ಮುಂಗಾರು ಪ್ರವಾಹ ಪೂರ್ವ ಸಿದ್ಧತೆ ಕುರಿತು ಕಂದಾಯ ಸಚಿವರ ಸಭೆ

10:57 PM, Monday, June 7th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

R Ashoka ಬೆಂಗಳೂರು : ಕಳೆದ ಮೂರು ವರ್ಷಗಳಲ್ಲಿ ಘಟಿಸಿದ ಪ್ರವಾಹ ಪರಿಸ್ಥಿತಿಗಳಿಂದ ಕಲಿತ ಪಾಠ ಹಾಗೂ ಅನುಭವಗಳನ್ನ ಗಮನದಲ್ಲಿಟ್ಟುಕೊಂಡು ಮತ್ತು ದೇಶದ ಇತರ ಭಾಗಗಳಲ್ಲಿ ಪ್ರವಾಹವಾದಾಗ ಹೇಗೆ ನಿರ್ವಹಿಸಲಾಗಿತ್ತು ಎಂಬುದನ್ನು ಪರಿಗಣನೆಗೆ ತೆಗದುಕೊಂಡು ಕರ್ನಾಟಕ ಪ್ರವಾಹ ನಿರ್ವಹಣಾ ಕ್ರಿಯಾ ಯೋಜನೆ 2021ನ್ನು ಸಿದ್ಧಪಡಿಸಲಾಗಿದೆ. ಕಂದಾಯ ಸಚಿವ ಹಾಗೂ ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷರಾದ ಆರ್ ಅಶೋಕ ಮುಂಗಾರು ಪ್ರವಾಹ ಪೂರ್ವ ಸಿದ್ಧತೆ ಕುರಿತಂತೆ ಸೋಮವಾರ ಸಭೆ ಕರೆದು ಚರ್ಚೆ ನಡೆಸಿದರು.

ಈ ಸಭೆ ಕುರಿತಂತೆ ಮಾಹಿತಿ ನೀಡಿದ ಸಚಿವರು, ಕರ್ನಾಟಕದಲ್ಲಿ 1710 ಗ್ರಾಮಗಳನ್ನ ಪ್ರವಾಹಕ್ಕೆ ತುತ್ತಾಗುವ ಪ್ರದೇಶಗಳೆಂದು ಗುರುತಿಸಲಾಗಿದೆ. ಅದರಲ್ಲಿ 758 ಗ್ರಾಮಗಳನ್ನ ಹೆಚ್ಚು ವಿಪತ್ತಿಗೆ ಒಳಗಾಗುವ ಮತ್ತು 952 ಗ್ರಾಮಗಳನ್ನ ಮಧ್ಯಮ ವಿಪತ್ತಿನ ಗ್ರಾಮಗಳೆಂದು ವಿಭಾಗಿಸಲಾಗಿದೆ. ಈ ಕುರಿತಂತೆ ಕೈಗೊಳ್ಳಬೇಕಾದ ಅಂಶಗಳನ್ನ ಪಟ್ಟಿ ಮಾಡಿ ಸಂಬಂಧಿತ ಅಧಿಕಾರಿಗಳಿಗೆ ಕಳುಹಿಸಲಾಗಿದ್ದು, ಪ್ರವಾಹ ಪರಿಸ್ಥಿತಿಯಲ್ಲಿ ಸೂಚಿಸಿದ ಅಂಶಗಳ ಹೊರತಾಗಿಯೂ ಬೇರೆ, ಬೇರೆ ಇಲಾಖೆಗಳ ಜೊತೆಗೆ ಸಮನ್ವಯ ಸಾಧಿಸಿ ಪರಿಸ್ಥಿತಿ ನಿಭಾಯಿಸಲು ತಿಳಿಸಲಾಗಿದೆ, ಎಂದರು.

