ಬೆಂಗಳೂರು : ನಿಯಮಿತವಾಗಿ ಯೋಗಾಭ್ಯಾಸ ಮಾಡುವ ಮೂಲಕ ಕರೋನಾದಂತಹ ಸಾಂಕ್ರಾಮಿಕ ರೋಗವನ್ನು ಸಮರ್ಥವಾಗಿ ಎದುರಿಸಬಹುದಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಹೇಳಿದ್ದಾರೆ.
ಸಚಿವರು ದೆಹಲಿಗೆ ಹೊರಡುವ ಮುನ್ನ ಪಕ್ಷದ ಜಿಲ್ಲಾ ಘಟಕದ ವತಿಯಿಂದ ಹೆಬ್ಬಾಳ ಕ್ಷೇತ್ರದಲ್ಲಿ ಇಂದು ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಏಳನೇ ವಿಶ್ವ ಯೋಗದಿನಾಚರಣೆ ಸಂದರ್ಭದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಮಾಡಿದ ಭಾಷಣವನ್ನು ಪ್ರಸ್ತಾಪಿಸಿದ ಸಚಿವರು ನಿಯಮಿತವಾಗಿ ಯೋಗ, ಪ್ರಾಣಾಯಾಮ ಮಾಡುವುದರಿಂದ ನಮ್ಮ ಉಸಿರಾಟದ ವ್ಯವಸ್ಥೆ ಸದೃಢವಾಗುತ್ತದೆ. ಇದರಿಂದ ಕೊರೊನಾದಂತಹ ಶ್ವಾಸಕೋಶ ಸಂಬಂಧಿತ ಕಾಯಿಲೆಗಳನ್ನು ಎದುರಿಸಲು ನಾವು ಸಾಮರ್ಥ್ಯವನ್ನು ಪಡೆಯುತ್ತೇವೆ ಎಂದರು.
ಯೋಗದಿಂದ ಬರೀ ದೇಹದ ರೋಗ-ನಿರೋಧಕ ಶಕ್ತಯಷ್ಟೇ ಸುಧಾರಿಸುವುದಿಲ್ಲ. ಜೊತೆಗೇ ಮಾನಸಿಕ ನೆಮ್ಮದಿ, ಹತೋಟಿ ಪಡೆಯಲು ಸಹಾಯವಾಗುತ್ತದೆ. ಒಟ್ಟಿನಲ್ಲಿ ಯೋಗವು ಭಾರತ ದೇಶ ಮಾನವ ಜನಾಂಗಕ್ಕೆ ನೀಡಿದ ಬಹುದೊಡ್ಡ ಕೊಡುಗೆಯಾಗಿದೆ. ಜನರ ಆರೋಗ್ಯ ಕಾಪಾಡುವಲ್ಲಿ ಯೋಗವು ಹೊಂದಿರುವ ಸಾಮರ್ಥ್ಯವು ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಅರ್ಥವಾಗಿದೆ. ಇಂದು ನಡೆದ ವಿಶ‍್ವ ಯೋಗ ದಿನಾಚರಣೆಯಲ್ಲಿ ಬಹುತೇಕ ದೇಶಗಳ ಮುಖ್ಯಸ್ಥರು ಪಾಲ್ಗೊಂಡಿರುವುದು ಯೋಗದ ಮಹತ್ವವನ್ನು ಸಾರುತ್ತದೆ ಎಂದು ಕೇಂದ್ರ ಸಚಿವರು ಅಭಿಪ್ರಾಯಪಟ್ಟರು.
ಯೋಗ ಮಾಡುವುದರಿಂದ ದಿನಪೂರ್ತಿ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತಿದೆ. ಆಧುನಿಕ ಯುಗದ ಒತ್ತಡದ ಬದುಕಿನಿಂದ ಶಮನ ಪಡೆಯಲು ಹೆಚ್ಚೆಚ್ಚು ಜನ ಇಂದು ನಿಯಮಿತ ಯೋಗಾಭ್ಯಾಸಕ್ಕೆ ಮೊರೆಹೋಗುತ್ತಿದ್ದಾರೆ. ಮೊದಲು ನಾನು ಕೂಡಾ ಪ್ರತಿದಿನ ಸ್ವಲ್ಪಕಾಲ ಯೋಗಾಭ್ಯಾಸ ಮಾಡುತ್ತಿದ್ದೆ. ಆದರೆ ಕೊರೊನಾ ಸೋಂಕಿಗೆ ಒಳಗಾದಾಗ ಬಿಟ್ಟುಹೋದ ಯೋಗಾಭ್ಯಾಸವನ್ನು ಪುನರಾರಂಭಿಸಲು ಇನ್ನೂ ಸಾಧ್ಯವಾಗಿಲ್ಲ ಎಂದ ಸದಾನಂದ ಗೌಡರು – ಯೋಗಾಭ್ಯಾಸ ಯೋಗದಿನಾಚರಣೆಗೆ ಸೀಮಿತವಾಗಬಾರದು, ಪ್ರತಿಯೊಬ್ಬರೂ ನಿಯಮಿತವಾಗಿ ಯೋಗ ಮಾಡುವುದರ ಮೂಲಕ ಸದೃಢ ಆರೋಗ್ಯ ಹೊಂದುವಂತೆ ಕರೆ ನೀಡಿದರು.
ಸಚಿವರು ಇದಕ್ಕೂ ಮುನ್ನ ಪಕ್ಷದ ಪದಾಧಿಕಾರಿಗಳ ಜೊತೆ ಸುಮಾರು ಅರ್ಧ ಗಂಟೆಕಾಲ ಯೋಗಾಭ್ಯಾಸ ನಡೆಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಬಿ ನಾರಾಯಣ ಉಸ್ತುವಾರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕ ವಾಸುದೇವ್, ಶ್ರೀಧರ್ ಜೀ ಮುಂತಾದವರು ಪಾಲ್ಗೊಂಡರು.
Click this button or press Ctrl+G to toggle between Kannada and English