ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ಸಿಇಟಿ ಅಂಕ ಪರಿಗಣಿಸಲು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಯಣ್ ಅವರಿಗೆ ಮನವಿ

3:12 PM, Sunday, June 6th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

SureshKumar ಬೆಂಗಳೂರು: ಈ ಬಾರಿಯ ದ್ವಿತೀಯ ಪಿ.ಯು.ಸಿ ಫಲಿತಾಂಶ ಘೋಷಣಾ ಪ್ರಕ್ರಿಯೆಯಲ್ಲಿ ಆಯಾ ವಿದ್ಯಾರ್ಥಿಗಳ ಪ್ರಥಮ ಪಿ.ಯು.ಸಿ. ಹಾಗೂ ಎಸ್.ಎಸ್.ಎಲ್.ಸಿ ಅಂಕಗಳನ್ನು ಮಾನದಂಡಗಳಾಗಿ ಪರಿಗಣಿಸಲಾಗುತ್ತಿದ್ದು, ವೃತ್ತಿಪರ ಕೋರ್ಸಿಗೆ ಪ್ರವೇಶ ಕಲ್ಪಿಸುವ ಸಿ.ಇ.ಟಿ. ಪರೀಕ್ಷೆಗೆ ಪಿ.ಯು.ಸಿ. ಫಲಿತಾಂಶವನ್ನು ಪರಿಗಣಿಸಿ ವೈಟೇಜ್ ನೀಡುವ ಪ್ರಕ್ರಿಯೆಯನ್ನು ಕೈಬಿಟ್ಟು, ಕೇವಲ ಸಿ.ಇ.ಟಿ ಪರೀಕ್ಷೆಗಳ ಅಂಕಗಳನ್ನು ಮಾತ್ರ ರ್ಯಾಂಕಿಂಗ್‍ಗೆ ಪರಿಗಣಿಸುವ ತೀರ್ಮಾವನ್ನು ತೆಗೆದುಕೊಳ್ಳಬೇಕಾಗಿ ಸಚಿವ ಸುರೇಶ್ ಕುಮಾರ್ ಅವರು ಉಪ ಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಅವರನ್ನು ಕೋರಿದ್ದಾರೆ. ಈ ಬಗ್ಗೆ ಸಚಿವರು ಬರೆದ ಪತ್ರದ ಅಂಶಗಳು ಕೆಳಕಂಡಂತಿವೆ.

ಮಾನ್ಯ ಉಪ ಮುಖ್ಯಮಂತ್ರಿಗಳೇ,

ದಿನಾಂಕ: 04-06-2021 ರಂದು ದ್ವಿತೀಯ ಪಿ.ಯು.ಸಿ ಪರೀಕ್ಷೆಗಳನ್ನು ರದ್ದುಪಡಿಸುವ ತೀಮಾನವನ್ನು ನಾವು ತೆಗೆದುಕೊಂಡಿದ್ದೇವೆ. ಕೋವಿಡ್ ಪ್ರಸರಣದ ತೀವ್ರತೆ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಗಳ ನಡುವೆ ಸಮತೋಲನ ತರಲು ಈ ರೀತಿಯ ನಿರ್ಧಾರವು ಅವಶ್ಯಕವಾಗಿತ್ತು. ಅದನ್ನು ತಮ್ಮೊಂದಿಗೆ ನಾನು ಹಂಚಿಕೊಂಡಿದ್ದೇನೆ.

ದ್ವಿತೀಯ ಪಿ.ಯು. ವಿದ್ಯಾರ್ಥಿಗಳನ್ನು ಪರೀಕ್ಷೆಯಿಲ್ಲದೇ ತೇರ್ಗಡೆ ಮಾಡುವ ನಿರ್ಧಾರದ ಹಿಂದೆ ನಾವು ನಿರ್ಧಿಷ್ಟವಾದ ತರ್ಕವನ್ನು ಅನುಸರಿಸಿದ್ದೇವೆ. ಈ ವಿದ್ಯಾರ್ಥಿಗಳ ಮೊದಲ ಪಿ.ಯು. ಅಂಕಗಳಲ್ಲದೇ, ಎಸ್.ಎಸ್.ಎಲ್.ಸಿ ಫಲಿತಾಂಶವನ್ನೂ ಪರಿಗಣಿಸಿ ಅದಕ್ಕೆ ಸಮನಾದ ಸೂಕ್ತ ಮೌಲ್ಯವನ್ನು ಸೇರ್ಪಡಿಸಿ ಗ್ರೇಡಿಂಗ್ ಫಲಿತಾಂಶವನ್ನು ನೀಡಲು ಸಹ ನಿರ್ಧಾರ ಮಾಡಿದ್ದೇವೆ. ಅಲ್ಲದೇ ಯಾವುದೇ ವಿದ್ಯಾರ್ಥಿಯು ತನ್ನ ಫಲಿತಾಂಶದ ಬಗ್ಗೆ ತೃಪ್ತಿ ಹೊಂದದೇ ಇದ್ದಲ್ಲಿ ಕ್ಲಪ್ತ ಸಮಯದಲ್ಲಿ ನಡೆಸಲಾಗುವ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದಾಗಿದೆಯೆಂದೂ ಘೋಷಿಸಿದ್ದೇವೆ. ಇಂದಿನ ಸಂದರ್ಭದಲ್ಲಿ ಇದಕ್ಕಿಂತ ಪ್ರಸ್ತುತವಾದ ನಿರ್ಧಾರವನ್ನು ತೆಗೆದುಕೊಳ್ಳುವುದು ಕಷ್ಟ ಸಾಧ್ಯವಾಗಿರುತ್ತದೆ.

