ಮಂಗಳೂರು : ಇರುವೆ ಗೆದ್ದಲುಗಳು ನಾಶವಾಗಿ ಸಾಗರದ ಮೀನುಗಳೂ ನಾಶವಾಗುತ್ತವೆ.ಜೇನುಹುಳದ ಸಂತತಿಯ ನಾಶವಾಗಿ ಸಂಪನ್ಮೂಲಗಳ ಅವನತಿಯಾಗುತ್ತಿದೆ’ ಎಂದು ಜನಪ್ರಿಯ ಪರಿಸರ ಅಧ್ಯಯನಕಾರ ಸಾಹಿತಿ ದಿನೇಶ್ ಹೊಳ್ಳ ಅವರು ಹೇಳಿದರು.
ಅವರು ಶನಿವಾರ, ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಮಂಗಳೂರಿನಲ್ಲಿ ವೆಬಿನಾರ್ ಮೂಲಕ ನಡೆದ ‘ಪ್ರಕೃತಿಯ ಪಥದಲ್ಲಿ’ ವಿಷಯದಲ್ಲಿ ಉಪನ್ಯಾಸ ನೀಡುತ್ತಾ ಮಾತನಾಡಿದರು.
“ಗಿರಿಯ ಕಲ್ಲನು ಕಡಿವ ಧನದಾಸೆಗೆ
ದೇಗುಲದ ಕಲ್ಲಿಗೆ ಮಾತ್ರ ನಮಿಸುವ ಮನದಾಸೆಗೆ” ಎಂದು ಮನುಜನ ಸ್ವಾರ್ಥವನ್ನು ಮಾರ್ಮಿಕವಾಗಿ ಬಣ್ಣಿಸಿದ ಅವರು, ‘ರಕ್ಷಣಾ ಹೊದಿಕೆಯಾದ ಹುಲ್ಲುಗಾವಲು ನಾಶವಾಗಿ ರಕ್ಷಣಾ ಹೊದಿಕೆಯು ನಾಶವಾಗುತ್ತದೆ.ಇದಕ್ಕೆ ಜಲನಾಡಿಯ ನಾಶ ಕಾರಣ. ಹಾಗೆಯೇ ಜಲಸ್ಪೋಟಗಳು ಅದೆಷ್ಟು ಮಾರಕಗಳಾಗಿವೆ ಎಂದರೆ ನದಿಗಳೇ ಮುಚ್ಚಲ್ಪಟ್ಟು ಜಲ ಸಂಪನ್ಮೂಲವೇ ಬರಿದಾಗುತ್ತದೆ. ಎತ್ತಿನಹೊಳೆಯಂತಹ ಯೋಜನೆಗಳ ಮೂಲಕ ಹಂತ ಹಂತವಾಗಿ ಪಶ್ಚಿಮ ಘಟ್ಟದ ಹತ್ಯೆ ಮಾಡುತ್ತಿದ್ದೇವೆ ‘ ಎಂದು ಖೇದ ವ್ಯಕ್ತ ಪಡಿಸಿದರು.
