ಹೆಚ್ಚಿನ ಕೋವಿಡ್ ಲಸಿಕೆ ಪೂರೈಕೆಗೆ ಕೇಂದ್ರಕ್ಕೆ ಮನವಿ:ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

10:06 PM, Tuesday, June 29th, 2021
Share
1 Star2 Stars3 Stars4 Stars5 Stars
(No Ratings Yet)
Loading...

Dr.Sudhakarಬೆಂಗಳೂರು/ಮೈಸೂರು : ಕೇಂದ್ರ ಆರೋಗ್ಯ ಸಚಿವರೊಂದಿಗೆ ಚರ್ಚಿಸಿ ರಾಜ್ಯಕ್ಕೆ ಹೆಚ್ಚು ಕೋವಿಡ್ ಲಸಿಕೆ ಪೂರೈಸುವಂತೆ ಮನವಿ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸೋಮವಾರ ಅಥವಾ ಮಂಗಳವಾರ ದೆಹಲಿಗೆ ಪ್ರವಾಸ ಹೋಗಲಿದ್ದು, ಆ ವೇಳೆ ಕೋವಿಡ್ ಲಸಿಕೆ ಪೂರೈಕೆ ಬಗ್ಗೆ ಚರ್ಚಿಸಲಾಗುವುದು. ಕೇಂದ್ರ ಆರೋಗ್ಯ ಸಚಿವರು, ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ, ರಾಜ್ಯಕ್ಕೆ ಹೆಚ್ಚು ಲಸಿಕೆ ಪೂರೈಸಲು ಮನವಿ ಮಾಡಲಾಗುವುದು. ಆದರೆ ರಾಜ್ಯದಲ್ಲಿ ಲಸಿಕೆಯೇ ಇಲ್ಲ ಎಂದು ಎಲ್ಲೂ ಹೇಳಿಲ್ಲ. ಒಂದು ದಿನವೂ ಲಸಿಕೆ ಕೊರತೆಯಿಂದ ಲಸಿಕಾಕರಣ ಸ್ಥಗಿತಗೊಂಡಿಲ್ಲ. ಪ್ರತಿ ದಿನ 2 ರಿಂದ 3 ಲಕ್ಷ ಲಸಿಕೆ ನೀಡಲಾಗುತ್ತಿದೆ. ಸುಮಾರು 5 ಲಕ್ಷ ಲಸಿಕೆ ರಾಜ್ಯದಲ್ಲಿ ದಾಸ್ತಾನು ಇದೆ. ಕೇಂದ್ರದಿಂದ ಲಸಿಕೆ ಬಂದ ಕೂಡಲೇ ಹಂಚಿಕೆ ಮಾಡಲಾಗುತ್ತದೆ ಎಂದರು.

