ಸಂಭವನೀಯ ಕೋವಿಡ್ ಮೂರನೇ ಅಲೆಯನ್ನು ಎದುರಿಸಲು ಅಗತ್ಯದ ಸಿದ್ದತೆಗೆ ಈಗಿನಿಂದಲೇ ಕ್ರಮ ಜರುಗಿಸಿ

8:52 PM, Monday, June 7th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Gadaga ಗದಗ : ಜಿಲ್ಲೆಯಲ್ಲಿ ಕೋವಿಡ್ ಸೋಂಕು ದಿನದಿಂದ ದಿನಕ್ಕೆ ನಿಯಂತ್ರಣಕ್ಕೆ ಬರುತ್ತಿರುವದು ಸಮಾಧಾನಕರವಾದ ಸಂಗತಿಯಾಗಿದೆ. ತಜ್ಞರ ವರದಿಯಂತೆ ಮುಂದೆ ಬರಬಹುದಾದ ಸಂಭವನೀಯ ಮೂರನೇ ಅಲೆಯನ್ನು ಎದುರಿಸಲು ಅಧಿಕಾರಿಗಳು ಮೈಮರೆಯದೆ ಬೇಕಾದ ಅಗತ್ಯದ ಸಿದ್ಧತೆಗಳನ್ನು ಈಗಿನಿಂದಲೇ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಅವರು ಸೂಚಿಸಿದರು.

ಜಿಲ್ಲಾಧಿಕಾರಿಗಳ ವಿಡಿಯೋ ಸಭಾಂಗಣದಲ್ಲಿ ಜರುಗಿದ ಕೋವಿಡ್ ಸೋಂಕು ನಿಯಂತ್ರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಜ್ಞರ ವರದಿಯಂತೆ ಸಂಭವನೀಯ ಮೂರನೇ ಅಲೆಯು ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರುವ ಸಂಭವವಿದ್ದು ಇದನ್ನು ಯಶಸ್ವಿಯಾಗಿ ನಿರ್ವಹಿಸಲು ಬೇಕಾದಂತಹ ಅಗತ್ಯದ ಸಿದ್ಧತೆಗಳನ್ನು ಮಾಡಿಟ್ಟುಕೊಳ್ಳಬೇಕು. ಸಧ್ಯದ ಪರಿಸ್ಥತಿಯಲ್ಲಿ ಜಿಲ್ಲೆಯಲ್ಲಿ ಆಕ್ಸಿಜನ್ ಹಾಗೂ ಆಕ್ಸಿಜನ್‍ಯುಕ್ತ ಹಾಸಿಗೆಗಳ ಕೊರತೆ ಇರುವುದಿಲ್ಲ. ಮೂರನೇ ಅಲೆಯ ಪ್ರಭಾವದಿಂದಾಗಿ ಮಕ್ಕಳಲ್ಲಿ ಸೋಂಕು ಲಕ್ಷಣ ಕಂಡು ಬಂದರೆ ಅಂತಹ ಮಕ್ಕಳ ಮನೆಯಲ್ಲಿ ಆರೈಕೆ ಮಾಡಲು ಪೂರಕ ವಾತಾವರಣ ಇಲ್ಲದಿದ್ದರೆ ಅಂತಹ ಮಕ್ಕಳನ್ನು ಕೋವಿಡ್ ಕೇರ ಕೇಂದ್ರಗಳಿಗೆ ಸ್ಥಳಾಂತರಿಸಬೇಕು.

ಈಗಾಗಲೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೋವಿಡ್ ಕೇರ ಕೇಂದ್ರಗಳಲ್ಲಿನ ಒಂದು ಭಾಗವನ್ನು ಮಕ್ಕಳ ಆರೈಕೆಗೆ ಮೀಸಲಿಟ್ಟು ಅಗತ್ಯದ ನಾಮಫಲಕ ಹಾಕಲು ಕ್ರಮ ಕೈಗೊಳ್ಳಬೇಕು. ಅದೇ ರೀತಿ ಮಕ್ಕಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಅಗತ್ಯತೆ ಕಂಡುಬಂದರೆ ಆಸ್ಪತ್ರೆಯಲ್ಲಿಯೂ ಕೂಡ ಮಕ್ಕಳ ಚಿಕಿತ್ಸೆಗಾಗಿ ಕನಿಷ್ಠ 10 ಹಾಸಿಗೆಗಳ ವ್ಯವಸ್ಥೆ ಮಾಡಿಟ್ಟುಕೊಳ್ಳಬೇಕು. ಚಿಕಿತ್ಸೆಗಾಗಿ ದಾಖಲಾಗುವ ಮಕ್ಕಳಿಗೆ ನುರಿತ ಮಕ್ಕಳ ತಜ್ಞ ವೈದ್ಯರಿಂದಲೇ ಚಿಕಿತ್ಸೆ ಒದಗಿಸಲು ಕ್ರಮ ಜರುಗಿಸಬೇಕು. ಸೋಂಕಿಗೆ ತುತ್ತಾಗುವ ಮಕ್ಕಳ ಚಿಕಿತ್ಸೆಗಾಗಿ ಜಿಲ್ಲೆಯಲ್ಲಿ 100 ಹಾಸಿಗೆಗಳ ವ್ಯವಸ್ಥೆ ಮಾಡಿಕೊಳ್ಳುವಂತೆ ತಿಳಿಸಿದರು.