ನದಿಗಳಿಗೆಲ್ಲಾ ಅಣೆಕಟ್ಟು ಮಾಡಿ ನದೀ ಮೂಲವೇ ಬಡಕಲಾಗಿದೆ. ಮರಳು ತೆಗೆವ ಮರುಳಿನಿಂದ ನೆಲ ದುರ್ಬಲವಾಗಿ ಸೇತುವೆ ಸಹ ಮುರಿದು ಬೀಳುವಂತಾಗಿದೆ. ಕಾಡಿನ ನೋವು ರೆಸಾರ್ಟ್ ಮಾಡುವವರಿಗೆ ಅರಿವಾಗದು ಎನ್ನುತ್ತಾ ಪಾರದರ್ಶಕವಿಲ್ಲದ ಎತ್ತಿನ ಹೊಳೆಯಂತಹ ಯೋಜನೆಗಳು ಇನ್ನೂ ಇಪ್ಪತ್ತೈದು ವರ್ಷ ಮುಂದುವರಿದರೆ ನಮ್ಮ ಹಣ ಮಾತ್ರ ವ್ಯರ್ಥವಾಗುತ್ತದೆಯೇ ಹೊರತು ಲಾಭವೇನಿಲ್ಲ ಎಂದವರು ವಿಶ್ಲೇಷಿಸಿದರು
ಕುಮಾರಧಾರಾ ನದಿಗೂ ಸುರಂಗ ಮಾಡಿ ತಿರುಗಿಸುವ ಯೋಜನೆ ಹಾಗೆಯೇ ಇತರ ನದಿಗಳನ್ನೂ ತಿರುಗಿಸುವ ಯೋಜನೆ ಇವುಗಳನ್ನೆಲ್ಲಾ ಪ್ರಶ್ನಿಸುವವರೇ ಇಲ್ಲದಾಗಿದೆ.ಅಭಿವೃದ್ಧಿಯ ನೆಪದ ಯೋಜನೆಗಳು ಬಹಳ ತೊಂದರೆ ಕೊಡುವುದು ನಿಶ್ಚಯ ಎಂದರು. ಕಾಡಿನ ಮಕ್ಕಳಿಗೆ ಪರಿಸರ ಪಾಠ ,ಕಾಡು ನಮ್ಮದು ಫಲಾನುಭವಿಗಳೂ ನಾವೇ ಎಂಬ ಭಾವ ಇರಿಸುವುದೂ ಇಲ್ಲವಾದರೆ ನಮ್ಮ ದುರಂತಕ್ಕೆ ನಾವೇ ಕಾರಣ ಎಂಬಂತಾಗುತ್ತದೆ ಎಂದರು.
ಬಳಿಕ ಮಾತನಾಡಿದ ಮುಖ್ಯ ಅತಿಥಿ ಖಿದ್ಮಾ ಫೌಂಡೇಷನ್ ನ ರಾಜ್ಯ ಕಾರ್ಯದರ್ಶಿ ಶ್ರೀಮತಿ ಅಮಿತಾ ಅಶೋಕರವರು ‘ಬರೆಯುವವರು ಒಳ್ಳೆಯ ಪರಿಸರವಿದ್ದರೆ ಸ್ಪೂರ್ತಿ ಗೊಳ್ಳುತ್ತಾರೆ.
ಪ್ರಕೃತಿಯು ನಮಗೆ ಎಲ್ಲವನ್ನೂ ಕೊಡುತ್ತದೆ ನಾವು ಮಾತ್ರ ಅದನ್ನು ನಾಶ ಮಾಡುತ್ತೇವೆ. ಇದು ಖೇದಕರ’ ಎಂದರು.
ವಿಶೇಷ ಆಹ್ವಾನಿತರಾಗಿದ್ದ ಚುಟುಕು ಸಾಹಿತ್ಯ ಪರಿಷತ್ತಿನ ಸ್ಥಾಪಕ ಕೇಂದ್ರ ಸಂಚಾಲಕರಾದ ಮೈಸೂರಿನ ಎಂ.ಜಿ.ಆರ್ ಅರಸ್ ಅವರು ಮಾತನಾಡಿ ಮಂಗಳೂರು ಚುಟುಕು ಸಾಹಿತ್ಯ ಪರಿಷತ್ತಿನ ಅತ್ಯಮೋಘ ಕಾರ್ಯವನ್ನು ಶ್ಲಾಘಿಸುತ್ತಾ , ‘ಅರಿವಿರದೆ ಈ ಮೊದಲು ಎತ್ತಿನ ಹೊಳೆ ಯೋಜನೆಯನ್ನು ಬೆಂಬಲಿಸುತ್ತಿದ್ದುದು ತಪ್ಪಾಯಿತೆಂದು ಇಂದಿನ ಉಪನ್ಯಾಸದ ಮೂಲಕ ಅರಿವಾಗುತ್ತಿದೆ’ ಎಂದರು.
ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾ.ವೀ.ಕೃಷ್ಣದಾಸ್ ಪ್ರಾಸ್ತಾವಿಕವಾಗಿ ಮಾತನಾಡಿ ಸಾಹಿತಿಗಳಿಗೆ ಬರೆಯುವುದರ ಜೊತೆಗೆ ಪರಿಸರ ಮತ್ತು ಸಾಮಾಜಿಕ ಕಾಳಜಿಯು ಮುಖ್ಯ’ ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ಚು.ಸಾ.ಪ ಉಪಾಧ್ಯಕ್ಷೆ ಶ್ರೀಮತಿ ಅರುಣಾ ನಾಗರಾಜ್ ಮಾತನಾಡುತ್ತಾ, ‘ಸಾಹಿತ್ಯವು ಒಂದು ಉದ್ಯಾನವನದಂತೆ ಹಾಗೆಯೇ ಪರಿಸರವೂ ಕೂಡಾ .ನಾವು ಪರಿಸರ ಉಳಿಸಿದರೆ ನಮಗೆ ಹಿತವಾಗುತ್ತದೆ. ಲಾಕ್ ಡೌನ್ ಕಾಲದಲ್ಲೂ ಕೊರೊನಾಕ್ಕೆ ಸೆಡ್ಡು ಹೊಡೆದು ಮಂಗಳೂರು ಚುಸಾಪ ನಿರಂತಾರವಾಗಿ ಸಾಹಿತ್ಯ ಸೇವೆ ಮಾಡಿ ಜನಮನ್ನಣೆಗೆ ಪಾತ್ರವಾಗಿದೆ’ ಎಂದರು.
ಅನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅಮೆರಿಕ ವಾಸಿ ಶ್ರೀ ಡಾ.ಎ. ಕೇಶವರಾಜ್, ಡಾ ಸುರೇಶ ನೆಗಳಗುಳಿ, ಮಹಾಂತೇಶ ಕೋಳಿವಾಡ, ಪ್ರೊ.ಬಿ.ಆರ್. ಪೋಲೀಸ್ ಪಾಟೀಲ್, ಸಂಕೇಶ್ವರದಿಂದ ಹಮೀದಾ ಬೇಗಂ ದೇಸಾಯಿ,ಕಾಸರಗೋಡಿನಿಂದ ಸುಶೀಲಾ ಪದ್ಯಾಣ, ದಾಂಡೇಲಿಯಿಂದ ದೀಪಾಲಿ ಸಾಮಂತ್,ವೆಂಕಟ್ ಭಟ್ ಎಡನೀರು, ಧಾರವಾಡದಿಂದ ಡಾ.ಸುಧಾ ಜೋಶಿ, ಹುಬ್ಬಳ್ಳಿಯಿಂದ ಮಹಾಂತೇಶ ಕೋಳಿವಾಡ, ಬೆಳಗಳಿಯಿಂದ ಶಿವಪ್ರಸಾದ್, ಕವಿ ಶೇಖರ ಶೆಟ್ಟಿ, ನಳಿನಾಕ್ಷಿ ಉದಯ ರಾಜ್,ಮುಂಬಯಿಯ ರಶ್ಮಿ ಭಟ್, ಹಿರಿಯ ಕವಯತ್ರಿ ಸತ್ಯವತಿ ಭಟ್ ಕೊಳಚಪ್ಪು,ನಾರಾಯಣ ನಾಯ್ಕ ಕುದುಕೋಳಿ, ಮುಂತಾದವರು ಭಾಗವಹಿಸಿದರು.
