜನಿಸಿದ್ದು! ಈ ಸುಂದರ ಸಂದೇಶವನ್ನು ಸಾರುವ ಹಬ್ಬವೇ ಕ್ರಿಸ್ಮಸ್!

ನಾವೆಲ್ಲ ಅರ್ಥಪೂರ್ಣ ಕ್ರಿಸ್ಮಸ್ ಆಚರಿಸಬೇಕಾದರೆ ಮನುಷ್ಯತ್ವವನ್ನು ಪ್ರೀತಿಸಿ ಮನುಜನಾದ ಕ್ರಿಸ್ತನಂತೆ ಅಮಾನುಷ ಬಾಳನ್ನು ಸಾಗಿಸುತ್ತಿರುವ ಜನರೊಂದಿಗೆ ಬೆರೆಯಬೇಕು. ಅವರಿಗೆ ನಮ್ಮ ಸಹಾಯ ಹಸ್ತವನ್ನು ಚಾಚಬೇಕು. ಅವರ ಉಳಿವಿಗಾಗಿ ಚಿಕ್ಕಪುಟ್ಟ ತ್ಯಾಗಗಳನ್ನಾದರೂ ಮಾಡಲೇಬೇಕು.

ಸಾಂತಾಕ್ಲಾಸ್:

ಇವನಿಗೂ ಒಂದು ಇತಿಹಾಸವಿದೆ. 6 ನೇ ಶತಮಾನದಲ್ಲಿ ನಿಕೋಲಸ್ ಎಂಬ ಸಂತನಿದ್ದ. ಅವನು ಬಡ ಮಕ್ಕಳಿಗೆ ಅದರಲ್ಲೂ ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಸಹಾಯ ಮಾಡುತ್ತಿದ್ದ. ಯಾರಿಗೆ ಏನು ಬೇಕೆಂಬುದನ್ನು ಅವನೇ ಅರಿತು ಸಹಾಯ ಮಾಡುತ್ತಿದ್ದನಂತೆ. ಅವನ ಜ್ಞಾಪಕಾರ್ಥವಾಗಿ ಅವನ ವೇಷ ಧರಿಸಿದ ವ್ಯಕ್ತಿ ಮಕ್ಕಳಿಗೆ ಉಡುಗೊರೆ ನೀಡುವುದು ಈಗಲೂ ವಾಡಿಕೆ.

ಕ್ರಿಸ್ಮಸ್ ದೀಪಗಳು: ಕ್ರಿಸ್ಮಸ್ ಸಂದರ್ಭದಲ್ಲಿ ಸುಮಾರು ಒಂದು ತಿಂಗಳವರೆಗೆ ಮನೆಯ ಮುಂದೆ ಉರಿಸುವ ಈ ದೀಪಗಳಿಗೂ ಒಂದು ಹಿನ್ನೆಲೆ ಇದೆ. ಯೇಸು ಜನಿಸಿದಾಗ ಗಗನದಲ್ಲಿ ಹೊಳೆಯುವ ಹೊಸ ನಕ್ಷತ್ರಗಳು ಹುಟ್ಟಿದಂತೆ. ಅದನ್ನು ಕಂಡ ಮೂವರು ಜ್ಯೋತಿಷಿಗಳು ಅದನ್ನು ಹಿಂಬಾಲಿಸಿ ಜೆರುಸಲೇಮಿಗೆ ಧಾವಿಸಿ ಅಲ್ಲಿಯ ಅರಸನನ್ನು “ಅರಮನೆಯಲ್ಲಿ ಯುವರಾಜ ಹುಟ್ಟಿದನೇ” ಎಂದರಂತೆ. ಅದಕ್ಕೆ “ಇಲ್ಲ” ಎಂದ ಅರಸ. ತಕ್ಷಣ ಪಂಡಿತರನ್ನು ಕರೆಯಿಸಿ ಬೈಬಲ್ ಓದಿಸಿದಾಗ, ಬೈಬಲ್ನಲ್ಲಿ ದೇವಪುರುಷ ಹುಟ್ಟಿದಾಗ ಈ ನಕ್ಷತ್ರಗಳು ಕಾಣುತ್ತವೆಂದು ಉಲ್ಲೇಖವಿತ್ತoತೆ. ನಕ್ಷತ್ರಗಳನ್ನು ಹಿಂಬಾಲಿಸಿದಾಗ ಜೆರುಸಲೇಮಿನಿಂದ 5 ಕಿ. ಮೀ. ದೂರದ ಬೆತ್ಲೇಹೇಂನಲ್ಲಿ ಯೇಸುವಿನ ಜನನವಾಗಿತ್ತು. ಆಗ ಅಲ್ಲಿ ಆರಾಧನೆ ಮಾಡಿ ಕಪ್ಪ ಕಾಣಿಕೆ ಸಲ್ಲಿಸಲಾಯಿತು. ಆದರಿಂದ ಇಂದಿಗೂ ಕ್ರಿಸ್ಮಸ್ ದೀಪಗಳನ್ನು (ನಕ್ಷತ್ರಾಕಾರದ್ದು) ಬಳಸಲಾಗುತ್ತದೆ. “ನಾನೇ ಜಗತ್ಜ್ಯೂತಿ. ನನ್ನನು ಹಿಂಬಾಲಿಸುವವರು ಕತ್ತಲಿನಲ್ಲಿರುವುದಿಲ್ಲ” ಎಂದು ಯೇಸು ಹೇಳಿದ್ದಾನೆ. ಅಸತ್ಯದಿಂದ ಸತ್ಯದೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ ಜಗತ್ತನ್ನು ಕೊoಡೊಯ್ಯುವುದರ ಸಂಕೇತವೇ ಈ ದೀಪ.

