ಬೆಂಗಳೂರು: ಕೋವಿಡ್ – 19 ಎರಡನೇ ಅಲೆಯನ್ನು ನಿಯಂತ್ರಿಸಲು ಸರ್ಕಾರ ವಾಣಿಜ್ಯ ಮತ್ತಿತರ ಚಟುವಟಿಕೆಗಳಿಗೆ ನಿರ್ಬಂಧಗಳನ್ನು ವಿಧಿಸುವುದು ಅನಿವಾರ್ಯವಾಗಿತ್ತು. ಈ ನಿರ್ಬಂಧದಿಂದಾ ಉಂಟಾದ ಆರ್ಥಿಕ ಸಂಕಷ್ಟವನ್ನು ಪರಿಹರಿಸಲು ಪ್ಯಾಕೇಜ್ ಘೋಷಣೆ ಮಾಡಿರುವ ಸರ್ಕಾರ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸರ್ಕಾರದಿಂದ ಘೋಷಣೆ ಮಾಡಲಾದ ಸಹಾಯಧನವನ್ನು ನೇರ ನಗದು ವರ್ಗಾವಣೆ ಮೂಲಕ ಜಮೆ ಮಾಡುವ ಕಾರ್ಯಕ್ಕೆ ಇಂದು ಮುಖ್ಯಮಂತ್ರಿಗಳು ಚಾಲನೆ ನೀಡಿದರು.
ಇಂದು ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಈ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿಗಳು ಕೋವಿಡ್ ಎರಡನೇ ಅಲೆಯಿಂದಾಗಿ ಉಂಟಾಗಿರುವ ಆರ್ಥಿಕ ಸಂಕಷ್ಟವನ್ನು ಪರಿಹರಿಸಲು ಸರ್ಕಾರ ದುರ್ಬಲ ವರ್ಗ, ಅಸಂಘಟಿತ ವಲಯ, ಶ್ರಮಿಕ ಜೀವಿಗಳಿಗೆ 1250 ಕೋಟಿರೂಗಳ ಪರಿಹಾರ ಪ್ಯಾಕೇಜ್‍ನ್ನು ಘೋಷಣೆ ಮಾಡಿ ಜೊತೆಗೆ ಮೀನುಗಾರರು, ಆಶಾ ಕಾರ್ಯಕರ್ತೆಯರು, ಅರ್ಚಕರು, ಅನುದಾನ ರಹಿತ ಶಾಲಾ ಶಿಕ್ಷಕರಿಗೂ ಪರಿಹಾರ ಘೋಷಣೆ ಮಾಡಲಾಗಿದೆ ಎಂದು ಹೇಳಿದರು.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಿಕೊಂಡಿರುವ ಕಾರ್ಮಿಕರಿಗೆ ತಲಾ 3000/- ರೂ ಗಳಂತೆ ಒಟ್ಟು 749.55 ಕೋಟಿಗಳ ಪರಿಹಾರವನ್ನು ವಿತರಿಸಲಾಗುತ್ತಿದೆ. ಸುಮಾರು 25 ಲಕ್ಷ ಕಟ್ಟಡ ಕಾರ್ಮಿಕರಿಗೆ ಅನುಕೂಲವಾಗಲಿದೆ.
ಕ್ಷೌರಿಕರು, ಅಗಸರು, ಟೈಲರ್‍ಗಳು, ಗೃಹ ಕಾರ್ಮಿಕರು, ಮೆಕ್ಯಾನಿಕ್‍ಗಳು, ಚಿಂದಿ ಆಯುವವರು, ಹಮಾಲರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು ಹಾಗೂ ಭಟ್ಟಿ ಕಾರ್ಮಿಕರು ಕೇರಿದಂತೆ ಇನ್ನಿತರೆ 11 ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ತಲಾ 2000/- ರೂಗಳಂತೆ ಒಟ್ಟು 66.09 ಕೋಟಿ ಪರಿಹಾರ ಧನವನ್ನು ಬಿಡುಗಡೆ ಮಾಡಲಾಗಿದ್ದು, 3.30 ಲಕ್ಷ ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಆತ್ಮ ನಿರ್ಭರ್ ನಿಧಿಯಲ್ಲಿ ನೋಂದಣಿ ಹೊಂದಿರುವ ರಸ್ತೆ ಬದಿಯ ವ್ಯಾಪರಸ್ಥರಿಗೆ ತಲಾ 2000/- ರೂಗಳಂತೆ ಒಟ್ಟು 4.82 ಕೋಟಿ ರೂಗಳ ಪರಿಹಾರವನ್ನು ಒಟ್ಟು 2.20 ಲಕ್ಷ ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ.
