ಬೆಂಗಳೂರು : ನಾಡಪ್ರಭು ಕೆಂಪೇಗೌಡ ಅವರ ಬೆಂಗಳೂರಿನ ಕುರಿತು ಹೊಂದಿದ್ದ ಕನಸುಗಳನ್ನು ಸಾಕಾರಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬದ್ಧವಾಗಿದ್ದು, ನಗರಕ್ಕೆ ಸೂಕ್ತ ಮೂಲಭೂತ ಸೌಕರ್ಯಗಳನ್ನು ಸೃಷ್ಟಿಸಲು ಅಗತ್ಯ ಯೋಜನೆಗಳನ್ನು ಜಾರಿ ತರಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.
ಬಾನುವಾರ ಕೆ.ಆರ್.ಪುರಂನಲ್ಲಿ ಹಮ್ಮಿಕೊಳ್ಳಲಾಗಿದ್ದ ಬೆಂಗಳೂರು ನಗರ ಸಂಸ್ಥಾಪಕ ನಾಡಪ್ರಭು ಕೆಂಪೇಗೌಡ ಅವರ 512ನೇ ಜನ್ಮ ಶತಮಾನೋತ್ಸವದಲ್ಲಿ ಪಾಲ್ಗೊಂಡು, ಕೆಂಪೇಗೌಡ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾಡಪ್ರಭು ಕೇಂಪೇಗೌಡರು ಓರ್ವ ದೂರದೃಷ್ಟಿಯ ನಾಯಕರಾಗಿದ್ದರು ಮತ್ತು ಪ್ರಗತಿಪರ ಚಿಂತನೆ ಹೊಂದಿದ್ದರು. ಅವರ ಅವಧಿಯಲ್ಲಿ ರೈತರು ಹಾಗೂ ಬಡವರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದರು ಎಂದು ಸ್ಮರಿಸಿದರು.
ನಂತರ ಅವರು ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ನೇತೃತ್ವದಲ್ಲಿ ಕೋವಿಡ್ ಸೋಂಕಿನಿಂದ ನಿಧನರಾದವರ ಕುಟುಂಬದವರಿಗೆ 1 ಲಕ್ಷ ರೂ. ಸಹಾಯಧನ ಹಾಗೂ ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ದಿನಸಿ ಕಿಟ್‌ಗಳನ್ನು ವಿತರಿಸಿದರು.
ನಂತರ ಮಾತನಾಡಿದ ಸಚಿವ ಆರ್. ಅಶೋಕ, ’ಕೋವಿಡ್ ಇಂದ ಜನರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಳ್ಳುತ್ತಿರುವುದು ದುಃಖಕರ ಸಂಗತಿ.’ ಎಂದರು.
ಅನೇಕ ಮಕ್ಕಳು ಕೋವಿಡ್ ನಿಂದ ತಮ್ಮ ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಆದರೆ ಈ ಯಾವುದೇ ಮಕ್ಕಳು ಅನಾಥರಾಗದಂತೆ ನೆರವು ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ರೂಪಿಸಿದೆ ಎಂದರು.
ಇಂದು ಸಂಕಷ್ಟದ ಸಮಯದಲ್ಲಿ ಜನರಿಗೆ ಬೆಂಬಲವಾಗಿ ನಿಂತಿರುವ ಭೈರತಿ ಬಸವರಾಜು ಅವರ ನಡೆಯನ್ನು ನಾನು ಶ್ಲಾಘಿಸುತ್ತೇನೆ. ನಾನು ಗಂಗಾ ನದಿಯಲ್ಲಿ ಹೆಣಗಳನ್ನು ತೇಲಿ ಬಿಟ್ಟಿದ್ದನ್ನು ನೋಡಿದ್ದೇನೆ. ಆದರೆ, ಕರ್ನಾಟಕ ಸರ್ಕಾರ ವಾರಸುದಾರರಿಲ್ಲದ ಎಲ್ಲ ದೇಹಗಳ ಅಸ್ತಿ ವಿಸರ್ಜನೆಯ ಮಹತ್ವದ ಕ್ರಮ ಕೈಗೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಶ್ರೀ ಸದಾನಂದ ಗೌಡ, ಉಪಮುಖ್ಯಮಂತ್ರಿ ಶ್ರೀ ಲಕ್ಷ್ಮಣ ಸವದಿ, ಗೃಹ ಸಚಿವರಾದ ಶ್ರೀ ಬಸವರಾಜ ಬೊಮ್ಮಾಯಿ, ಅರಣ್ಯ ಮತ್ತು ಕನ್ನಡ ಸಂಸ್ಕ್ರತಿ ಇಲಾಖೆಯ ಸಚಿವರಾದ ಶ್ರೀ ಅರವಿಂದ ಲಿಂಬಾವಳಿ, ನಗರಾಭಿವೃದ್ಧಿ ಸಚಿವರಾದ ಶ್ರೀ ಭೈರತಿ ಬಸವರಾಜ್ ,ಸಹಕಾರ ಸಚಿವ ಎಸ್ ಟಿ ಸೋಮಶೇಖರ, ರಾಜ್ಯ ಮಹಿಳಾ ಬಿಜೆಪಿ ಅಧ್ಯಕ್ಷೆ ಗೀತಾ ವಿವೇಕಾನಂದ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English