ಹೈದರಾಬಾದ್ : ತೆಲಂಗಾಣ ಸರ್ಕಾರವು ತನ್ನ 32 ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಹೈಟೆಕ್ ಕಾರು ಕೊಡಿಸಿ, ಬಂಪರ್ ಕೊಡುಗೆ ನೀಡಿದೆ. ರಾಜ್ಯವು ಸುಮಾರು 40,000 ಕೋಟಿ ರೂ.ಗಳ ಖೋತಾ ಬಜೆಟ್ಅನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಸಿಎಂ ಕೆ.ಚಂದ್ರಶೇಖರ್ ರಾವ್ ಅವರ ಈ ‘ದುಂದುವೆಚ್ಚ’ದ ಬಗ್ಗೆ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿದೆ.
ಕರೊನಾ ಎರಡನೇ ಅಲೆಯಿಂದ ಆರ್ಥಿಕತೆ ತತ್ತರಿಸಿರುವ ಸಮಯದಲ್ಲಿ, ತಲಾ 25 ರಿಂದ 30 ಲಕ್ಷ ರೂಪಾಯಿ ಮೌಲ್ಯದ 32 ಕಿಯಾ ಕಾರ್ನಿವಲ್ ಕಾರುಗಳನ್ನು ತೆಲಂಗಾಣ ಸರ್ಕಾರ ಖರೀದಿಸಿದ್ದು, ಭಾನುವಾರ ಹೈದರಾಬಾದ್ನ ಸಿಎಂ ನಿವಾಸದಲ್ಲಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ, ಅಧಿಕಾರಶಾಹಿಗಳನ್ನು ಓಲೈಸಲು, ಸರ್ಕಾರ ಜನರ ದುಡ್ಡು ಹಾಳು ಮಾಡಿದೆ ಎಂದಿದೆ.
“ಅಪಾಯಕಾರಿ ಸಾಂಕ್ರಾಮಿಕದ ನಡುವೆ ಬಡಜನರು ಕರೊನಾ ಚಿಕಿತ್ಸೆಗೆ ಆಸ್ಪತ್ರೆಗಳಿಗೆ ಹಣ ನೀಡಿ ಸಾಲದ ಹೊರೆ ಅನುಭವಿಸುತ್ತಿದ್ದರೆ, ಇತ್ತ ಸಾರ್ವಜನಿಕ ಹಣದ ಭಾರೀ ದುಂದುವೆಚ್ಚ ನಡೆದಿದೆ. ಸರ್ಕಾರ ಈ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು” ಎಂದಿದ್ದಾರೆ.
11 ಕೋಟಿ ರೂ.ಗಳನ್ನು ಖರ್ಚು ಮಾಡಿ 32 ಅಲ್ಟ್ರಾ ಲಕ್ಷುರಿ ಕಾರುಗಳನ್ನು ಖರೀದಿಸಲು ಸಿಎಂ ರಾವ್ ಹೇಗೆ ಸಮರ್ಥಿಸಿಕೊಳ್ಳುತ್ತಾರೆ ?” ಎಂದು ಬಿಜೆಪಿ ವಕ್ತಾರ ಕೃಷ್ಣ ಸಾಗರ್ ರಾವ್ ಪ್ರಶ್ನಿಸಿದ್ದಾರೆ.
“ಅದಾಗಲೇ ತೆಲಂಗಾಣವನ್ನು 40,000 ಕೋಟಿ ರೂ. ಸಾಲದ ಜಾಲಕ್ಕೆ ಕೆಸಿಆರ್ ಸರ್ಕಾರ ಸಿಲುಕಿಸಿದೆ. ಉತ್ತಮ ಸ್ಥಿತಿಯಲ್ಲಿದ್ದ ಸರ್ಕಾರಿ ಕಾರುಗಳನ್ನು ಅಧಿಕಾರಿಗಳು ಹೊಂದಿದ್ದರು. ಕರೊನಾ ಸಮಯದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ಗಳ ಸಂಖ್ಯೆ ಹೆಚ್ಚಿಸುವ ಅಥವಾ ಸಾರ್ವಜನಿಕ ಸಾರಿಗೆಗೆ ಬಸ್ಗಳನ್ನು ಖರೀದಿಸುವ ಕೆಲಸದಲ್ಲಿ ತೊಡಗಬೇಕಾದ ಸರ್ಕಾರ ಈ ರೀತಿ ಅಧಿಕಾರಿಗಳಿಗೆ ಕಾರು ಕೊಡಿಸುತ್ತಿದೆ” ಎಂದು ಕಾಂಗ್ರೆಸ್ ನಾಯಕ ಡಿ.ಶ್ರವಣ್ ಕುಮಾರ್ ಟೀಕಿಸಿದ್ದಾರೆ.
ಕಾರು ಖರೀದಿಯನ್ನು ಸಮರ್ಥಿಸಿಕೊಂಡಿರುವ ಸಿಎಂ, ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಇಡೀ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ತಮ್ಮ ಕರ್ತವ್ಯ ನಿರ್ವಹಿಸಲು ಇಂಥ ವಾಹನಗಳ ಅವಶ್ಯಕತೆ ಇದೆ ಎಂದಿದ್ದಾರೆ.
Click this button or press Ctrl+G to toggle between Kannada and English