ಬೆಂಗಳೂರು : ಇಂದಿಗೂ ಮುಂದೆಯೂ ಯಡಿಯೂರಪ್ಪನವರೇ ನಮ್ಮ ನಾಯಕರು. ಅವರ ನಾಯಕತ್ವದಲ್ಲೇ ಪಕ್ಷ ಈ ಸಾಧನೆ ಮಾಡಿದೆ. ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ ತಿಳಿಸಿದರು.
ಸಿಎಂ ಪ್ರತಿಕ್ರಿಯೆ ಕುರಿತ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಪದೇ, ಪದೇ ಸಿಎಂ ಬದಲಾವಣೆ ಎಂಬ ಮಾತುಗಳು ಕೇಳಿ ಬರುತಿರುವುದರಿಂದ ಮುಖ್ಯ ಮಂತ್ರಿಗಳ ಮನಸಿಗೆ ನೋವಾಗಿದೆ. ದೇಶದಲ್ಲೇ ಎಲ್ಲಾ ಸಿಎಂಗಳಿಗಿಂತ ಹೆಚ್ಚು ಕ್ರಿಯಾಶೀಲರಾಗಿ ಜನಪರ ಕಾಳಜಿಯಿಟ್ಟುಕೊಂಡು ಮುಖ್ಯಮಂತ್ರಿಗಳು ಕಾರ್ಯ ನಿರ್ವಹಿಸಿದ್ದಾರೆ. ಹಗಲು ರಾತ್ರಿ ಕೆಲಸ ಮಾಡಿದ್ದಾರೆ. ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಮನೆ ಬಿಟ್ಟು ಆಚೆಯೇ ಬಂದಿಲ್ಲ. ಆದರೆ ನಮ್ಮ ಮುಖ್ಯಮಂತ್ರಿಗಳು ಕೋವಿಡ್ ಆರೈಕೆ ಕೇಂದ್ರಕ್ಕೆ ಭೇಟಿ ಕೊಟ್ಟಿದ್ದಾರೆ. ನಾಲ್ಕೈದು ಸಭೆಗಳನ್ನ ಆಯೋಜಿಸುವುದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು ಬಿಯು ನಂಬರ್ ಪಡೆದರೆ ಸರ್ಕಾರವೇ ಅವರ ವೆಚ್ಚ ಭರಿಸುವ ಸೌಲಭ್ಯ ನೀಡಿರುವುದು, ಎರಡು ಪ್ಯಾಕೇಜ್ ಗಳನ್ನ ಘೋಷಿಸಿದ್ದಾರೆ. ಇಷ್ಟೆಲ್ಲಾ ಮಾಡಿದಾಗಲೂ ಪದೇ ಪದೇ ನಾಯಕತ್ವ ಪ್ರಶ್ನೆ ಮೂಡುತ್ತಿರುವುದರಿಂದ ಅವರ ಮನಸಿಗೆ ಘಾಸಿಯಾಗಿ ಆ ರೀತಿ ಮಾತನಾಡಿರಬಹುದು ಎಂದು ಹೇಳಿದರು.
ಈಗಾಗಲೇ ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್, ಸಿ ಟಿ ರವಿ ಸೇರಿದಂತೆ ಹಲವು ನಾಯಕರು ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಾಧ್ಯಮಗಳಿಂದ ಬಿಂಬಿತರಾದ ಯೋಗೇಶ್ವರ್ ಕೂಡಾ ಯಡಿಯೂರಪ್ಪನವರೇ ನಮ್ಮ ಮುಖ್ಯಮಂತ್ರಿಗಳು ಎಂದು ಒಪ್ಪಿಕೊಂಡಿದ್ದಾರೆ. ಹೀಗಾಗಿ ಈ ಊಹಾಪೋಹಕ್ಕೆ ನಾವು ಶಾಶ್ವತ ತೆರೆ ಎಳೆಯಲು ನಿರ್ಧರಿಸಿದ್ದೇವೆ”, ಎಂದರು.
“ಕೋವಿಡ್ ನಂತಹ ಈ ಸಂದರ್ಭದಲ್ಲಿ ಈ ಹೇಳಿಕೆಗಳಿಂದ ಜನರ ಮನಸಿಗೆ ಘಾಸಿಯಾಗುತ್ತದೆ. ಅವರನ್ನ ತಪ್ಪು ದಾರಿಗೆ ಎಳೆಯುವ ಕೆಲಸ ಆಗಬಾರದು. ಇದಕ್ಕೆ ಫುಲ್‌ಸ್ಟಾಪ್ ಇಡುವ ಕೆಲಸ ಆಗಬೇಕು. ಅವರು ಹಳ್ಳಿ ಹಳ್ಳಿಗೆ ಹೋಗಿ ಪಕ್ಷ ಕಟ್ಟಿದ್ದಾರೆ. ಅವರ ನಾಯಕತ್ವ ಇಂದು ಬೇಕು, ಮುಂದೆಯೂ ಬೇಕು. ಅವರ ನಾಯಕತ್ವದಲ್ಲೆ ನಾವು ಮುಂದುವರೆಯುತ್ತೇವೆ. ಹೈಕಮಾಂಡ್ ಕೂಡಾ ಅವರ ಬೆಂಬಲಕ್ಕಿದೆ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಕೂಡಾ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಖಚಿತ ಪಡಿಸಿದ್ದಾರೆ”, ಎಂದು ತಿಳಿಸಿದರು.
ಮೈಸೂರು ಐಎಎಸ್ ಗಲಾಟೆ ವಿಚಾರಕ್ಕೆ ಸಂಬಂದಿಸಿದಂತೆ ಉತ್ತರಿಸಿದ ಅಶೋಕ, “ಈ ಹಿಂದೆ ಕಾಂಗ್ರಸ್ ಜೆಡಿಎಸ್ ಸರ್ಕಾರದಲ್ಲಿ ಹೋಟೆಲ್ ಗಳಲ್ಲೆಲ್ಲಾ ಕಿತ್ತಾಡಿಕೊಂಡಿದ್ದರು. ಇದು ಆ ಮಟ್ಟಕ್ಕೆ ಹೋಗಿಲ್ಲ. ಆಡಳಿತಾತ್ಮಕ ಚುರುಕು ಮುಟ್ಟಿಸುವುದಕ್ಕೆ ಮುಖ್ಯಮಂತ್ರಿಗಳು ತೆಗೆದುಕೊಂಡ ಈ ನಿರ್ಧಾರಕ್ಕೆ ಕಂದಾಯ ಸಚಿವನಾಗಿ ನಾನು ಸ್ವಾಗತ ಮಾಡುತ್ತೇನೆ”, ಎಂದು ಹೇಳಿದರು.
ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್ ಬ್ಯುರೋ.
Click this button or press Ctrl+G to toggle between Kannada and English