ಬೆಂಗಳೂರು : ಕೇರಳ ಗಡಿ ಗ್ರಾಮಗಳ ಕನ್ನಡ ಹೆಸರುಗಳನ್ನು ಮಲಯಾಳಿ ಭಾಷೆಗೆ ಬದಲಾವಣೆ ಮಾಡುವ ಕೇರಳ ಸರ್ಕಾರದ ಕ್ರಮವನ್ನು ಕುರಿತಂತೆ ಮಾನ್ಯ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಸನ್ಮಾನ್ಯ ಮುಖ್ಯಮಂತ್ರಿ ಗಳಿಗೆ ಬರೆದ ಪತ್ರ.
ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ವಂದನೆಗಳು,
ಈ ಮೂಲಕ ತಮ್ಮ ಆದ್ಯ ಗಮನಕ್ಕೆ ತರಲು ಬಯಸುವುದೇನೆಂದರೆ ಕರ್ನಾಟಕದ ಗಡಿ ಪ್ರದೇಶಗಳಾದ ಕಾಸರಗೋಡು ಮತ್ತು ಮಂಜೇಶ್ವರ ಸೇರಿದಂತೆ ಕೆಲವು ತಾಲ್ಲೂಕುಗಳ ಕನ್ನಡ ಗ್ರಾಮಗಳ ಹೆಸರುಗಳನ್ನು ಮಲೆಯಾಳಿ ಭಾಷೆಗೆ ಬದಲಾವಣೆ ಮಾಡಲು ಕೇರಳ ಸರ್ಕಾರ ನಿರ್ಣಯ ಕೈಗೊಂಡು ಆ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಈ ಪ್ರದೇಶಗಳಲ್ಲಿ ಕನ್ನಡ ಭಾಷಿಕರು ಅಧಿಕ ಸಂಖ್ಯೆಯಲ್ಲಿದ್ದಾರೆ. ಶತಶತಮಾನಗಳಿಂದಲೂ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಇಲ್ಲಿನ ಜನ ರೂಢಿಸಿಕೊಂಡಿದ್ದಾರೆ. ಕನ್ನಡ ಪರಂಪರೆಯನ್ನು ಪಾಲಿಸಿಕೊಂಡು ಬಂದಿರುವ ಇಲ್ಲಿನ ಜನರ ಭಾವನೆಗಳಿಗೆ ಇದರಿಂದ ಧಕ್ಕೆಯಾಗಿದೆ. ಪ್ರತಿಯೊಂದು ಗ್ರಾಮದ ಹೆಸರೂ ಅಲ್ಲಿನ ಜನರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುತ್ತದೆ. ಮತ್ತು ಅಲ್ಲಿನ ಸ್ಥಳೀಯ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವಂತಿರುತ್ತದೆ. ಆ ಹೆಸರಿನಲ್ಲಿ ಒಂದು ಜನ ಸಂಸ್ಕೃತಿ ಬೆಳೆದಿರುತ್ತದೆ. ಇದನ್ನು ಬದಲಾವಣೆ ಮಾಡುವುದರಿಂದ ಆ ಜನ ಸಂಸ್ಕೃತಿಗೆ ಪೆಟ್ಟು ಬೀಳುತ್ತದೆ. ಈ ಗ್ರಾಮಗಳ ಹೆಸರುಗಳನ್ನು ಬದಲಾವಣೆ ಮಾಡುವ ಬಗ್ಗೆ ಅಲ್ಲಿನ ಸರ್ಕಾರ ಆ ಗ್ರಾಮಗಳ ಜನರೊಂದಿಗೆ ಚರ್ಚಿಸಿ ಕನಿಷ್ಠ ಅವರ ಅಭಿಪ್ರಾಯ ಸಂಗ್ರಹಿಸುವ ಕೆಲಸವನ್ನೂ ಮಾಡದೆ ಏಕ ಪಕ್ಷೀಯವಾಗಿ ನಿರ್ಧಾರ ಕೈಗೊಂಡಿದೆ.
ಹಾಗಾಗಿ ಕನ್ನಡದ ಅಸ್ಮಿತೆಯನ್ನು ಕಾಪಾಡುವ ನಿಟ್ಟಿನಲ್ಲಿ ನಾವು ಕೇರಳ ಸರ್ಕಾರದ ಈ ಕ್ರಮವನ್ನು ಬಲವಾಗಿ ವಿರೋಧಿಸಬೇಕಾಗಿದೆ. ಇದೊಂದು ಭಾವನಾತ್ಮಕ, ಸೂಕ್ಷ್ಮ ವಿಚಾರವಾಗಿರುವುದರಿಂದ ತಾವು ಕೇರಳ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ಕನ್ನಡ ಗ್ರಾಮಗಳ ಕನ್ನಡದ ಹೆಸರುಗಳನ್ನು ಮಲೆಯಾಳಿ ಭಾಷೆಗೆ ಬದಲಾವಣೆ ಮಾಡುವ ಪ್ರಕ್ರಿಯೆ ಕೈಬಿಡಬೇಕೆಂದು ಒತ್ತಾಯಿಸಲು ಈ ಮೂಲಕ ತಮ್ಮನ್ನು ಕೋರುತ್ತೇನೆ.
ಗೌರವಗಳೊಂದಿಗೆ,
ತಮ್ಮ ವಿಶ್ವಾಸಿ,
(ಅರವಿಂದ ಲಿಂಬಾವಳಿ)
ಶ್ರೀ ಬಿ.ಎಸ್.ಯಡಿಯೂರಪ್ಪ ನವರು
ಸನ್ಮಾನ್ಯ ಮುಖ್ಯಮಂತ್ರಿಗಳು,
ಕರ್ನಾಟಕ ಸರ್ಕಾರ,
ವಿಧಾನಸೌಧ, ಬೆಂಗಳೂರು.
Click this button or press Ctrl+G to toggle between Kannada and English