ಮೈಸೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸುತ್ತೂರು ಮಠದ ಸ್ವಾಮೀಜಿ ಅವರನ್ನು ಭೇಟಿಯಾಗಲು ತೆರಳಿರುವುದು ಬಾರಿ ಕುತೂಹಲ ಮೂಡಿಸಿದೆ.
ಸುತ್ತೂರು ಮಠದ ಸ್ವಾಮೀಜಿ ಅವರನ್ನು ಭೇಟಿಯಾಗಲು ಬೆಳಗಾವಿಯಿಂದ ಮೈಸೂರಿಗೆ ರಮೇಶ್ ಜಾರಕಿಹೊಳಿ ಬರುತ್ತಿದ್ದಂತೆ ರಾಜ್ಯ ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಮೂಡಿತ್ತು. ಸಚಿವ ಸ್ಥಾನಕ್ಕಾಗಿ ಅವರು ಬರುತ್ತಿದ್ದಾರೆ ಎಂಬ ಸುದ್ದಿಯೂ ಹಬ್ಬಿತ್ತು.
ಸುತ್ತೂರು ಶ್ರೀಗಳನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್, ಸ್ವಾಮೀಜಿ ಅವರ ಬಳಿ ಬಂದು ಸಚಿವ ಸ್ಥಾನಕ್ಕೆ ಒತ್ತಡ ಹಾಕಿಸುವ ಸ್ಥಿತಿಗೆ ನಾನು ಬಂದಿಲ್ಲ. ನಾನು ಸ್ವಾಮೀಜಿ ಬಳಿ ಬಂದದ್ದು ಅವರ ಪೂರ್ವಾಶ್ರಮದ ಮಾತೃಶ್ರೀ ನಿಧನಕ್ಕೆ ಸಂತಾಪ ಸೂಚಿಸಲು. ಇಲ್ಲಿ ಯಾವ ರಾಜಕಾರಣವನ್ನೂ ಚರ್ಚೆ ಮಾಡಿಲ್ಲ. ಇನ್ನೊಬ್ಬರನ್ನು ಸಚಿವನನ್ನಾಗಿ ಮಾಡುವ ಶಕ್ತಿ ನನ್ನಲ್ಲಿದೆ. ನಾನು ಸಚಿವನಾಗೋಕೆ ಲಾಬಿ ಮಾಡುತ್ತೇನಾ? ಇರುವ ಶಾಸಕ ಸ್ಥಾನವನ್ನೇ ಬಿಡುವ ಚಿಂತನೆ ಮಾಡಿದ್ದವನು ನಾನು ಎಂದರು.
ಸರ್ಕಾರ ಬೀಳಿಸಿ ಸರ್ಕಾರ ರಚಿಸುವ ಶಕ್ತಿಯನ್ನು ದೇವರು ನನಗೆ ಕೊಟ್ಟಿದ್ದಾನೆ ನಾನು ಸಚಿವನಾಗುವುದಕ್ಕೆ ಲಾಬಿ ಮಾಡುವ ಸ್ಥಿತಿ ಬಂದಿಲ್ಲ ಎಂದು ಹೇಳಿದರು.
ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನಿರ್ಧಾರ ಮಾಡಿದ್ದು ಸತ್ಯ. ಆದರೆ ಕೆಲವು ಹಿರಿಯರ ಸಲಹೆ ಮೇರೆಗೆ ಆ ನಿರ್ಧಾರವನ್ನು ಕೈಬಿಟ್ಟಿರುವೆ. ನಾನು ಮನಸ್ಸು ನೊಂದು ರಾಜೀನಾಮೆ ನಿರ್ಧಾರ ಮಾಡಿದ್ದು ನಿಜ ಎಂದು ಪದೇಪದೆ ರಮೇಶ್ ಜಾರಕಿಹೊಳಿ ಒತ್ತಿ ಹೇಳಿದರು.
ರಾಜೀನಾಮೆ ಕೊಟ್ಟರೂ ನಾನೊಬ್ಬನೇ ಕೊಡ್ತೇನೆ. ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಮುಳುಗುವ ಹಡಗು. ನಾನೇಕೆ ಆ ಪಕ್ಷಕ್ಕೆ ಹೋಗಲಿ? ಬಿಜೆಪಿ ನನ್ನನ್ನು ಬಹಳ ಗೌರವಯುತವಾಗಿ ನಡೆಸಿಕೊಂಡಿದೆ. ನಾನು ಬಿಜೆಪಿಗೆ ದ್ರೋಹ ಮಾಡುವ ಕೆಲಸ ಎಂದಿಗೂ ಮಾಡೋದಿಲ್ಲ. ನಾನು ಮುಂಬೈಗೆ ಹೋಗಿದ್ದು ಸತ್ಯ. ದೇವೇಂದ್ರ ಫಡ್ನವೀಸ್ ನನ್ನ ರಾಜಕೀಯ ಗಾಡ್ ಫಾದರ್. ಅವರ ಬಳಿ ನನ್ನ ಮನಸ್ಸಿನ ನೋವುಗಳನ್ನು ಹೇಳಿಕೊಂಡಿದ್ದೇನೆ ಎಂದ ರಮೇಶ್, ಇನ್ನು 8 ರಿಂದ 10 ದಿನ ನನ್ನನ್ನು ಬಿಟ್ಟುಬಿಡಿ. ನಾನು ಅಲ್ಲಿಯವರೆಗೂ ಏನು ಮಾತಾಡಲ್ಲ ಎಂದು ಮಾಧ್ಯಮದವರಿಗೆ ಮನವಿ ಮಾಡಿದರು.
ಯಡಿಯೂರಪ್ಪ ಎರಡು ವರ್ಷ ಪೂರೈಸುತ್ತಾರೆ. ಮುಂದಿನ ಚುನಾವಣೆ ಅವರ ನೇತೃತ್ವದಲ್ಲಿ ನಡೆಯಲಿದೆ. ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ರಮೇಶ್ ಹೇಳಿದರು.
Click this button or press Ctrl+G to toggle between Kannada and English