ಕ್ರಿಸ್ಮಸ್ ಟ್ರೀ ಹಿಂದಿನ ಕಥೆ:

ಸುಂದರವಾಗಿ ಅಲಂಕರಿಸಲಾದ ಕ್ರಿಸ್ಮಸ್ ಟ್ರೀ ಹಬ್ಬದ ಪ್ರಮುಖ ಆಕರ್ಷಣೆ. ಇದು ಸಂತೋಷದ ಸಂಕೇತ, ಪಾಶ್ಚಾತ್ಯ ಪ್ರೇರಣೆ. ಯೂರೋಪಿನಲ್ಲಿ ಚಳಿಗಾಲದಲ್ಲಿ ಎಲ್ಲಾ ಮರಗಳು ಒಣಗಿದರೂ ಪೈನ್ ಎಂಬ ಮರ ಮಾತ್ರ ಹಸಿರಿನಿಂದ ಕೂಡಿರುತ್ತದಂತೆ. ಅದೇ ಕ್ರಿಸ್ಮಸ್ ಟ್ರೀ. ಆದ ಕಾರಣವೇ ಇಲ್ಲಿ ಕ್ರಿಸ್ಮಸ್ ಟ್ರೀ ಅಲಂಕಾರ ಮಾಡುವಾಗ ಅಲ್ಲಿಯಂತೆ ಹಿಮದ ಪ್ರತಿರೂಪ ಮಾಡಿ ಅಲಂಕರಿಸಲಾಗುವುದು. ಇದು ಒಂದು ಕಾರಣವಾದರೆ, ಮತ್ತೊಂದು ದಂತ ಕತೆಯೂ ಇದೆ. ಹಿಂದೆ ಮಕ್ಕಳನ್ನು ದೇವರಿಗೆ ಬಲಿ ಕೊಡುವ ಪರಿಪಾಠವಿತ್ತಂತೆ. ಇಂಗ್ಲೆಂಡಿನ ಕ್ರೈಸ್ತವಿನ್ ಫ್ರೈಡ್ ಎಂಬವನು ಒಮ್ಮೆ ಜರ್ಮನಿಯ ಕಾಡುಗಳಲ್ಲಿ ಓಡಾಡುತ್ತಿದ್ದಾಗ ಒಂದು ಓಕ್ ಮರವನ್ನು ಕಂಡ. ಅದಕ್ಕೆ ಅಸಲ್ಪ್ ಎಂಬ ಕಿರಿಯ ರಾಜಕುಮಾರನನ್ನು ಕಟ್ಟಿ ಬಲಿ ಕೊಡುವ ಸಿದ್ಧತೆಯಾಗಿತ್ತು.

ವಿನ್ ಫ್ರೈಡ್ ಓಕ್ ಮರ ಕತ್ತರಿಸಿ ಮಗುವನ್ನು ರಕ್ಷಿಸಿದ. ಆಗ ಥೋರ್ ಎಂಬ ದೇವತೆಯ ಆರಾಧಕರು ವಿನ್ಫ್ರೈಡ್ನನ್ನು ಸಾಯಿಸಲು ನಿಶ್ಚಯಿಸಿದರು. ಆಗ ಅವರ ಕಣ್ಣ ಮುಂದೆಯೇ ಓಕ್ ಮರದ ಜಾಗದಲ್ಲಿಯೇ ಫರ್ ಮರ ಹುಟ್ಟಿಕೊಂಡಿತು. ಇದು ಸಂಜೀವಿನಿಯ ಮರವಾಗಿತ್ತು. ಈ ವೃಕ್ಷ ಕ್ರೈಸ್ತನ ಪ್ರತೀಕ ಎಂದು ವಿನ್ಫ್ರೈಡ್ ಹೇಳಿದಾಗ ಉಳಿದವರು ಚಕಿತರಾದರು. ಪರಿವರ್ತಿತರಾದರು. ಇದಾದ ಎಷ್ಟೋ ಕಾಲದ ಮೇಲೆ ಜರ್ಮನಿಯಮಾರ್ಟಿನ್ ಲೂಥರ್ ಕ್ರಿಸ್ಮಸ್ ವೃಕ್ಷದ ಮೇಲೆ ಮೊಂಬತ್ತಿಗಳನ್ನು ಮೊದಲಿಗೆ ಹಚ್ಚಿದನೆoದು ತಿಳಿಯಲಾಗಿದೆ. ಒಟ್ಟಿನಲ್ಲಿ ಕ್ರಿಸ್ಮಸ್ ಟ್ರೀ ಸಮೃದ್ಧಿ, ಸಂತೋಷದ ಸಂಕೇತ; ಪರೋಪಕಾರವನ್ನು ಇದು ಸಾರುತ್ತದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English