ಸಾಮಾನ್ಯವಾಗಿ ದ್ವಿತೀಯ ಪಿ.ಯು. ಅಂಕಗಳನ್ನು ಸಿ.ಇ.ಟಿ ಪರೀಕ್ಷೆಗೆ ಪರಿಗಣಿಸಿ ಸೂಕ್ತ ವೈಟೇಜ್ ಕಲ್ಪಿಸುವ ಮೂಲಕ ಫಲಿತಾಂಶವನ್ನು ಘೋಷಿಸಲಾಗುತ್ತದೆ. ಈ ಬಾರಿಯೂ ಗ್ರೇಡಿಂಗ್ ಫಲಿತಾಂಶವು ವಿದ್ಯಾರ್ಥಿಗಳ ಪ್ರತಿಭೆಯನ್ನು ಖಚಿತವಾಗಿ ವ್ಯಕ್ತಪಡಿಸಿದರೂ ಅವರಿಗೆ ಅದನ್ನು ನಿರಾಕರಿಸಿ ಇನ್ನೊಮ್ಮೆ ಪರೀಕ್ಷೆ ಬರೆಯುವ ಅವಕಾಶವನ್ನು ಕಲ್ಪಿಸಲಿದೆ. ಹಾಗಾಗಿ ಈ ಬಾರಿಯ ದ್ವಿತೀಯ ಪಿ.ಯು. ವಿದ್ಯಾರ್ಥಿಗಳ ಫಲಿತಾಂಶವನ್ನು ಸಿ.ಇ.ಟಿ ಪರೀಕ್ಷೆಗೆ ಗಣನೆಗೆ ತೆಗೆದುಕೊಳ್ಳುವಾಗ ಈ ಫಲಿತಾಂಶವನ್ನು ಪ್ರಶ್ನಿಸಿ ಇನ್ನೊಮ್ಮೆ ಪರೀಕೆ ಬರೆಯಲಿಚ್ಛಿಸುವ ವಿದ್ಯಾರ್ಥಿಗಳಿಗೆ ಅನುಕೂಲವಾಗಬಹುದು ಎಂಬುದನ್ನು ಗಮನಿಸಬೇಕಾಗುತ್ತದೆ.

ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ ಈ ಬಾರಿಗೆ ಸೀಮಿತಗೊಂಡಂತೆ ತಮ್ಮ ಇಲಾಖೆಯು ನಡೆಸಲು ಉದ್ದೇಶಿಸಿರುವ ವೃತ್ತಿಪರ ಕೋರ್ಸ್ ದಾಖಲಾತಿಗೆ ಸಂಬಂಧಿಸಿದಂತೆ ಸಿ.ಇ.ಟಿ ಪರೀಕ್ಷೆಗೆ ವೈಟೇಜ್ ನೀಡುವ ಪ್ರಕ್ರಿಯೆಯನ್ನು ತಾವು ಕೈಬಿಟು, ಕೇವಲ ಸಿ.ಇ.ಟಿ ಪರೀಕ್ಷೆಗಳ ಅಂಕಗಳನ್ನು ಮಾತ್ರ ರ್ಯಾಂಕಿಂಗ್‍ಗೆ ಪರಿಗಣಿಸುವ ತೀಮಾನವನ್ನು ತೆಗೆದುಕೊಳ್ಳಬೇಕಾಗಿ ತಮ್ಮನ್ನು ಕೋರುತ್ತೇನೆ. ಈ ಕುರಿತಂತೆ ನಾನು ತಮ್ಮೊಂದಿಗೆ ಖುದ್ದಾಗಿ ಮಾತನಾಡಿರುವ ಅಂಶವನ್ನು ಸಹ ಇಲ್ಲಿ ಸ್ಮರಿಸುತ್ತೇನೆ ಎಂದು ಸಚಿವ ಸುರೇಶ್ ಕುಮಾರ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ವರದಿ: ಶಂಭು.
ಮೆಗಾಮೀಡಿಯಾ ನ್ಯೂಸ್‌ ಬ್ಯುರೋ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English