ವಿವಿ ಕಾಲೇಜು:  ಜಿಲ್ಲಾಧಿಕಾರಿಗಳಿಂದ ಸಂಚಾರಿ ಲಸಿಕಾ ಕೇಂದ್ರಕ್ಕೆ ಚಾಲನೆ

9:05 PM, Saturday, June 19th, 2021
Share
1 Star2 Stars3 Stars4 Stars5 Stars
(No Ratings Yet)
Loading...

Vaccination ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ, ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್‌ ಕ್ರಾಸ್‌ ಘಟಕ ಮತ್ತು ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು, ಇವುಗಳ ಜಂಟಿ ಸಹಯೋಗದಲ್ಲಿ ಬಸ್‌ ಸಿಬ್ಬಂದಿ ಮತ್ತು ಆಟೋ ಚಾಲಕರಿಗಾಗಿ ಕೊವಿಡ್‌- 19 ಲಸಿಕಾ ಅಭಿಯಾನವನ್ನು ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಶನಿವಾರ ಆಯೋಜಿಸಲಾಗಿತ್ತು.

ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಮತ್ತು ಬ್ಯಾಂಕ್‌ ಆಫ್‌ ಬರೋಡಾದ ಪ್ರಧಾನ ವ್ಯವಸ್ಥಾಪಕಿ ಮತ್ತು ವಲಯ ಮುಖ್ಯಸ್ಥೆ ಗಾಯತ್ರಿ ಆರ್‌ ಕಾರ್ಯಕ್ರಮ ಉದ್ಘಾಟಿಸಿದರು. ಗಣ್ಯರನ್ನು ಸ್ವಾಗತಿಸಿದ ಭಾರತೀಯ ರೆಡ್‌ ಕ್ರಾಸ್‌ ಸೊಸೈಟಿಯ ಜಿಲ್ಲಾ ಗೌರವ ಕಾರ್ಯದರ್ಶಿ ಎಸ್‌ ಎ ಪ್ರಭಾಕರ ಶರ್ಮ, ಕ್ಯಾಂಪ್‌ನ ಉದ್ದೇಶಗಳನ್ನು ವಿವರಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಭಾರತೀಯ ರೆಡ್‌ ಕ್ರಾಸ್‌ ಸೊಸೈಟಿಯ ಮುಖ್ಯಸ್ಥ ಸಿ ಎ ಶಾಂತಾರಾಮ ಶೆಟ್ಟಿ, ಜಿಲ್ಲಾ ಬಸ್‌ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್‌ ಆಳ್ವ, ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್‌ ಕ್ರಾಸ್‌ ಘಟಕದ ನೋಡಲ್‌ ಅಧಿಕಾರಿ ಡಾ. ಗಣಪತಿ ಗೌಡ, ಐಆರ್‌ಸಿಎಸ್‌ನ ವಿಪತ್ತು ನಿರ್ವಹಣಾ ಸಮಿತಿಯ ಅಧ್ಯಕ್ಷ ಯತೀಶ್‌ ಬೈಕಂಪಾಡಿ ಮೊದಲಾದವರು ಉಪಸ್ಥಿತರಿದ್ದರು.

ಒಂದು ದಿನದ ಕ್ಯಾಂಪ್‌ನಲ್ಲಿ ಸುಮಾರು 600 ಕ್ಕೂ ಹೆಚ್ಚು ಫಲಾನುಭವಿಗಳಿಗೆ ಲಸಿಕೆ ನೀಡಲಾಯಿತು. ಈ ಮೂಲಕ ನಗರದಲ್ಲಿ ಈವರೆಗೆ ನಡೆದ ಒಂದು ದಿನದ ಕ್ಯಾಂಪ್‌ಗಳಲ್ಲೇ ಅತೀ ಹೆಚ್ಚು ಲಸಿಕೆ ನೀಡಿದ ದಾಖಲೆಯಾಯಿತು. ಜೊತೆಗೆ 300 ಕ್ಕೂ ಹೆಚ್ಚು ಜನರ ಹೆಸರು ನೋಂದಣಿ ಮಾಡಿಕೊಳ್ಳಲಾಗಿದ್ದು ಮುಂದಿನ ದಿನಗಳಲ್ಲಿ ಲಸಿಕೆ ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಸಂಚಾರಿ ಲಸಿಕಾ ಕೇಂದ್ರಕ್ಕೆ ಚಾಲನೆ
ಇದೇ ವೇಳೆ ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ ಆಶಕ್ತರ ಮನೆಬಾಗಿಲಿಗೆ ಹೋಗಿ ಲಸಿಕೆ ನೀಡುವ ಸಂಚಾರಿ ಲಸಿಕಾ ವಾಹನಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಈಗ ಪ್ರತಿದಿನ 10000ಕ್ಕೂ ಹೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸುತ್ತಿರುವುದರಿಂದ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಆದರೆ ಪಾಸಿಟಿವಿಟಿ ದರ ಗಣನೀಯವಾಗಿ ಇಳಿಕೆಯಾಗಿದೆ. ಗಾಬರಿ ಪಡುವ ಅಗತ್ಯವಿಲ್ಲ, ಎಂದರು. ಇದೇ ವೇಳೆ ಅವರು ಲಸಿಕಾ ಕಾರ್ಯಕ್ರಮಕ್ಕೆ ಸಹಕರಿಸುತ್ತಿರುವ ಭಾರತೀಯ ರೆಡ್‌ ಕ್ರಾಸ್‌ ಸೊಸೈಟಿ, ಯುವ ರೆಡ್‌ ಕ್ರಾಸ್‌, ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಮತ್ತು ಬ್ಯಾಂಕ್‌ ಆಫ್‌ ಬರೋಡಾವನ್ನು ಪ್ರಶಂಸಿಸಿದರು.

Vaccination

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English