ಮಂಗಳೂರು: ಯೋಗ ಉಸಿರಾಟದಷ್ಟೇ ಸಹಜ ಮತ್ತು ದೈನಂದಿನ ಪ್ರಕ್ರಿಯೆಯಾಗಬೇಕು. ವಿಶೇಷವಾಗಿ ಈ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ, ದೈಹಿಕ ಆರೋಗ್ಯ ಮತ್ತು ಅದಕ್ಕೆ ಪೂರಕವಾದ ಮಾನಸಿಕ ಆರೋಗ್ಯಕ್ಕೆ ಯೋಗ ಅತ್ಯಂತ ಸೂಕ್ತ, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಅಭಿಪ್ರಾಯಪಟ್ಟರು.
ನಗರದ ವಿಶ್ವವಿದ್ಯಾನಿಲಯ ಕಾಲೇಜು ಸೋಮವಾರ ಆನ್‌ಲೈನ್ ನಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ನಮ್ಮ ಸ್ವಾಸ್ಥ್ಯಕ್ಕೆ ಅಗತ್ಯವಾದ ಶಾರೀರಿಕ ದಂಡನೆ, ಮಾನಸಿಕ- ಬೌದ್ಧಿಕ ಆರೋಗ್ಯ, ಜೊತೆಗೆ ಆಧ್ಯಾತ್ಮಿಕ ಚಿಂತನೆಗಳಿಗೆ ಯೋಗವೇ ಪರಿಹಾರ. ಜಾತಿ, ಧರ್ಮ, ಲಿಂಗ ಮತ್ತು ಕಾಲವನ್ನು ಮೀರಿದ ಯೋಗ ನಮ್ಮನ್ನು ಜೀವನ ಶೈಲಿಗೆ ಸಂಬಂಧಿಸಿದ ರೋಗಗಳಿಂದ ದೂರವಿಡುತ್ತದೆ, ಎಂದರು. ಯೋಗ ಕಲೆಯೂ ಹೌದು, ವಿಜ್ಞಾನವೂ ಹೌದು, ಎಂಬುದನ್ನು ಉದಾಹರಣೆಗಳೊಂದಿಗೆ ವಿವರಿಸಿದ ಅವರು ವಿವಿ ಕಾಲೇಜು ಹಮ್ಮಿಕೊಂಡಿರುವ ಕೊವಿಡ್-19 ಲಸಿಕಾ ಅಭಿಯಾನವನ್ನು ಶ್ಲಾಘಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ, ಮಂಗಳೂರು ವಿಶ್ವವಿದ್ಯಾನಿಲಯದ ಮಾನವ ಪ್ರಜ್ಞೆ ಮತ್ತು ಯೋಗ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಕೆ ಕೃಷ್ಣ ಶರ್ಮಾ, ನಮ್ಮ ಜೀವನಕ್ರಮ, ಅಂದರೆ ನಿದ್ದೆ, ಶೌಚ ಮತ್ತು ಆಹಾರ ಸರಿಯಿದ್ದರೆ ನಮ್ಮ ಆರೋಗ್ಯವನ್ನು ಅರ್ಧದಷ್ಟು ಕಾಪಾಡಿಕೊಂಡಿದ್ದೇವೆ ಎಂದರ್ಥ. ಉಳಿದದ್ದು ನಮ್ಮ ಜೀವನಶೈಲಿಯನ್ನು ಆಧರಿಸಿರುತ್ತದೆ. ಯೋಗ ನಮ್ಮ ದೇಹ, ಮನಸ್ಸು ಮತ್ತು ಆತ್ಮಗಳ ಸಂಗಮ, ಎಂದರು.
ಪ್ರಾಂಶುಪಾಲೆ ಡಾ. ಅನಸೂಯ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಗವಿಜ್ಞಾನ ವಿಭಾಗದ ಸುಷ್ಮಿತಾ ಶೆಟ್ಟಿ ಯೋಗದ ಕುರಿತು, ಮತ್ತು ಉಮಾನಾಥ್ ಕೆ ಧ್ಯಾನದ ಪ್ರಾತ್ಯಕ್ಷಿಕೆ ನೀಡಿದರು. ವಿಭಾಗದ ಹಳೆ ವಿದ್ಯಾರ್ಥಿ, ಹಿರಿಯ ನಾಗರಿಕ ಜೆ ವಿ ಶೆಟ್ಟಿ ಮತ್ತು ಈಗಿನ ವಿದ್ಯಾರ್ಥಿ ಪೃಥ್ವಿನಾರಾಯಣ ಭಟ್ ಯೋಗ ಭಂಗಿಗಳನ್ನು ಪ್ರದರ್ಶಿಸಿದರು. ಪ್ರಾಧ್ಯಾಪಕ ಡಾ. ಅಜಿತೇಶ್ ಎನ್ ಹೆಚ್ ಕಾರ್ಯಕ್ರಮ ನಿರ್ವಹಿಸಿದರು. ಕಾಲೇಜಿನ ಹಿರಿಯ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
Click this button or press Ctrl+G to toggle between Kannada and English