ಒಂದನೆ ಹಾಗೂ ಎರಡನೇ ಅಲೆಯ ಸೋಂಕಿಗೆ ತುತ್ತಾದ ಮಕ್ಕಳಲ್ಲಿ ಕಂಡು ಬಂದ ಸೋಂಕಿನ ಪ್ರಭಾವದಲ್ಲಿನ ವ್ಯತ್ಯಾಸವನ್ನು ಗಮನಿಸಿ ಮುಂದೆ ಬರಬಹುದಾದ ಸಂಭವನೀಯ ಮೂರನೆ ಅಲೆಗೆ ತುತ್ತಾಗುವ ಮಕ್ಕಳಿಗೆ ಯಾವ ರೀತಿ ಚಿಕಿತ್ಸೆ ಒದಗಿಸಬೇಕೆನ್ನುವದನ್ನು ಪರಿಶೀಲಿಸಬೇಕು. ಚಿಕಿತ್ಸಾ ಸಂದರ್ಭದಲ್ಲಿ ಮಕ್ಕಳಿಗೆ ನೀಡಬೇಕಾದ ಔಷಧಿಗಳ ಅಗತ್ಯದ ದಾಸ್ತಾನು ಮಾಡಿಟ್ಟುಕೊಳ್ಳುವಂತೆ ತಿಳಿಸಿದರು.

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯ ಪ್ರತಿ ಮನೆಗಳಿಗೆ ನಿರಂತರವಾಗಿ ಭೇಟಿ ನೀಡಿ ಮಕ್ಕಳ ಆರೋಗ್ಯದ ಮೇಲೆ ನಿಗಾವಹಿಸಬೇಕು. ಮಕ್ಕಳಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಪಾಲಕರು ಶೀಘ್ರವೇ ಸಮೀಪದ ಆಸ್ಪತ್ರೆಗೆ ಮಾಹಿತಿ ನೀಡುವಂತೆ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಗರ್ಭಿಣಿ, ಬಾಣಂತಿಯರು ಹಾಗೂ ಮಕ್ಕಳಿಗೆ ನಿಯಮಿತವಾಗಿ ಆಹಾರ ಧಾನ್ಯಗಳನ್ನು ಪೂರೈಸಲು ಕ್ರಮಕೈಗೊಳ್ಳುವಂತೆ ತಿಳಿಸಿದರು.

ಸೋಂಕು ನಿಯಂತ್ರಣಕ್ಕಾಗಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುವ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸಹಾಯಕಿಯರು, ಪೌರಕಾರ್ಮಿಕರು, ಸಹಾಯಕ ವೈದ್ಯರುಗಳಿಗೆ ಸುರಕ್ಷಾ ಸಾಮಗ್ರಿಗಳಾದ ಮಾಸ್ಕ ಹಾಗೂ ಸ್ಯಾನಿಟೈಸರಗಳನ್ನು ನಿಯಮಿತವಾಗಿ ಪೂರೈಸಬೇಕು. ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ, ಸಿಬ್ಬಂದಿಗಳಲ್ಲಿ ಆರೋಗ್ಯ ಸಮಸ್ಯೆಗಳು ಕಂಡುಬಂದಲ್ಲಿ ಪ್ರಥಮಾದ್ಯತೆಯಲ್ಲಿ ಚಿಕಿತ್ಸೆ ನೀಡಲು ಅಗತ್ಯದ ಕ್ರಮಕೈಗೊಳ್ಳುವಂತೆ ಸೂಚಿಸಿದರು.

ಆರೋಗ್ಯ ಇಲಾಖೆಯಿಂದ ಹೆಲ್ತ ಸರ್ವೇ ಹಾಗೂ ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಸೋಂಕಿಗೆ ಒಳಗಾದವರನ್ನು ಕೋವಿಡ್ ಕೇರ್ ಕೇಂದ್ರಗಳಿಗೆ ಸ್ಥಳಾಂತರಿಸಿ ಸೋಂಕು ಹರಡದಂತೆ ನಿಯಂತ್ರಿಸಲು ಸೂಚಿಸಿದರು. ಅಲ್ಲದೇ ಕೋವಿಡ್ ಕೇರ್ ಕೇಂದ್ರಗಳಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೇ ನೀಡಿ ಅಲ್ಲಿರುವ ಸೋಂಕಿತರಿಗೆ ಉತ್ತಮ ಆಹಾರ, ಬೀಸಿ ಕುಡಿಯುವ ನೀರು ಪೂರೈಸುವಂತೆ ನಿಗಾವಹಿಸಲು ತಿಳಿಸಿದರು.

ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿನ ಅಂಗವಿಕಲರನ್ನು ಗುರುತಿಸಿ ವಾಹನ ಸೌಲಭ್ಯದೊಂದಿಗೆ ಲಸಿಕೆ ನೀಡಲು ಅಗತ್ಯದ ಕ್ರಮ ಜರುಗಿಸಬೇಕು. ಮೊದಲನೆ ಲಸಿಕೆ ಪಡೆದು ಎರಡನೇ ಲಸಿಕೆ ಪಡೆಯದೇ ಇರುವವರನ್ನು ಗುರುತಿಸಿ ಅಂತಹವರಿಗೆ ಪ್ರಥಮಾದ್ಯತೆಯಲ್ಲಿ ಲಸಿಕೆ ನೀಡಬೇಕು. ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿನ ಬೀದಿ ಬದಿ ವ್ಯಾಪಾರಸ್ಥರನ್ನು ಗುರುತಿಸಿ ಲಸಿಕೆ ನೀಡಲು ಅಗತ್ಯ ಕ್ರಮ ಜರುಗಿಸಬೇಕು.
ಸಧ್ಯ ಮಳೆಗಾಲ ಪ್ರಾರಂಭವಾಗುತ್ತಿದ್ದು ಗ್ರಾಮ ಪಂಚಾಯತಗಳಲ್ಲಿ ರಚಿಸಲಾದ ಪ್ರಕೃತಿ ವಿಕೋಪ ಸಮಿತಿಗಳು ಕೂಡಲೇ ನೆರೆಯಿಂದಾಗುವ ಹಾನಿಗಳನ್ನು ತಪ್ಪಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆ ಜರುಗಿಸಬೇಕು. ತಾಲೂಕು ಕೇಂದ್ರಗಳಲ್ಲಿ ಪ್ರಾರಂಭಿಸಲಾದ ಸಹಾಯವಾಣಿ ಕೇಂದ್ರಗಳನ್ನು ದಿನದ ಇಪ್ಪತ್ತನಾಲ್ಕು ಗಂಟೆಯೂ ಕಾರ್ಯನಿರ್ವಹಿಸುವಂತೆ ತಿಳಿಸಿದರು.

ಸೋಂಕು ನಿಯಂತ್ರಣಕ್ಕಾಗಿ ಜೂನ್ 7ರ ಬೆ 6 ಗಂಟೆಯಿಂದ ಜೂನ 14ರ ಬೆ. 6 ಗಂಟೆಯವರೆಗೆ ಕಠಿಣ ಮಾರ್ಗಸೂಚಿಗಳು ಜಾರಿಯಲ್ಲಿದ್ದು ಈ ಅವಧಿಯಲ್ಲಿ ಪ್ರತಿ ದಿನ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಆಹಾರ ಸಾಮಗ್ರಿ, ದಿನಸಿ, ಮಾಂಸ ಮತ್ತು ಮೀನಿನ ಮಳಿಗೆಗಳು ತೆರೆದಿದ್ದು ಅಂಗಡಿಗಳಿಗೆ ಆಗಮಿಸುವ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನಿಗಾವಹಿಬೇಕು. ತರಕಾರಿ, ಹಣ್ಣು ಮಾರಾಟಕ್ಕೆ ಬೆಳಗ್ಗೆ 6 ಗಂಟೆಯಿಂದ ಸಾ. 6 ಗಂಟೆಯವರೆಗೆ ಕೇವಲ ತಳ್ಳುಗಾಡಿ ಹಾಗೂ ಆಟೋಗಳ ಮೂಲಕ ಮಾರಾಟ ಮಾಡಲು ಮಾತ್ರ ಅವಕಾಶ ಕಲ್ಪಿಸಲಾಗಿದ್ದು ತಾಲೂಕು ಕೇಂದ್ರಗಳಲ್ಲಿ ಈ ಕುರಿತು ನಿಗಾವಹಿಸಬೇಕು. ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಅಗತ್ಯ ವಸ್ತುಗಳನ್ನು ಆದಷ್ಟು ಮನೆ ಬಾಗಿಲಗೆ ತಲುಪಿಸುವ ವ್ಯವಸ್ಥೆ ಮಾಡುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ ಎಸ್, ಅಪರ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ ಬಸರಿಗಿಡದ, ತಹಶೀಲ್ದಾರರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ, ತಾ.ಪಂ. ಕಾರ್ಯನಿವಾಹಕ ಅಧಿಕಾರಿಗಳು, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಬಸನಗೌಡ ಕರಿಗೌಡರ, ತಾಲೂಕು ವೈದ್ಯಾಧಿಕಾರಿಗಳು ಹಾಜರಿದ್ದರು.

ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್‌ ಬ್ಯುರೋ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English