ಮುಖ್ಯಮಂತ್ರಿಗಳಿಂದ ರಾಜ್ಯದ 20 ಜಿಲ್ಲೆಗಳ ಪ್ರವಾಹ ಸನ್ನದ್ಧತೆ ಕುರಿತು ವಿಡಿಯೋ ಕಾನ್ಫರೆನ್ಸ್

12:46 AM, Sunday, June 20th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Floodಬೆಂಗಳೂರು  : ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಈ ಬಗ್ಗೆ ಇವತ್ತು ಪ್ರವಾಹಕ್ಕೆ ಒಳಗಾಗುವ ಸಾಧ್ಯತೆ ಇರುವ 20  ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ವಿಡಿಯೊ ಕಾನ್ಫರೆನ್ಸ್ ನಡೆಸಿದರು.

ಉಪ ಮುಖ್ಯಮಂತ್ರಿ ಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಕಂದಾಯ ಸಚಿವ ಆರ್. ಅಶೋಕ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಅಪರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
Flood
ಸಭೆಯ ಮುಖ್ಯಾಂಶಗಳು:

ರಾಜ್ಯ ಮಟ್ಟದಲ್ಲಿ ಅಪರ ಪ್ರಧಾನ ಕಾರ್ಯದರ್ಶಿಗಳು, ಕಂದಾಯ ಇಲಾಖೆ (ವಿ.ನಿ) ಹಾಗೂ ಅಭಿವೃದ್ಧಿ ಆಯುಕ್ತರು ಅಧ್ಯಕ್ಷತೆಯಲ್ಲಿ ಪ್ರತಿ 15 ದಿನಗಳಿಗೊಮ್ಮೆ ಋತುಮಾನ ಪರಿಸ್ಥಿತಿ ಅವಲೋಕನ ಸಭೆಗಳನ್ನು ಕೈಗೊಳ್ಳಲಾಗುತ್ತಿದೆ.

ರಾಜ್ಯದಲ್ಲಿ ಮೊದಲ ಬಾರಿಗೆ ರಾಜ್ಯ ಪ್ರವಾಹ ನಿರ್ವಹಣಾ ಕ್ರಿಯಾ ಯೋಜನೆ 2021 ನ್ನು ಸಿದ್ದಪಡಿಸಲಾಗಿದೆ.

ರಾಜ್ಯದಲ್ಲಿ 1710 ಪ್ರವಾಹ ಪೀಡಿತ ಗ್ರಾಮಗಳನ್ನು ಗುರುತಿಸಲಾಗಿದ್ದು, ಗ್ರಾಮ ಪಂಚಾಯಿತಿ ಮಟ್ಟದ ವಿಪತ್ತು ನಿರ್ವಹಣೆ ಕ್ರಿಯಾ ಯೋಜನೆಯನ್ನು ಅಭಿವೃದ್ಧಿ ಪಡಿಸಲಾಗಿದ್ದು, ಈ ಕ್ರಿಯಾ ಯೋಜನೆಯನ್ನು ಅನುಷ್ಠಾನಗೊಳಿಸಲು ತರಬೇತಿ ನೀಡಲಾಗಿದೆ.

ಪ್ರವಾಹ ಪರಿಸ್ಥಿತಿಗಳಲ್ಲಿ ಜಲಾಶಯಗಳ ಹರಿವು ನಿರ್ವಹಣೆಗೆ ಬೇಕಾದ ಮಾಹಿತಿ ವಿನಿಮಯಕ್ಕೆ ಅಂತರರಾಜ್ಯ ಸಮನ್ವಯತೆ ಸಾಧಿಸಲಾಗಿದೆ. ಇಂದು ಮಹಾರಾಷ್ಟ್ರದ ಜಲ ಸಂಪನ್ಮೂಲ ಸಚಿವರೊಂದಿಗೆ ಸಭೆಯನ್ನೂ ನಡೆಸಲಾಗಿದೆ.

ಪ್ರವಾಹ ಪರಿಸ್ಥಿತಿ ನಿರ್ವಹಣೆಗಾಗಿ ಕಾರ್ಯಪಡೆ, ಕಾರ್ಯಾಚರಣೆ ತಂಡಗಳನ್ನು ಹಾಗೂ ವಾಟ್ಸ ಆಪ್ ತಂಡಗಳ ರಚನೆ ಮಾಡಲಾಗಿದೆ.

ವಿಪತ್ತು ನಿರ್ವಹಣೆಯ ವಿವಿಧ ಹಂತಗಳಲ್ಲಿ ವಿವಿಧ ಇಲಾಖೆಗಳ ಪಾತ್ರ ಹಾಗೂ ಜವಾಬ್ದಾರಿಗಳನ್ನು ಗುರುತಿಸಲಾಗಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಲ್ಲಿ ಪ್ರವಾಹ ಮುನ್ಸೂಚನೆ ಕೋಶವನ್ನು ಸ್ಥಾಪಿಸಲಾಗಿದೆ.

