ಮಂಗಳೂರು : ಗುರುಪುರ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಮಠದಗುಡ್ಡೆಯಲ್ಲಿ ಕಳೆದ ವರ್ಷ(ಜು. 5) ಸಂಭವಿಸಿದ ಭೂಕುಸಿತ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ ಪ್ರದೇಶದ 48 ಕುಟುಂಬಗಳಿಗೆ ಹಾಗೂ ಅಡ್ಡೂರು ಗ್ರಾಮದ ಒಂದು ಕುಟುಂಬಕ್ಕೆ ಮಂಗಳವಾರ ಗುರುಪುರ ಕೈಕಂಬದ ಖಾಸಗಿ ಸಭಾಗೃಹವೊಂದರಲ್ಲಿ ಮಂಗಳೂರು ನಗರ ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿ ಹಕ್ಕುಪತ್ರ ವಿತರಿಸಿದರು.
ಈ ಸಂದರ್ಭದಲ್ಲಿ ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ಶಾಸಕನಾದ ಬಳಿಕ ಕ್ಷೇತ್ರ ವ್ಯಾಪ್ತಿಯ ಸುಮಾರು 4,000 ಕುಟುಂಬಗಳಿಗೆ ಹಕ್ಕುಪತ್ರ ನೀಡಿದ್ದರೂ ಇಂದಿನ ಹಕ್ಕುಪತ್ರ ನೀಡಿಕೆ ಕಾರ್ಯಕ್ರಮ ವಿಶಿಷ್ಟವಾಗಿದೆ. ಮಠದಗುಡ್ಡೆಯಲ್ಲಿ ಗುಡ್ಡ ಕುಸಿತ ಸಂಭವಿಸಿದ ಬಳಿಕ 70ಕ್ಕೂ ಹೆಚ್ಚು ಕುಟುಂಬಗಳು ನಿವೇಶನರಹಿತವಾಗಿವೆ ಹಾಗೂ ಇವರಲ್ಲಿ ಹೆಚ್ಚಿನವರಲ್ಲಿ ಹಕ್ಕುಪತ್ರವಿರಲಿಲ್ಲ. ಪಂಚಾಯತ್ ಆಡಳಿತ, ಸದಸ್ಯರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಹಲವು ಬಾರಿ ನನ್ನಲ್ಲಿ ಈ ಬಗ್ಗೆ ನಿವೇದಿಸಿಕೊಂಡಿದ್ದು, ಕಾನೂನು ತೊಡಕು ನಿವಾರಣೆಗಾಗಿ ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಸಿ, ಕೇವಲ ಆರು ತಿಂಗಳೊಳಗೆ ಎಲ್ಲರಿಗೂ ಹಕ್ಕುಪತ್ರ ಸಿಗುವಂತೆ ಪ್ರಯತ್ನಿಸಿದ್ದೇನೆ ಎಂಬ ಸಮಾಧಾನ ನನಗಿದೆ ಎಂದರು.
ಗುರುಪುರ ನಾಡಕಚೇರಿ ಉಪತಹಶೀಲ್ದಾರ್ ಶಿವಪ್ರಸಾದ್, ಗುರುಪುರ ಪಂಚಾಯತ್ ಅಧ್ಯಕ್ಷ ಯಶವಂತ ಕುಮಾರ್ ಶೆಟ್ಟಿ, ಸದಸ್ಯರಾದ ರಾಜೇಶ್ ಸುವರ್ಣ, ಸಚಿನ್ ಅಡಪ ಹಾಗೂ ನಳಿನಿ ಶೆಟ್ಟಿ, ಕಂದಾಯ ನಿರೀಕ್ಷಕ ನವನೀತ್ ಮಾಳವ, ಬಿಜೆಪಿ ಮುಖಂಡ ಸೋಹನ್ ಅತಿಕಾರಿ, ಪಂಚಾಯತ್ ಪಿಡಿಒ ಅಬೂಬಕ್ಕರ್ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳಾದ ದಿನೇಶ್, ಪವಿತ್ರಾ, ಜ್ಞಾನೇಶ್ವರಿ, ಯಮುನಪ್ಪ ಕೋರಿ, ಮೊಹಬೂನ್ ಸಾಬ್, ಸಿಬ್ಬಂದಿ ವರ್ಗ, ಬಿಜೆಪಿ ಪ್ರಮುಖರಾದ ಹರೀಶ್ ಬಳ್ಳಿ, ಸುನಿಲ್ ಕುಮಾರ್ ಜಲ್ಲಿಗುಡ್ಡೆ, ಶ್ರೀಕರ್ ಶೆಟ್ಟಿ, ಸುಧೀರ್ ಕಾಮತ್, ವಿಜಯ್ ಮತ್ತಿತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English