ಮೈಸೂರಿನಲ್ಲಿ ಸಭೆ:174 ವೈದ್ಯರ ನೇಮಕ

ಮೈಸೂರಿನಲ್ಲಿ ಕೋವಿಡ್ ನಿಯಂತ್ರಣದ ಬಗ್ಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಕಡಿಮೆಯಾಗುತ್ತಿದೆ. ಆದರೆ ಮರಣ ಪ್ರಮಾಣ 3.85% ಇದೆ. ಇದಕ್ಕಾಗಿ ಡೆತ್ ಆಡಿಟ್ ಮಾಡಲಾಗುತ್ತಿದೆ. ದೊಡ್ಡ ಆಸ್ಪತ್ರೆಗಳಲ್ಲಿ ತಂಡ ರಚಿಸಿ ಡೆತ್ ಆಡಿಟ್ ಮಾಡಲು ಸೂಚಿಸಲಾಗಿದೆ. ಪಿರಿಯಾಪಟ್ಟಣ ಹಾಗೂ ಬನ್ನೂರಿನಲ್ಲಿ ಹಾಟ್ ಸ್ಪಾಟ್ ಇದ್ದು, ಅಲ್ಲಿ ಕಂಟೇನ್ ಮೆಂಟ್ ವಲಯವಾಗಿ ಪರಿಗಣಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಗುರುತಿಸಿದ 20 ಹಾಟ್ ಸ್ಪಾಟ್ ಗಳಲ್ಲಿ ಮೂರು ಮೈಸೂರು ಜಿಲ್ಲೆಗೆ ಸೇರಿದೆ. ಆಸ್ಪತ್ರೆ ಕಾವಲ್, ಹನಗೋಡು, ಸಿಎಲ್ ಡಿ ಯಲ್ಲಿ ಕಂಟೇನ್ ಮೆಂಟ್ ವಲಯ ಮಾಡಬೇಕೆಂದು ಸೂಚಿಸಲಾಗಿದೆ. 11 ತಜ್ಞರು ಹಾಗೂ 31 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳನ್ನು ಜಿಲ್ಲೆಗೆ ನೀಡಿ ಖಾಲಿ ಹುದ್ದೆ ತುಂಬಲಾಗಿದೆ. ಜೊತೆಗೆ ಒಂದು ವರ್ಷ ಸರ್ಕಾರಿ ಕಾರ್ಯನಿರ್ವಹಿಸುವ ಎಂಬಿಬಿಎಸ್ ವೈದ್ಯರ ನೇಮಕಾತಿ ಪೈಕಿ 174 ವೈದ್ಯರನ್ನು ಗುತ್ತಿಗೆ ಆಧಾರದಲ್ಲಿ ನೀಡಲಾಗಿದೆ. ಜಿಲ್ಲೆಯ ಎಲ್ಲಾ ತಾಲೂಕು, ಜಿಲ್ಲಾಸ್ಪತ್ರೆಗಳಲ್ಲಿ ಈ ವೈದ್ಯರು ಕೆಲಸ ಮಾಡಲಿದ್ದಾರೆ. ಮಕ್ಕಳ ವಿಭಾಗದ ಐಸಿಯು ಬಗ್ಗೆ ಇವರಿಗೆ ತರಬೇತಿ ನೀಡಲಾಗುತ್ತದೆ. ಸಂಭವನೀಯ ಮೂರನೇ ಅಲೆ ಬಂದಾಗ ಮಕ್ಕಳಿಗೆ ಹೆಚ್ಚು ಸೋಂಕು ಬಂದರೆ, ಅವರಿಗೆ ಸೂಕ್ತ ಚಿಕಿತ್ಸೆ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಕಪ್ಪು ಶಿಲೀಂಧ್ರ ಸೋಂಕು ಹತೋಟಿಗೆ ಬರುತ್ತಿದೆ. 61 ಕ್ಕೂ ಹೆಚ್ಚು ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಲಸಿಕೆ ಸ್ವಲ್ಪ ಕೊರತೆ ಇದ್ದು, ಹೆಚ್ಚು ಲಸಿಕೆ ನೀಡಲು ಕ್ರಮ ವಹಿಸಲಾಗುವುದು ಎಂದರು.

Dr.Sudhakarಸಚಿವರು ಹೇಳಿದ ಇತರೆ ಅಂಶಗಳು

ಮೈಸೂರಿನಲ್ಲಿ ಜಿನೋಮ್ ಸೀಕ್ವೆನ್ಸ್ ಲ್ಯಾಬ್ ಆರಂಭವಾಗಲಿದೆ. ಹೊಸ ವೈರಾಣು, ಡೆಲ್ಟಾ ಪ್ಲಸ್ ಪತ್ತೆ ಕ್ರಮ ವಹಿಸಲಾಗಿದೆ.

ಶಿಕ್ಷಣ ಸಚಿವರು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಂಡಿದ್ದಾರೆ. ಸಭೆ ಬಳಿಕ ಸಚಿವರು ನನಗೂ ತಿಳಿಸಿದ್ದಾರೆ. ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಈ ಬಗ್ಗೆ ಚರ್ಚಿಸಿದ್ದಾರೆ.

ಕಾಂಗ್ರೆಸ್ ನಲ್ಲಿ ಸಾಮಾನ್ಯ ಪದ್ಧತಿಯಲ್ಲಿ ಕೆಪಿಸಿಸಿ ಅಧ್ಯಕ್ಷರೇ ಮುಖ್ಯಮಂತ್ರಿಯಾಗುತ್ತಾರೆ. ಇಲ್ಲವಾದರೆ, ವಿರೋಧ ಪಕ್ಷದ ನಾಯಕರೇ ಮುಖ್ಯಮಂತ್ರಿಯಾಗುತ್ತಾರೆ. ಇವೆರಡೇ ಪ್ರತೀತಿಯಲ್ಲಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English