ಬೆಂಗಳೂರು : ನಿಸ್ಸಂಶಯವಾಗಿ ಬಿ ಎಸ್ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಅವರ ಬದಲಾವಣೆ ಕೇವಲ ಊಹಾಪೋಹ. ಈ ವಿಚಾರ ಮುಗಿದು ಹೋಗಿದ್ದು, ಪಕ್ಷದ ನಾಯಕರು ಸಿಎಂ ಬದಲಾವಣೆ ಕುರಿತಂತೆ ಹೇಳಿಕೆಗಳನ್ನ ನೀಡಿದರೆ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್ ಅಶೋಕ ಎಚ್ಚರಿಸಿದರು.
ಈ ಕುರಿತಂತೆ ಮಾಹಿತಿ ನೀಡಿದ ಆರ್ ಅಶೋಕ,”ರಾಜ್ಯ ಬಿಜೆಪಿ ಅಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಒಂದು ಸಮಿತಿಯನ್ನ ರಚಿಸಿದ್ದು, ಮುಖ್ಯಮಂತ್ರಿಗಳು, ಪ್ರಧಾನ ಕಾರ್ಯದರ್ಶಿ ಹಾಗೂ ಮೂವರು ಹಿರಿಯ ಸಚಿವರು ಇದರಲ್ಲಿ ಇರಲಿದ್ದಾರೆ. ಈ ಸಮಿತಿಯ ಉದ್ದೇಶವೇ ಊಹಾಪೋಹದ ಸುದ್ದಿಗಳಿಗೆ ಕಡಿವಾಣ ಹಾಕುವುದಾಗಿದೆ. ಅದು ಪರವಾದರೂ ಆಗಿರಬಹುದು ಅಥವಾ ವಿರುದ್ಧವಾದರು ಇರಬಹುದು. ಈ ಶಿಸ್ತನ್ನು ಉಲ್ಲಂಘಿಸಿದ್ದೇ ಆದಲ್ಲಿ ಅಂಥವರ ವಿರುದ್ಧ ಪಕ್ಷ ಗಂಭೀರ ಕ್ರಮ ಜರುಗಿಸಲಿದೆ”, ಎಂದು ಹೇಳಿದರು.
“ನಾನು ಈಗಾಗಲೇ ಸಿಎಂ ಬದಲಾವಣೆ ವಿಚಾರಕ್ಕೆ ಫುಲ್ ಸ್ಟಾಪ್ ಹಾಕಲಾಗಿದೆ ಎಂದು ಭಾನುವಾರವೇ ಸ್ಪಷ್ಟಪಡಿಸಿದ್ದೇನೆ. ಯಡಿಯೂರಪ್ಪನವರೇ ನಮ್ಮ ನಾಯಕರಾಗಿದ್ದು, ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ”, ಎಂದು ತಿಳಿಸಿದರು.
ಈ ವೇಳೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸಚ್ಚಿದಾನಂದಮೂರ್ತಿ ಹಾಗೂ ಸದಸ್ಯರು ಕಾವೇರಿಯಲ್ಲಿ ಅಸ್ಥಿ ವಿಸರ್ಜನೆಯ ಕಾರ್ಯ ಕೈಗೊಂಡ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
Click this button or press Ctrl+G to toggle between Kannada and English