ಬೆಂಗಳೂರು : ಕರ್ನಾಟಕ ಸರ್ಕಾರವು ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಇನಾಂ ಜಮೀನು ಕಾಯ್ದೆಗೆ ತಿದ್ದುಪಡಿ ತರಲು ಚಿಂತನೆ ನಡೆಸಿದೆ ಎಂದು ಕಂದಾಯ ಸಚಿವ ಆರ್ ಅಶೋಕ ಹೇಳಿದರು.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಚಿವರು,”ರಾಜ್ಯದಲ್ಲಿ 70 ಸಾವಿರ ಏಕರೆಗಿಂತ ಹೆಚ್ಚಿನ ಭೂಮಿ ಇನಾಮ್ತಿ ಕಾಯ್ದೆಯ ವ್ಯಾಪ್ತಿಯಲ್ಲಿದೆ. ರಾಜ ಮಹಾರಾಜರು, ಬ್ರಿಟಿಷರ ಕಾಲದಲ್ಲಿ 500, 1000 ಏಕರೆ ಇನಾಮ್ತಿ ಜಮೀನುಗಳನ್ನ ನೀಡಲಾಗಿತ್ತು. ರೈತರು ಅಲ್ಲಿ ಉಳುಮೆ ಮಾಡಿಕೊಂಡಿದ್ದರು. ಇನಾಂ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದ ರೈತರಿಗೆ ಪಹಣಿ ಕೊಡುವ ಕೆಲಸ ಕೂಡಾ ಆಗುತ್ತಿತ್ತು. ಇನಾಂ ಕಾಯ್ದೆ ರದ್ದಾದಾಗ ತಿಳುವಳಿಕೆಯ ಕೊರತೆಯಿಂದ ಲಕ್ಷಾಂತರು ರೈತರು ಅರ್ಜಿಯನ್ನೇ ಸಲ್ಲಿಸಿರಲಿಲ್ಲ. ಈ ನಿಟ್ಟಿನಲ್ಲಿ ಅವರಿಗೊಂದು ಅವಕಾಶ ನೀಡುವ ನಿಟ್ಟಿನಲ್ಲಿ ಇನಾಂ ಜಮೀನು ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ. ರಾಜ್ಯದ ಬೇರೆ ಬೇರೆ ಭಾಗಗಳಲ್ಲಿದ್ದ 70 ಸಾವಿರ ಏಕರೆ ಇನಾಂ ಜಮೀನು ಕುರಿತು ಪರಿಶೀಲನೆ ನಡೆಸಲು ನಿವೃತ್ತ ಅಧಿಕಾರಿ ಪಿ ಎಸ್ ವಸ್ತ್ರದ್ ನೇತೃತ್ವದಲ್ಲಿ ಸಮಿತಿ ರಚಿಲಾಗಿತ್ತು. ಆ ಸಮಿತಿಯು ರೈತರಿಗೆ ಅರ್ಜಿ ಸಲ್ಲಿಸಲು ಒಂದಿಷ್ಟು ಕಾಲಾವಖಾಶ ನೀಡಬೇಕು ಎಂದು ವರದಿ ಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಕಾಲಾವಕಾಶ ನೀಡಲು ನಿರ್ಧರಿಸಲಾಗಿದೆ”, ಎಂದು ಹೇಳಿದರು.
ಬೆಡ್ ಬ್ಲಾಕಿಂಗ್ ದಂಧೆಯ ಹಿಂದೆ ಸತೀಶ್ ರೆಡ್ಡಿ ಅವರಿದ್ದಾರೆ ಎಂಬ ಆಪಾದನೆ ಕುರಿತಂತೆ ಪ್ರತಿಕ್ರಿಯೆ ನೀಡಿದ ಸಚಿವರು,”ಈಗಾಗಲೇ ತನಿಖೆಯಲ್ಲಿ ಸತೀಶ್ ರೆಡ್ಡಿ ಅವರ ಪಾತ್ರ ಇದರಲ್ಲಿ ಏನು ಇಲ್ಲಾ ಎಂದು ತಿಳಿದುಬಂದಿದೆ. ಹೀಗೆ ಆಧಾರ ರಹಿತ ಆರೋಪ ಮಾಡುತ್ತಿರುವುದಕ್ಕೆ ಅವರಿಗೂ ತುಂಬಾ ಬೇಸರವಾಗಿದೆ,” ಎಂದರು.
ಕಂದಾಯ ಸಚಿವ ಆರ್ ಅಶೋಕ ಅವರು ತಮ್ಮ ಸಂಪುಟದ ಸಹೋದ್ಯೋಗಿ, ಪೌರಾಡಳಿತ ಮತ್ತು ಸಕ್ಕರೆ ಸಚಿವ ಎಂಟಿಬಿ ನಾಗರಾಜ್ ಅವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿಯನ್ನು ಕೊಡಲು ಯಾವುದೇ ಅಭ್ಯಂತರವಿಲ್ಲ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅಶೋಕ,”ಎಂಟಿಬಿ ನಾಗರಾಜ್ ಅವರು ನನ್ನನ್ನ ಭೇಟಿಯಾಗಿ ತಾವು ಬೆಂಗಳೂರು ಜಿಲ್ಲಾ ಉಸ್ತುವಾರಿಯನ್ನ ತೆಗೆದುಕೊಳ್ಳುವುದಾಗಿ ತಿಳಿಸಿದರು. ಹೀಗಾಗಿ ಈ ಕುರಿತು ನನ್ನ ಯಾವುದೇ ಅಭ್ಯಂತರವಿಲ್ಲ ಎಂಬುದನ್ನ ಸ್ಪಷ್ಟಪಡಿಸಿದ್ದೇನೆ”, ಎಂದು ಹೇಳಿದರು.
Click this button or press Ctrl+G to toggle between Kannada and English