ರಕ್ಷಣಾ ಕಾರ್ಯಚಾರಣೆಗೆ ಬೇಕಾದ ಅಗತ್ಯ ಪರಿಕರಗಳ ಕ್ರೋಢೀಕರಣ ಹಾಗೂ ಸಾಮಗ್ರಿಗಳನ್ನು ಒದಗಿಸಲಾಗಿದೆ.

ಪ್ರವಾಹ ರಕ್ಷಣಾ ಕಾರ್ಯಾಚರಣೆಗಾಗಿ 4 ರಾಷ್ಟ್ರೀಯ ವಿಪತ್ತು ಸ್ಪಂದನಾ ತಂಡ(NDRF) ಗಳನ್ನು ರಾಯಚೂರು, ಕೊಡಗು, ಬೆಳಗಾವಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ.

ರಾಜ್ಯದಿಂದ ಸುಮಾರು 200ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಒಳಗೊಂಡ ರಾಜ್ಯ ವಿಪತ್ತು ಸ್ಪಂದನಾ ತಂಡ (SDRF) ತಂಡವನ್ನು ಬಲಪಡಿಸಿ, ತುರ್ತು ಪರಿಹಾರಕ್ಕೆ ಬೇಕಾದ ಪರಿಕರ ಸಾಮಾಗ್ರಿಗಳೊಂದಿಗೆ ಸನ್ನದ್ದಗೊಳಿಸಿದೆ.

ಜಿಲ್ಲಾಧಿಕಾರಿಗಳ ಬಳಿ ವಿಪತ್ತು ನಿರ್ವಹಣೆಗೆ ಸುಮಾರು ಸಾವಿರ ಕೋಟಿ ರೂ. ಗಳಷ್ಟು ಲಭ್ಯವಿದೆ.

ಇಂದಿನ ವಿಡಿಯೋ ಕಾನ್ಫರೆನ್ಸ್ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ಈ ಕೆಳಗಿನ ಸೂಚನೆಗಳನ್ನು ನೀಡಲಾಯಿತು:

ಜಿಲ್ಲಾ ಮಟ್ಟದಲ್ಲಿ ನೀವು ಪ್ರವಾಹ ಪೀಡಿತ ಗ್ರಾಮಗಳನ್ನು ಗುರುತಿಸಿ, ಪ್ರವಾಹ ಪರಿಸ್ಥಿತಿ ಎದುರಿಸಲು ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿದೆ.

ಜನ, ಜಾನುವಾರುಗಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಇದರೊಂದಿಗೆ ಕೋವಿಡ್ 19 ಸೋಂಕಿನ ಕುರಿತು ಸಹ ಎಚ್ಚರಿಕೆ ವಹಿಸಬೇಕಿದೆ.

ಜಿಲ್ಲೆ ಮತ್ತು ತಾಲ್ಲೂಕು ಮಟ್ಟಗಳಲ್ಲಿ ಸಹಾಯವಾಣಿ ಸ್ಥಾಪನೆ, ದೂರವಾಣಿ ಮತ್ತಿತರ ಸಂಪರ್ಕ ಸಾಧನಗಳನ್ನು ಸುಸ್ಥಿತಿಯಲ್ಲಿರಿಸಿಕೊಳ್ಳುವುದು ಹಾಗೂ ತುರ್ತು ನಿರ್ವಹಣೆಗೆ ಬೇಕಾದ ಸಾಮಗ್ರಿಗಳನ್ನು ಅಗತ್ಯಕ್ಕೆ ಅನುಗುಣವಾಗಿ ಖರೀದಿಸಲು ಕ್ರಮ ಕೈಗೊಳ್ಳುವುದು.

ಪ್ರವಾಹ ಸಂದರ್ಭದಲ್ಲಿ ಜನರ ರಕ್ಷಣೆ, ಅವರಿಗೆ ಅಗತ್ಯ ಮೂಲಸೌಕರ್ಯಗಳುಳ್ಳ ಕಾಳಜಿ ಕೇಂದ್ರಗಳು, ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಅತಿ ಅಗತ್ಯ.

ಪ್ರವಾಹ ನಿರ್ವಹಣೆಗಾಗಿ ಸ್ಥಳೀಯ ಸಂಪನ್ಮೂಲಗಳ ಸದ್ಬಳಕೆ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳು, ಸ್ವಯಂ ಸೇವಕರ ಸಹಕಾರವನ್ನು ಪಡೆದುಕೊಳ್ಳುವುದು.

ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಪ್ರವಾಹದ ಪರಿಣಾಮ ಅತ್ಯಂತ ಕಡಿಮೆಯಾಗುವಂತೆ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಲಾಯಿತು.

ಪ್ರವಾಹದ ಹಿನ್ನೆಲೆಯಲ್ಲಿ ಸ್ಥಳಾಂತರಿಸಿದ ಕೆಲವು ಗ್ರಾಮಗಳಿಗೆ ಗ್ರಾಮಸ್ಥರು ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಈ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಈ ಗ್ರಾಮಗಳಿಗೆ ಮೂಲಸೌಕರ್ಯ ಒದಗಿಸಿ, ಸ್ಥಳಾಂತರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English