“ಪರಿಹಾರ ಕಾರ್ಯಗಳ ಕುರಿತಂತೆ ಗ್ರಾಮಸ್ಥರನ್ನ ಒಳಗೊಂಡ ವಿವಿಧ ಸಮಿತಿಗಳನ್ನ ರೂಪಿಸಿ ಅವರಿಗೆ ನಿರ್ದಿಷ್ಟ ಜವಾಬ್ದಾರಿಗಳನ್ನ ನೀಡಬೇಕಿದೆ. ಪ್ರವಾಹ ಉಂಟಾದಾಗ ಅಗತ್ಯ ಸೇವೆಗಳಿಗೆ ಯಾವುದೇ ತೊಂದರೆಯಾಗದಂತೆ ವಿದ್ಯುತ್ ಸಂಪರ್ಕ ನೀಡಬೇಕು. ಪರಿಹಾರ ಕಾರ್ಯಗಳ ಕುರಿತಂತೆ ಪಾರದರ್ಶಕತೆ ಕಾಪಾಡಿಕೊಳ್ಳುವುದು ಅತೀ ಮುಖ್ಯವಾಗಿದ್ದು, ಹಿರಿಯ ನಾಗರಿಕರು, ವಿಕಲಚೇತನರು, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಲಾಗುವುದು. ಗಂಜಿ ಕೇಂದ್ರ ಎಂಬ ಪದಬಳಕೆ ಕೈ ಬಿಡಲಾಗಿದ್ದು, ಕಡ್ಡಾಯವಾಗಿ ಪೌಷ್ಠಿಕ ಆಹಾರ ನೀಡುವಂತೆ ತಿಳಿಸಲಾಗಿದೆ. ಸ್ಥಳಾಂತರಗೊಂಡಿರುವವರಿಗೆ ಹೊದಿಕೆ ಕೂಡಾ ನೀಡಲು ಸೂಚಿಸಲಾಗಿದೆ. 2021ನೇ ಸಾಲಿಗೆ ಕೇಂದ್ರವು ಎಸ್ ಡಿ ಆರ್ ಎಫ್ ನಿಧಿ ಅಡಿಯಲ್ಲಿ ರೂ.1054 ಕೋಟಿ ಬಿಡುಗಡೆ ಮಾಡಿದೆ. ಮೊದಲ ಕಂತಿನ ಭಾಗವಾಗಿ ಈಗಾಗಲೇ ರೂ.316.4 ಕೋಟಿ ಅನುದಾನವನ್ನ ಮಂಜೂರು ಮಾಡಿದ್ದು, ಅದು ಈಗಾಗಲೇ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಲಭ್ಯವಿರುತ್ತದೆ. ಟೌಟೆ ಚಂಡಮಾರುತದಿಂದಾದ ಹಾನಿಯ ವರದಿಯನ್ನ ಆದಷ್ಟು ಬೇಗ ಕೇಂದ್ರಕ್ಕೆ ಸಲ್ಲಿಸಲಾಗುವುದು”, ಎಂದು ಅಶೋಕ ಹೇಳಿದರು.

ಮುಂಗಾರು ಪೂರ್ವ ಅವಧಿಯಲ್ಲಿ ಕರ್ನಾಟಕದಲ್ಲಿ ಶೇ.74ರಷ್ಟು ಅಧಿಕ ಮಳೆಯಾಗಿರುತ್ತದೆ (ಜನೇವರಿ 1ರಿಂದ ಮೇ 31ರ ವರೆಗೆ). 30 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ ಅತ್ಯಧಿಕ ಮಳೆಯಾಗಿರುತ್ತದೆ. ಉಳಿದ ಜಿಲ್ಲೆಗಳಲ್ಲಿ ಮಳೆ ಕೊರತೆ ಕಂಡು ಬಂದಿದೆ. ಮುಂಗಾರು ಋತುವಿನಲ್ಲಿ (ಜೂನ್-ಸೆಪ್ಟೆಂಬರ್) ರಾಜ್ಯದಲ್ಲಿ ಶೇ. 74ರಷ್ಟು ಮಳೆಯನ್ನ ನಿರೀಕ್ಷಿಸಲಾಗುತ್ತದೆ. ಕೃಷಿ ಬಿತ್ತನೆ, ಉತ್ಪಾದನೆ ಹಾಗೂ ಜಲ ಸಂಪನ್ಮೂಲಗಳು ಇದರ ಮೇಲೆಯೇ ಅವಲಂಭಿತವಾಗಿವೆ. ಬಾರತೀಯ ಹವಾಮಾನ ಇಲಾಖೆಯ ಅನುಸಾರ ವಾಡಿಕೆಯಷ್ಟು ಮಳೆ ಬೀಳುವ ಸಾಧ್ಯತೆಯಿದೆ. 30 ಜಿಲ್ಲೆಗಳ ಪೈಕಿ 23 ಜಿಲ್ಲೆಗಳಲ್ಲಿ ವಾಡಿಕೆ ಅಥವಾ ಅದಕ್ಕಿಂತ ಉತ್ತಮ ಹಾಗೂ 7 ಜಿಲ್ಲೆಗಳಲ್ಲಿ ವಾಡಿಕೆಯಷ್ಟು ಅದಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ. 16 ಜಿಲ್ಲೆಗಳಲ್ಲಿ ಸಾಮಾನ್ಯ ಮಳೆ, 10 ಜಿಲ್ಲೆಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮತ್ತು 4 ಜಿಲ್ಲೆಗಳಲ್ಲಿ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ, ಎಂದರು

