ಆರೋಗ್ಯ ಸೌಧದಲ್ಲಿ ಹುತಾತ್ಮ ವೈದ್ಯರ ಸ್ಮಾರಕ:ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಘೋಷಣೆ

12:05 AM, Friday, July 2nd, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Arogya Soudhaಬೆಂಗಳೂರು :  ಕೋವಿಡ್ ವಿರುದ್ಧದ ಹೋರಾಟದಲ್ಲಿ ಮಡಿದ ವೈದ್ಯರನ್ನು ಪ್ರತಿ ವರ್ಷ ಸ್ಮರಿಸಲು ಆರೋಗ್ಯ ಸೌಧದ ಆವರಣದಲ್ಲಿ ವೈದ್ಯರ ಸ್ಮಾರಕ ನಿರ್ಮಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಆರೋಗ್ಯ ಸೌಧದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಯುದ್ಧದಲ್ಲಿ ಮಡಿದ ಸೈನಿಕರನ್ನು ಮಾತ್ರ ಹುತಾತ್ಮರು ಎಂದು ಕರೆಯಲಾಗುತ್ತದೆ. ದೇಶದಲ್ಲಿ 700 ಕ್ಕೂ ಅಧಿಕ ವೈದ್ಯರು ಕೋವಿಡ್ ಕರ್ತವ್ಯದಲ್ಲಿ ಸಾವನ್ನಪ್ಪಿದ್ದಾರೆ. ವೈದ್ಯರು, ಆರೋಗ್ಯ ಸಿಬ್ಬಂದಿ ಕೋವಿಡ್ ವಿರುದ್ಧದ ಯುದ್ಧದಲ್ಲಿರುವುದರಿಂದ ಅವರನ್ನು ಯೋಧರು ಎಂದು ಕರೆಯಲಾಗಿದೆ. ಹಾಗೆಯೇ ಈ ಕಾರ್ಯದಲ್ಲಿ ಮೃತರಾದವರನ್ನು ಹುತಾತ್ಮರು ಎಂದು ಕರೆಯಲಾಗಿದೆ. ಈ ಹುತಾತ್ಮ ವೈದ್ಯರ ಸ್ಮರಣಾರ್ಥ ಆರೋಗ್ಯ ಸೌಧದ ಆವರಣದಲ್ಲಿ ಸ್ಮಾರಕ ನಿರ್ಮಿಸಲು ತೀರ್ಮಾನಿಸಲಾಗಿದೆ. ಇದಕ್ಕೆ ಉತ್ತಮ ವಿನ್ಯಾಸ ಮಾಡಿಸಿ ಸ್ಮಾರಕ ನಿರ್ಮಿಸಿ ಮುಖ್ಯಮಂತ್ರಿಗಳಿಂದ ಉದ್ಘಾಟಿಸಲಾಗುವುದು. ವೈದ್ಯರ ಕುಟುಂಬದವರು ಪ್ರತಿ ವರ್ಷದ ನಿಗದಿತ ದಿನ ಬಂದು ಸ್ಮಾರಕಕ್ಕೆ ನಮನ ಸಲ್ಲಿಸುವ ಕಾರ್ಯಕ್ರಮ ಮಾಡಲಾಗುವುದು ಎಂದು ತಿಳಿಸಿದರು.

ದೆಹಲಿಯಲ್ಲಿ ಸೈನಿಕ ಸ್ಮಾರಕವಿದ್ದು, ಅಲ್ಲಿ ಯೋಧರಿಗೆ ಎಲ್ಲರೂ ಗೌರವ ಸಲ್ಲಿಸುತ್ತಾರೆ. ಅದೇ ರೀತಿ ಇಲ್ಲಿ ಸ್ಮಾರಕ ನಿರ್ಮಿಸಿ ಯಾವಾಗಲೂ ಅವರನ್ನು ಸ್ಮರಿಸಬೇಕು. ಈ ಕಷ್ಟಕಾಲದಲ್ಲಿ ಶ್ರಮಿಸುತ್ತಿರುವ ಎಲ್ಲ ವೈದ್ಯರಿಗೆ ಸರ್ಕಾರದ ಪರವಾಗಿ ಧನ್ಯವಾದ ಎಂದರು.

ಅನೇಕ ವರ್ಷಗಳಿಂದ ಭತ್ಯೆಗೆ ಹೋರಾಟ ನಡೆದಿತ್ತು. ನಮ್ಮ ಸರ್ಕಾರ ಶೇ.30, 40 ರವರೆಗೂ ಭತ್ಯೆ ಹೆಚ್ಚಳ ಮಾಡಿದೆ. ಐತಿಹಾಸಿಕವಾಗಿ 1,763 ವೈದ್ಯರನ್ನು ನೇರ ನೇಮಕ ಮಾಡಲಾಗಿದೆ. ಜೊತೆಗೆ ಒಂದು ವರ್ಷ ಕಡ್ಡಾಯ ಸೇವೆಯಡಿ 2,050 ವೈದ್ಯರನ್ನು ನೇಮಿಸಲಾಗಿದೆ. 1 ಸಾವಿರಕ್ಕೂ ಅಧಿಕ ವೈದ್ಯರು ಮೆಡಿಕಲ್ ಕಾಲೇಜುಗಳಿಗೆ ನೇಮಕವಾಗಿದ್ದಾರೆ. ಎಲ್ಲ ಸೇರಿ 4 ಸಾವಿರ ವೈದ್ಯರ ನೇಮಕ ನಡೆದಿದೆ ಎಂದರು.

