ಕೇರಳದಲ್ಲಿ ಕನ್ನಡ ಸಂಪೂರ್ಣ ನಿರ್ನಾಮ, ಮಂಜೇಶ್ವರದ ಗ್ರಾಮಗಳ ಕನ್ನಡದ ಹೆಸರುಗಳ ಮಲಯಾಳೀಕರಣ

9:37 PM, Saturday, June 26th, 2021
Share
1 Star2 Stars3 Stars4 Stars5 Stars
(9 rating, 2 votes)
Loading...

Kerala-Kannadaಮಂಜೇಶ್ವರ : ಕೇರಳದಲ್ಲಿ ಕನ್ನಡವನ್ನು ಸಂಪೂರ್ಣ ನಿರ್ನಾಮ ಮಾಡ ಹೊರಟಿರುವ ಪಿಣರಾಯಿ ಸರಕಾರ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಹಾಗೂ ಅಲ್ಲಿನ ಕೆಲವು ಗ್ರಾಮಗಳ ಕನ್ನಡದ ಹೆಸರುಗಳನ್ನು ಮಲಯಾಳಂ ಭಾಷೆಗೆ ಬದಲಾಯಿಸಿ ನಾಮಫಲಕಗಳನ್ನು ಅಳವಡಿಸುತ್ತಿದೆ.

ಕೇರಳ ಸರ್ಕಾರದ ಈ ನಡೆಯನ್ನು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಖಂಡಿಸಿದೆ.

`ಮಧೂರು-ಮಧುರಮ್, ಮಲ್ಲ-ಮಲ್ಲಮ್, ಕಾರಡ್ಕ-ಕಡಗಮ್, ಬೇದಡ್ಕ-ಬೆಡಗಮ್, ಪಿಲಿಕುಂಜೆ-ಪಿಲಿಕುನ್ನು, ಆನೆಬಾಗಿಲು-ಆನೆವಾಗಿಲ್, ಮಂಜೇಶ್ವರ-ಮಂಜೇಶ್ವರಮ್, ಹೊಸದುರ್ಗ-ಪುದಿಯಕೋಟ, ಕುಂಬಳೆ-ಕುಂಬ್ಳಾ, ಸಸಿಹಿತ್ಲು-ಶೈವಲಪ್, ನೆಲ್ಲಿಕುಂಜ-ನೆಲ್ಲಿಕುನ್ನಿ’ ಇವುಗಳ ಮೂಲ ಹೆಸರನ್ನೆ  ಬದಲಾಯಿಸಿ ಕನ್ನಡದ ಕುರುಹು ಕೂಡ ಇರಬಾರದು ಎನ್ನುವುದು ಪಿಣರಾಯಿ ಸರಕಾರದ ನಡೆಯಾಗಿದೆ ಎಂದು ಅಲ್ಲಿನ ಕನ್ನಡಿಗರು  ಹೇಳಿದ್ದಾರೆ.

ಕೇರಳ ಸರಕಾರವು ಮಂಜೇಶ್ವರ ಹಾಗೂ ಕಾಸರಗೋಡಿನ ಕೆಲವು ಹಳ್ಳಿಗಳ ಹೆಸರನ್ನು ಬದಲಾಯಿಸಿ ಮಲಯಾಳಂ ಭಾಷೆಯ ಹೆಸರುಗಳನ್ನು ನೀಡಲು ಹೊರಟಿರುವುದು ಆ ಭಾಗದ ಕನ್ನಡಿಗರ ಪರಂಪರಾಗತ ಭಾವನೆಗಳಿಗೆ ಧಕ್ಕೆ ತರುವಂತಾಗಿರುತ್ತದೆ. ಇಂತಹ ಬದಲಾವಣೆಗಳನ್ನು ತರಲು ಪ್ರಯತ್ನಿಸುವ ಮುನ್ನ ಆ ಭಾಗದ ಕನ್ನಡಿಗರ ಅಭಿಪ್ರಾಯವನ್ನು ಅಥವಾ ಅಲ್ಲಿನ ನಾಗರಿಕರ ಅಭಿಪ್ರಾಯವನ್ನು ಕೇಳಿಲ್ಲ ಎಂದು ಪ್ರಾಧಿಕಾರ ಆಕ್ಷೇಪ ವ್ಯಕ್ತಪಡಿಸಿದೆ.

