ಮರವೂರು ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿರುವ ಸ್ಥಳಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ

7:55 PM, Tuesday, June 15th, 2021
Share
1 Star2 Stars3 Stars4 Stars5 Stars
(No Ratings Yet)
Loading...

Kota Srinivasಮಂಗಳೂರು : ಮಂಗಳೂರು ನಗರ ವ್ಯಾಪ್ತಿಯ ಮರವೂರು ಸೇತುವೆಯ ಬಿರುಕನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇಂದು ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ, ಮುಖ್ಯ ಸಚೇತಕ ಸುಧೀರ್ ಶೆಟ್ಟಿ, ಸದಸ್ಯ ಲೋಹಿತ್ ಆಮೀನ್, ಲೋಕೋಪಯೋಗಿ ಇಲಾಖೆಯ ಅಭಿಯಂತರರು ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಅತ್ರಾಡಿ ರಾಷ್ಟ್ರೀಯ ಹೆದ್ದಾರಿ-67 ರಸ್ತೆಯಲ್ಲಿರುವ ಮರವೂರು ಸೇತುವೆಯ ಪಿಲ್ಲರ್ 8 ಜೂನ್ 14 ರ ರಾತ್ರಿಯ ಸಮಯದಲ್ಲಿ ಕುಸಿದ ಹಿನ್ನೆಲೆ ಸೇತುವೆಯಲ್ಲಿ ಬಿರುಕು ಕಂಡಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಸದರಿ ಸೇತುವೆಯ ಮೇಲೆ ವಾಹನ ಸಂಚಾರ ಯೋಗ್ಯವಲ್ಲದ ಕಾರಣ ಸ್ಥಗಿತಗೊಳಿಸಲಾಗಿದೆ ಎಂದರು.

ಈ ಸೇತುವೆಯ ಮೇಲೆ ಹಾದು ಹೋಗುವ ರಸ್ತೆಯು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ಈ ಸೇತುವೆಯ ಪುನರ್ ನಿರ್ಮಾಣ ಮಾಡಬೇಕೆ ಅಥವಾ ದುರಸ್ಥಿ ಕೈಗೊಳ್ಳಬೇಕೆ ಎನ್ನುವುದಕ್ಕೆ ತಜ್ಞರನ್ನೊಳಗೊಂಡ ಸಮಿತಿಯು ಪರಿಶೀಲಿಸಿ ಇನ್ನೆರೆಡು ದಿನದೊಳಗೆ ವರದಿ ನೀಡಲಿದೆ. ವರದಿಯನ್ನಾಧರಿಸಿ, ದುರಸ್ಥಿ ಅಥವಾ ಪುನರ್ ನಿರ್ಮಾಣದ ಬಗ್ಗೆ ಅಗತ್ಯವಿರುವ ಅನುದಾನವನ್ನು ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ರಸ್ತೆಯ ಸೇತುವೆಯನ್ನು ನಾಲ್ಕು ಪಥಗಳ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು 50 ಕೋಟಿ ರೂ. ಮಂಜೂರಾತಿಯಾಗಿದ್ದು, ಹಾಲಿ ಸೇತುವೆಯ ಪಕ್ಕದಲ್ಲಿ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಸೇತುವೆಯ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೊಂಡು ಮುಂಬರುವ ಫೆಬ್ರವರಿ ಅಂತ್ಯದೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ನಾಲ್ಕು ಪಥದ ರಸ್ತೆಯ ಟೆಂಡರ್‍ನಲ್ಲಿ ಹಳೆ ಸೇತುವೆಯನ್ನು ದುರಸ್ಥಿ ಪಡಿಸಲು ಯೋಜನೆಯನ್ನು ರೂಪಿಸಲಾಯಿತು. ಸೇತುವೆಯನ್ನು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಗೂ ಸೇತುವೆ ತಪಾಸಣಾ ತಂಡ ಪ್ಲಾನಿಂಗ್ ಆ್ಯಂಡ್ ರೋಡ್ ಆಸ್ಸೆಟ್ ಮ್ಯಾನೇಜ್‍ಮೆಂಟ್ ಸೆಂಟರ್ ವತಿಯಿಂದ ಈಗಾಗಲೇ ಪರಿಶೀಲಿಸಿರುತ್ತಾರೆ. ಹಳೇಯ ಸೇತುವೆ ದುರಸ್ಥಿಗೆ 3 ತಿಂಗಳುಗಳ ಕಾಲ ವಾಹನ ಸಂಚಾರ ಸ್ಥಗಿತಗೊಳಿಸಬೇಕಾಗಿರುವುದರಿಂದ ಹೊಸ ಸೇತುವೆ ನಿರ್ಮಾಣಗೊಂಡ ನಂತರವೇ ಹಳೇ ಸೇತುವೆಯ ದುರಸ್ತಿ ಕಾರ್ಯಕೈಗೊಳ್ಳಲು ಉದ್ದೇಶಿಸಲಾಗಿತ್ತು, ಈಗ ತಜ್ಞರ ವರದಿಯನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಸೇತುವೆ ಕುಸಿದು ವಾಹನ ಸಂಚಾರ ನಿರ್ಬಂಧಿಸಿದ ಹಿನ್ನೆಲೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪರ್ಯಾಯ ಮಾರ್ಗವಾಗಿ ಉಡುಪಿ ಕಡೆಯಿಂದ ಮುಲ್ಕಿ – ಮೂರುಕಾವೇರಿ-ಕಟೀಲು ಮುಖಾಂತರ, ಬಜ್ಪೆಗೆ ಹಾಗೂ ಮಂಗಳೂರು ಕಡೆಯಿಂದ ಮರವೂರು ದ್ವಾರದಿಂದ ಪೊರ್ಕೋಡಿ – ಜೋಕಟ್ಟೆ – ಬೈಕಂಪಾಡಿ ರಸ್ತೆ ಮತ್ತು ಕೈಕಂಬ – ಅದ್ಯಪಾಡಿ ರಸ್ತೆ ಅಥವಾ ಕೈಕಂಬ – ಬಜಪೆ ರಸ್ತೆ ಮಾರ್ಗವಾಗಿ, ಸುರತ್ಕಲ್ – ಮಂಗಳಪೇಟೆ -ಬಜಪೆ ಮಾರ್ಗವಾಗಿ ಸಂಚರಿಸಬಹುದಾಗಿರುತ್ತದೆ ಎಂದರು.

ಜಿಲ್ಲಾಧಿಕಾರಿ ಪರಿಶೀಲನೆ

ಅತ್ರಾಡಿ ರಾ.ಹೆ. 67 ರಸ್ತೆಯ ಮರವೂರು ಸೇತುವೆಯ ಬಿರುಕು ಕಾಣಿಸಿಕೊಂಡಿದ್ದನ್ನು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಉಮಾನಾಥ ಕೋಟ್ಯಾನ್, ಉಪ ವಿಭಾಗಾಧಿಕಾರಿ ಮದನ್ ಮೋಹನ್, ಲೋಕೋಪಯೋಗಿ ಇಲಾಖೆಯ ಅಭಿಯಂತರರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

dc visit

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English