ದಕ್ಷಿಣ ಕನ್ನಡದಲ್ಲಿ ಇಳಿಯದ ಕೋವಿಡ್ ಸೋಂಕಿನ ಪ್ರಮಾಣ, ಲಾಕ್‌ ಡೌನ್ ನಿಯಮ ಮತ್ತಷ್ಟು ಕಠಿಣ

10:24 PM, Monday, June 7th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

KV Rajendra ಮಂಗಳೂರು : ದ.ಕ. ಜಿಲ್ಲೆಯಲ್ಲಿ ಪ್ರಸ್ತುತ ಕೊರೋನ ಸೋಂಕಿನ ದರ ಶೇ. 20ರಿಂದ 21ರಷ್ಟಿದ್ದು ಸರಕಾರದ ಆದೇಶದಂತೆ ಜೂ. 14ರವರೆಗೂ ಪ್ರಸ್ತುತ ಜಾರಿಯಲ್ಲಿರುವ ಲಾಕ್‌ ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ಕೊರೋನ ಸೋಂಕಿನ ದರ ಶೇ. 5ಕ್ಕೆ ಇಳಿಸಿ ಅನ್‌ ಲಾಕ್‌ ಗೊಳಿಸುವಲ್ಲಿ ಜನರ ಸಹಕಾರ ಅಗತ್ಯವಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಹೇಳಿದ್ದಾರೆ.

ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳಿರುವ ಗ್ರಾಪಂಗಳಲ್ಲಿ ಪೂರ್ವ ನಿಗದಿತ ಮದುವೆ ಹಾಗೂ ಇತರ ಕಾರ್ಯಕ್ರಮಗಳನ್ನು ರದ್ದು ಮಾಡುವುದು ಹಾಗೂ ಹೊಸ ಕಾರ್ಯಕ್ರಮಗಳಿಗೆ ಅನುಮತಿ ನೀಡದಿರುವ ಮೂಲಕ ವಿಶೇಷ ಲಾಕ್‌ ಡೌನ್ ವಿಧಿಸಲಾಗುವುದು ಎಂದು ತಿಳಿಸಿದರು.

ಜನರ ಅನಗತ್ಯ ಸಂಚಾರ ತಡೆಯುವಲ್ಲಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಲ್ಲದೆ, ಅವಧಿ ಮೀರಿ ಅಗತ್ಯ ವಸ್ತುಗಳ ಅಂಗಡಿ ಮುಂಗಟ್ಟುಗಳನ್ನು ತೆರೆದು ವ್ಯಾಪಾರ ಮಾಡುವುದು, ಕೋವಿಡ್ ನಿಯಮ ಪಾಲನೆ ಮಾಡದಿರುವ ಕುರಿತು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮನಪಾದ 10 ಫ್ಲೆಯಿಂಗ್ ಸ್ಕ್ವಾಡ್ (ವಿಚಕ್ಷಣ ದಳ) ಕಾರ್ಯ ನಿರ್ವಹಿಸಲಿವೆ. ಗ್ರಾಮಾಂತರದಲ್ಲಿ ತಾಲೂಕು ಮಟ್ಟದಲ್ಲಿ 2ರಿಂದ 3ರಷ್ಟು ವಿಚಕ್ಷಣ ತಂಡಗಳು ಕಾರ್ಯ ನಿರ್ವಹಿಸಲಿವೆ ಎಂದರು.

ಕೊರೋನ ಸೋಂಕಿತರಾದ ಸಂದರ್ಭ ಮನೆಗಳಲ್ಲಿ ಪ್ರತ್ಯೇಕ ಶೌಚಾಲಯದ ವ್ಯವಸ್ತೆ ಇಲ್ಲದಿರುವುದು, ಬಿಪಿ, ಶುಗರ್‌ನಂತಹ ಇತರ ಅನಾರೋಗ್ಯ ಸಮಸ್ಯೆಗಳಿದ್ದಲ್ಲಿ ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಅವರು ಹೇಳಿದರು.

ದ.ಕ. ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಪಂಗಳಲ್ಲಿ ಟಾಸ್ಕ್ ಫೋರ್ಸ್ ಸಮಿತಿಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಸಮಿತಿಗಳಿಗೆ ಸರಕಾರೇತರ ಸಂಸ್ಥೆಗಳ ಸದಸ್ಯರ ಸಹಕಾರದೊಂದಿಗೆ ಹೆಚ್ಚಿನ ನಿಗಾಕ್ಕೆ ಕ್ರಮ ವಹಿಸಲಾಗಿದೆ ಎಂದುತಿಳಿಸಿದರು.

ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಪೊಲೀಸ್ ಋಷಿಕೇಶ್ ಸೊನಾವಣೆ, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಡಿಎಚ್‌ಒ ಡಾ. ಕಿಶೋರ್ ಕುಮಾರ್, ಗಾಯತ್ರಿ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English