ಕಟ್ಟಡ ಕಾರ್ಮಿಕರು, ಕಾಯಕ ಜೀವಿಗಳ ನೋವನ್ನು ಮನಗಂಡು ಸಂಕಷ್ಟದ ಸಮಯದಲ್ಲಿ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದೆ. ಕಟ್ಟಡ ನಿರ್ಮಾಣ ಸ್ಥಳಗಳು ಮತ್ತು ಕಾರ್ಮಿಕರ ವಸಾಹತುಗಳಲ್ಲಿ ಕೋವಿಡ್ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಮಿಕ ಕಲ್ಯಾಣ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ಕಾರ್ಮಿಕರಿಗೆ ಮಾಹಿತಿ ನೀಡಲು ಮತ್ತು ಕಾರ್ಮಿಕರ ದೂರುಗಳನ್ನು ಆಲಿಸಲು 24 ಘಿ 7 ಸಹಾಯವಾಣಿ ಸಂಖ್ಯೆ 155214 ನ್ನು ಸ್ಥಾಪಿಸಲಾಗಿದೆ. ಕಾರ್ಮಿಕರು ವಾಸಿಸುವ ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗಿದೆ ಹಾಗೂ ಅಗ್ಗಿಂದಾಗ್ಗೆ ಸ್ಯಾನಿಟೈಸೇಷನ್ ಮತ್ತು ನೈರ್ಮಲ್ಯೀಕರಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಕೋವಿಡ್ – 19 ನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಮಿಕರಿಗೆ ಲಸಿಕೆಯನ್ನು ನೀಡಲು ಕ್ರಮವಹಿಸಲಾಗುತ್ತಿದೆ. ಲಾಕ್‍ಡೌನ್ ಸಂದರ್ಭದಲ್ಲಿ ಕಾರ್ಮಿಕರಿಗೆ ವೇತನ ಪಾವತಿಸುವಂತೆ ಮಾಲೀಖರುಗಳಿಗೆ ಮನವಿಯನ್ನು ಮಾಡಲಾಗಿದೆ. ಇಂದು ಕಾರ್ಮಿಕರ ಬ್ಯಾಂಕ್ ಖಾತೆಗೆ ಪರಿಹಾರ ಧನವನ್ನು ಡಿ.ಬಿ.ಟಿ (ನೇರ ನಗದು ವರ್ಗಾವಣೆ) ಮೂಲಕ ಜಮೆ ಮಾಡಲಾಗುತ್ತಿದ್ದು, ಕಾರ್ಮಿಕರ ಜೀವನ ಸುಗಮಗೊಳಿಸಲು ಸರ್ಕಾರ ಪ್ರಯತ್ತಿಸುತ್ತಿದೆ. ಕೊರೋನಾ ಎರಡನೇ ಅಲೆಯನ್ನು ನಿಯಂತ್ರಿಸಲು ಸರ್ಕಾರ ಯುದ್ದೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದಕ್ಕಾಗಿ ಸರ್ಕಾರದೊಂದಿಗೆ ಕೈಜೋಡಿಸಿರುವ ಎಲ್ಲರಿಗೂ ತುಂಬುಹೃದಯದ ಧನ್ಯವಾದಗಳನ್ನು ಹೇಳಿದರು.
ಲಸಿಕೆ ಅಭಿಯಾನವು ರಾಜ್ಯದಲ್ಲಿ ಉತ್ತಮವಾಗಿ ನಡೆಯುತ್ತಿದ್ದು, ನಿನ್ನೆ ಸಂಜೆಯವರೆಗೆ ಒಟ್ಟು 1,47,12,834 ಡೋಸ್ ಲಸಿಕೆ ನೀಡಲಾಗಿದೆ. ನಿರ್ಮಾಣ ಕಾರ್ಮಿಕರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲು ಕ್ರಮವಹಿಸಲಾಗುತ್ತಿದೆ. ನಿರ್ಮಾಣ ಕಂಪನಿಗಳು ತಮ್ಮ ಕಾರ್ಮಿಕರು ಹಾಗೂ ಕುಟುಂಬದ ಅರ್ಹರಿಗೆ ಲಸಿಕೆ ಕೊಡಿಸುವ ಮೂಲಕ ಕಾರ್ಮಿಕರ ಆರೋಗ್ಯ ರಕ್ಷಣೆಗೆ ಮುಂದಾಗಬೇಕೆಂದು ಹೇಳಿದರು.
ಕೋವಿಡ್ ಸಾಂಕ್ರಾಮಿಕದ 3ನೇ ಅಲೆಯನ್ನು ಎದುರಿಸಲು ಸಹ ಸರ್ಕಾರ ಸಿದ್ದತೆ ನಡೆಸುತ್ತಿದ್ದು, ಇದಕ್ಕಾಗಿ ಡಾ. ದೇವಿಪ್ರಸಾದ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಪಡೆಯನ್ನು ರಚಿಸಲಾಗಿದೆ. ಈ ಕಾರ್ಯಪಡೆಯ ಶಿಫಾರಸ್ಸಿನನ್ವಯ ಕ್ರಮ ಕೈಗೊಳ್ಳಲಾಗುವುದು. ಕೊರೋನಾ ಸಾಂಕ್ರಾಮಿಕವನ್ನು ನಿಗ್ರಹಿಸಿ ಕರ್ನಾಟಕವನ್ನು ಕೊರೋನಾ ಮುಕ್ತ ರಾಜ್ಯವನ್ನಾಗಿಸಬೇಕು ಎಂದು ಕರೆ ನೀಡಿದರು.
ವರದಿ: ಶಂಭು.
ಮೆಗಾಮೀಡಿಯಾ ನ್ಯೂಸ್ ಬ್ಯುರೋ.
Click this button or press Ctrl+G to toggle between Kannada and English