“ಈ 2021ನೇ ಸಾಲಿನಲ್ಲಿ ಹವಾಮಾನ ಇಲಾಖೆ ವಾಡಿಕೆಯಷ್ಟು ಮಳೆ ಬೀಳಬಹುದು ಎಂಬ ಮುನ್ಸೂಚನೆ ನೀಡಿದ್ದು, ನಾವು ಅನಿರೀಕ್ಷಿತ ಘನೆಗಳಾದ ಪ್ರವಾಹ, ಭೂಕುಸಿತ, ಬರ ಮತ್ತು ಸಿಡಿಲು ಸಂಭವಿಸಿದ ವೇಳೆ ಕೈಗೊಳ್ಳಬಹುದಾದ ಸಿದ್ಧತೆ ಕುರಿತಂತೆ ಸಭೆ ನಡೆಸಲಾಗಿದೆ. ಈ ವಿಪತ್ತುಗಳನ್ನ ನಿರ್ವಹಿಸಲು ಕಾರ್ಯತಂತ್ರಗಳನ್ನ ರೂಪಿಸಬೇಕಿದೆ. ಮೊದಲು ಪ್ರವಾಹಕ್ಕೆ ತುತ್ತಾಗುವ ಗ್ರಾಮಗಳನ್ನ ಗುರುತಿಸಿ ಅವುಗಳಿಗೆ ಪ್ರವಾಹ ನಿರ್ವಹಣಾ ಯೋಜನೆಗಳನ್ನು ಮಾಡಲಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಲ್ಲಿ ಪ್ರವಾಹ ಮುನ್ಸೂಚನಾ ಘಟಕವನ್ನು ಸ್ಥಾಪಿಸಲಾಗಿದೆ. ಆಣೆಕಟ್ಟು ಜಲ ನಿರ್ವಹಣೆ ಹಾಗೂ ಮಾಹಿತಿ ವಿನಿಮಯ ಕುರಿತಂತೆ ಅತರಾಜ್ಯಗಳೊಂದಿಗೆ ಸಮನ್ವಯ ಸಾಧಿಸಲಾಗಿದೆ. ವಿಕೋಪ ನಿರ್ವಹಣೆಗೆ ನಾಲ್ಕು ಎನ್ ಡಿ ಆರ್ ಎಫ್ ತಂಡಗಳನ್ನ ನಿಯೋಜನೆ ಮಾಡಲಾಗಿದೆ. ಸುಮಾರು 400ಕ್ಕೂ ಹೆಚ್ಚು ಎಸ್ ಡಿ ಆರ್ ಎಫ್ ತಂಡಗಳನ್ನ ಸಿದ್ಧಪಡಿಸಿ, ತುರ್ತು ಪರಿಹಾರ ಪರಿಕರ ಸಾಮಗ್ರಿಗಳೊಂದಿಗೆ ಸನ್ನದ್ಧಗೊಳಿಸಲಾಗಿದೆ. ಪ್ರತಿವಾರ ಸಂಬಂಧಿಸಿದ ಇಲಾಖೆಗಳೊಂದಿಗೆ ಸಭೆ ನಡೆಸಿ ಅವಲೋಕನ ಮಾಡಿ ಸೂಕ್ತ ನಿರ್ದೇಶನಗಳನ್ನ ನೀಡಲಾಗುತ್ತಿದೆ. ಟೌಟೆ ಚಂಡಮಾರುತದ ಹಾನಿಯ ಪ್ರಮಾಣ ತಗ್ಗಿಸಲು ನನ್ನ ಅಧ್ಯಕ್ಷತೆಯಲ್ಲಿ ಕರಾವಳಿ ಜಿಲ್ಲೆಗಳ ಜಿಲ್ಲಾಡಳಿತದೊಂದಿಗೆ ಮೇ 15ರಂದು ಸಭೆ ನಡೆಸಲಾಯಿತು. ಮೇ 17, 18ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹಾನಿಗೊಳಗಾದ ಪ್ರದೇಶಗಳಿಗೆ ಖುದ್ದಾಗಿ ಭೇಟಿ ನೀಡಿ ಹಾನಿಯ ಪ್ರಮಾಣ ಮತ್ತು ಪರಿಹಾರ ಕಾರ್ಯಗಳ ಪರಿಶೀಲನೆ ನಡೆಸಲಾಯಿತು”, ಎಂದು ಸಚಿವರು ಹೇಳಿದರು.

ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್‌ ಬ್ಯುರೋ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English