ಮಂಗಳೂರು ಚುಸಾಪ ಕಾರ್ಯದರ್ಶಿ ವಿಜಯಲಕ್ಷ್ಮೀ ಕಟೀಲು ಸ್ವಾಗತಿಸಿದರು, ರೇಖಾ ನಾರಾಯಣ್ ಪ್ರಾರ್ಥಿಸಿದರು, ಕಾರ್ಯಕಾರಿ ಸದಸ್ಯ ವಿಘ್ನೇಶ್ ಕೆ.ಭಿಡೆ ಸಂಪನ್ಮೂಲ ವ್ಯಕ್ತಿ ದಿನೇಶ್ ಹೊಳ್ಳರನ್ನು ಪರಿಚಯಿಸಿದರು. ಹಿರಿಯ ಕವಿ ಎನ್. ಸುಬ್ರಾಯ ಭಟ್ ವಂದಿಸಿದರು.
ಖ್ಯಾತ ಟಿ.ವಿ ನಿರೂಪಕಿ ಡಾ. ಪ್ರಿಯಾ ಹರೀಶ್ ಕಾರ್ಯಕ್ರಮ ನಿರೂಪಿಸಿದರು.
Click this button or press Ctrl+G to toggle between Kannada and English
June 27th, 2021 at 22:37:59
ಮಂಗಳೂರು ಚುಟುಕು ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ದಿನೇಶ್ ಹೊಳ್ಳ ಸರ್ ಅವರ ಉಪನ್ಯಾಸಿಕೆ ತುಂಬಾ ಉಪಯುಕ್ತ ಮಾಹಿತಿ ನೀಡಿತು ಎತ್ತಿನ ಹೊಳೆಯ ದುಷ್ಟಕೃತ್ಯಗಳನ್ನು ಎಳೆ ಎಳೆಯಾಗಿ ವಿವರಿಸಿದರು ಪರಿಸರ ಹೇಗೆ ರಕ್ಷಿಸಬೇಕು ಪರಿಸರದಿಂದ ಮಾತ್ರ ನಾವು ಬದುಕಲು ಸಾಧ್ಯ ಹಾಗೆ ಪ್ರಕೃತಿಯ ಪ್ರತಿ ಜೀವಿಗೂ ಬದುಕಲು ಹಕ್ಕಿದ್ದೆ ಕೇವಲ ಪುಟ್ಟ ಇರುವೆ ಮತ್ತು ಗೆದ್ದಲು ತಮ್ಮ ಕರ್ತವ್ಯ ನಿರ್ವಹಿಸದಿದ್ದರೆ ಅದರ ಪರಿಣಾಮ ಏನಾಗುವುದು ಎಂಬುದನ್ನು ವಿವರಿಸಿ ಕೊಟ್ಟರುಹಾಗೆಯೇ ಮಗುವಿಗೆ ಬರ್ತ್ಡೇ ಕೇಕು ಪಾರ್ಟಿ ಇದರ ಮೇಲೆ ವ್ಯಾಮೋಹ ಬರಿಸುವ ಬದಲು ಜನುಮ ದಿನಕ್ಕೆ ಗಿಡ ನೆಡಲು ಹೇಳಿ ಕೊಡಿ ಎಂಬ ಉತ್ತಮ ಉಪನ್ಯಾಸವ ನೀಡಿದರು ನಿಜಕ್ಕೂ ಇಂತಹ ಉಪನ್ಯಾಸಗಳನ್ನು ಯುವ ಪೀಳಿಗೆಗೆ ನೀಡಬೇಕು ಇಂತಹ ಒಂದು ಅತ್ಯದ್ಭುತ ಮತ್ತು ಅತ್ಯಮೂಲ್ಯ ಯೋಜನೆ ರೂಪಿಸಿದ ಚುಟುಕು ಸಾಹಿತ್ಯ ಪರಿಷತ್ ಗೆ ಹೃನ್ಮನದ ಧನ್ಯವಾದಗಳು 🙏🙏🙏🙏