ಶಿಕ್ಷಣದಲ್ಲೂ ಕೇರಳ ಸರಕಾರ  ಕನ್ನಡಿಗ ಮಕ್ಕಳನ್ನು ವಂಚಿಸುತ್ತಿದೆ.  ಕನ್ನಡದ ಗಂಧಗಾಳಿಯಿಲ್ಲದ ಶಿಕ್ಷಕರನ್ನು ನೇಮಿಸುತ್ತಿರುವುದರಿಂದ ಪಾಠ ಅರ್ಥವಾಗದ ಮಕ್ಕಳ ಗೋಳು ಕೇಳುವವರಿಲ್ಲ.ಪೋಷಕರ ಪ್ರತಿಭಟನೆಗೂ ಮಕ್ಕಳ ಉಪವಾಸ ಸತ್ಯಾಗ್ರಹಕ್ಕೂ ಅಧಿಕಾರಿಗಳು ಮಣಿಯುತ್ತಿಲ್ಲ. ಪ್ರತಿಭಟನೆ ತೀವ್ರವಾದರೆ ಈ ಅನರ್ಹ ಶಿಕ್ಷಕರನ್ನು ಮೈಸೂರಿನ ಪ್ರದೇಶಿಕ ಭಾಷಾ ಶಿಕ್ಷಣಕೇಂದ್ರಕ್ಕೆ ಕಳುಹಿಸಿ ಆರು ತಿಂಗಳು ಶಿಶುವಿಹಾರ ಮಟ್ಟದ ಕನ್ನಡ ಕಲಿಕೆಯ ಪ್ರಹಸನ ನಡೆಸಿ ಮತ್ತೆ ಅದೇ ಶಾಲೆಗಳಲ್ಲಿ ನೇಮಿಸಿ ಮಲಯಾಳದಲ್ಲಿ ಪಾಠ ಮಾಡಿಸಲಾಗುತ್ತಿರುವುದು ಕನ್ನಡದ ದಮನಕ್ಕೆ ಮತ್ತೊಂದು ಸಾಕ್ಷಿಯಾಗಿದೆ.

ಇತ್ತೀಚೆಗೆ ಕಾಸರಗೋಡಿನಲ್ಲಿ ಕನ್ನಡದಲ್ಲಿ ಯಾವ ಮಾಹಿತಿಯೂ ಸಾಮಾನ್ಯ ಜನರಿಗೆ ದೊರೆಯುತ್ತಿಲ್ಲ. ಉತ್ತರ ಕೇರಳದಲ್ಲಿ  ಅಸ್ತಿತ್ವದಲ್ಲೇ ಇಲ್ಲದ ಓಣಂ ಹಬ್ಬವನ್ನು ಕಡ್ಡಾಯವಾಗಿ ಆಚರಿಸುವಂತೆ ಮಾಡಲಾಗುತ್ತಿದೆಯಲ್ಲದೆ ಶಾಲೆಗಳಲ್ಲಿ ಕನ್ನಡ ಮಕ್ಕಳು ದಸರಾ ಆಚರಿಸಲು ಕೂಡ ಅವಕಾಶ ನೀಡುತ್ತಿಲ್ಲದಿರುವುದು ಮತ್ತೊಂದು ದುರಂತ.

ಭಾಷಿಕವಾಗಿ ಸಾಂಸ್ಕೃತಿಕವಾಗಿ ಅವಿಭಜಿತ ದಕ್ಷಿಣಕನ್ನಡವನ್ನು ಹೋಲುವ ಈ ಪ್ರದೇಶದಲ್ಲಿ ಕನ್ನಡ, ತುಳು, ಮರಾಠಿ, ಕೊಂಕಣಿ, ಉರ್ದು, ಬ್ಯಾರಿ, ಸ್ಥಳೀಯ ಮಲಯಾಳ ಮೊದಲಾದ ಭಾಷೆಗಳನ್ನಾಡುವವರು ಕನ್ನಡಶಾಲೆಗಳಲ್ಲಿ ಕಲಿಯುತ್ತ ಪರಂಪರಾಗತವಾಗಿ ಅಚ್ಚಗನ್ನಡಿಗರಾಗಿದ್ದರು. ಇಂದು ಆಡಳಿತ, ವ್ಯವಹಾರ, ಶಿಕ್ಷಣ, ಸಂಸ್ಕೃತಿ ಮೊದಲಾದ ವಿವಿಧ ರಂಗಗಳಲ್ಲಿ ಮಲಯಾಳ ಹೇರಿಕೆಯ ಪರಿಣಾಮವಾಗಿ ಕನ್ನಡಿಗರ ಮನೆಮಾತು ಕೂಡ ಮಲಯಾಳವಾಗಿ ಬದಲಾಗುತ್ತಿದೆ.

ಈ ಕುರಿತು ಪ್ರಾಧಿಕಾರದ ಅಧ್ಯಕ್ಷರ ಡಾ.ಸಿ. ಸೋಮಶೇಖರ ಅವರು ಕೇರಳ ಸರ್ಕಾರ ಮತ್ತು ಅಲ್ಲಿನ ಲೋಕೋಪಯೋಗಿ ಹಾಗೂ ಕಂದಾಯ ಸಚಿವರಿಗೆ ಪತ್ರ ಬರೆದಿದ್ದು, ಗ್ರಾಮಗಳ ಕನ್ನಡದ ಹೆಸರುಗಳನ್ನು ಯಾವುದೇ ಕಾರಣಕ್ಕೂ ಬದಲಾಯಿಸಬಾರದು ಎಂದು ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರನ್ನು ಶುಕ್ರವಾರ ಭೇಟಿ ಮಾಡಿ, ನಾಮಫಲಕ ಬದಲಾಯಿಸುವ ಪ್ರಕ್ರಿಯೆಯನ್ನು ಕೈಬಿಡುವಂತೆ ಕೇರಳ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುವಂತೆ ಮನವಿ ಪತ್ರ ಸಲ್ಲಿಸಿದ್ದಾರೆ.

 

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English