ಹಲ್ಲೆ:ಎಚ್ಚರಿಕೆ

ರೋಗಿಗಳ ಕಡೆಯವರು ವೈದ್ಯರು, ಆರೋಬ್ಯ ಸಿಬ್ಬಂದಿ ಮೇಲೆ ಹಲ್ಲೆ ಮಾಡುವುದನ್ನು ಸರ್ಕಾರ ಉಗ್ರವಾಗಿ ಖಂಡಿಸುತ್ತದೆ. ಯಾವುದೇ ವೈದ್ಯ ಕೊನೆ ಗಳಿಗೆವರೆಗೆ ಜೀವ ಉಳಿಸಲು ಕೆಲಸ ಮಾಡುತ್ತಾರೆ. ರೋಗಿ ಸಾಯಲಿ ಎಂದು ಯಾರೂ ಬಯಸುವುದಿಲ್ಲ. ದುಃಖಕ್ಕೊಳಗಾದ ವೇಳೆ ಕಾನೂನು ಕೈಗೆ ತೆಗೆದುಕೊಳ್ಳಬಾರದು. ಹಾಗೇನಾದರೂ ಮಾಡಿದರೆ ಕಠಿಣ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ. ವೈದ್ಯರ ಮೇಲೆ ಹಲ್ಲೆ ನಡೆಸಿದರೆ 5-7 ವರ್ಷ ಜೈಲುವಾಸದ ಶಿಕ್ಷೆ ಇದೆ ಎಂದು ಸಚಿವರು ಎಚ್ಚರಿಕೆ ನೀಡಿದರು.

ಐಎಂಎನಲ್ಲಿ ನಡೆದ ವೈದ್ಯರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಎಲ್ಲ ವೈದ್ಯರು ಐಎಂಎನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಹಳ್ಳಿಗಳಲ್ಲಿ ಕೆಲಸ ಮಾಡುವವರಿಗೆ ಹೆಚ್ಚು ಭತ್ಯೆ, ಬಡ್ತಿ ನೀಡುವ ಚಿಂತನೆ ಇದೆ ಎಂದರು.

ಸಚಿವರು ಹೇಳಿದ ಇತರೆ ಅಂಶಗಳು

ಡಾ.ಬಿ.ಸಿ.ರಾಯ್ ರವರ ದೂರದೃಷ್ಟಿಯಿಂದಾಗಿ ಅನೇಕ ಆಸ್ಪತ್ರೆ ಮೂಲಸೌಕರ್ಯ ಸೃಷ್ಟಿಯಾಗಿದೆ. ಅವರು ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಮೋಘ.

ಹೆಚ್ಚು ವೈದ್ಯರು ಬರುವ ಜೊತೆಗೆ ಗ್ರಾಮೀಣ ಭಾಗದಲ್ಲಿ ಹೆಚ್ಚು ಸೇವೆ ನೀಡಬೇಕು. ಕಾನೂನು, ಕೋರ್ಟ್ ಆದೇಶದ ಮೂಲಕವೇ ಕಡ್ಡಾಯ ಗ್ರಾಮೀಣ ಸೇವೆ ಮಾಡುವುದಲ್ಲ. ಎಲ್ಲಕ್ಕಿಂತ ದೊಡ್ಡ ಕೋರ್ಟ್ ನಮ್ಮ ಅಂತಃಕರಣ.

ಇದೇ ವರ್ಷ 250 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುವುದು.

ಲಸಿಕೆ ಕೊರತೆ ಇದ್ದಲ್ಲಿ ಎರಡೂಕಾಲು ಕೋಟಿ ಜನರಿಗೆ ಲಸಿಕೆ ನೀಡಲು ಹೇಗೆ ಸಾಧ್ಯ? ಕಾಂಗ್ರೆಸ್ ನವರು ಇದರಲ್ಲಾದರೂ ರಾಜಕೀಯ ಮಾಡುವುದು ನಿಲ್ಲಿಸಿ. ಅಂಕಿ ಅಂಶ ಇದ್ದರೆ ಮಾತ್ರ ಮಾತಾಡಿ. ಇಂದು ಕೋವಿಶೀಲ್ಡ್ 9 ಲಕ್ಷ ಲಸಿಕೆ ಕೇಂದ್ರದಿಂದ ಪೂರೈಕೆಯಾಗುತ್ತಿದೆ.

ಉನ್ನತ ಶಿಕ್ಷಣ ತರಗತಿ ಆರಂಭಿಸಬೇಕಿದೆ. ಅದಕ್ಕಾಗಿ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲು ಆದ್ಯತೆ ನೀಡಲಾಗುವುದು. ಸೋಮವಾರ ದೆಹಲಿಗೆ ತೆರಳಲಿದ್ದು, ಲಸಿಕೆ ಪೂರೈಕೆ ಬಗ್ಗೆ ಕೇಂದ್ರದ ಸಚಿವರೊಂದಿಗೆ ಚರ್ಚಿಸಲಾಗುವುದು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English