ಮಂಗಳೂರು : ಜಿಲ್ಲಾಧಿಕಾರಿಯವರ ಆದೇಶದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರ್ಬಂಧ ಮತ್ತು ಸಡಿಲಿಕೆ ಹೀಗಿರಲಿದೆ. ಜುಲೈ 5 ರಿಂದ ಜಿಲ್ಲೆಯ ದೇವಾಲಯಗಳು ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಲಿವೆ. ದೇವಾಲಯಗಳ ಆವರಣ ಸ್ವಚ್ಛಗೊಳಿಸುವ, ಸ್ಯಾನಿಟೈಸ್ ಮಾಡುವ ಕಾರ್ಯ ಭಾನುವಾರ ಭರದಿಂದ ನಡೆಯಿತು.
ಜಿಲ್ಲೆಯ ಪ್ರಮುಖ ದೇವಾಲಯಗಳಾದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕಟೀಲು ದುರ್ಗಾಪರಮೇಶ್ವರಿ ದೇವಾಲಯಗಳು, ನಗರದ ಕುದ್ರೋಳಿ ಗೋಕರ್ಣನಾಥೇಶ್ವರ, ಕದ್ರಿ ದೇವಾಲಯಗಳಲ್ಲಿ ಆವರಣವನ್ನು ಸ್ವಚ್ಛಗೊಳಿಸಿ, ಭಕ್ತರ ಪ್ರವೇಶಕ್ಕೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ದೇವರ ದರ್ಶನಕ್ಕೆ ಮಾತ್ರ ಅವಕಾಶ ಒದಗಿಸಲಾಗಿದ್ದು, ಸೇವೆಗಳಿಗೆ ಅವಕಾಶ ಇಲ್ಲ. ಮಸೀದಿಗಳಲ್ಲಿ ಕೋವಿಡ್ ನಿಯಮ ಪಾಲಿಸಿಕೊಂಡು ಮಸೀದಿಗಳಲ್ಲಿ ನಮಾಝ್ ನಡೆಸಲು ನಿರ್ಧರಿಸಲಾಗಿದೆ.
ನಮಾಜ್‌ಗೆ ಬರುವವರು ಮನೆಯಲ್ಲೇ ವಝು (ಅಂಗಶುದ್ಧಿ) ಮಾಡಿ ಬರಬೇಕು. ಮನೆಯಿಂದಲೇ ನೆಲಕ್ಕೆ ಹಾಸುವ ಬಟ್ಟೆ ತರಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್‍ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಮನವಿ ಮಾಡಿದ್ದಾರೆ.
ನಗರದಲ್ಲಿ ಮಾಲ್ ಗಳು ತೆರೆಯಲಿದ್ದು ಹೊರ ಆವರಣದಲ್ಲಿ ತೊಳೆದು ಸ್ವಚ್ಛಗೊಳಿಸಲಾಗಿದೆ. ಈಜುಕೊಳಗಳಲ್ಲಿ ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಅವಕಾಶ ನೀಡಲಾಗಿದೆ. ಕ್ರೀಡಾ ಸಂಕೀರ್ಣಗಳಲ್ಲಿ ಕ್ರೀಡಾಪಟುಗಳಿಗೆ ಅಭ್ಯಾಸ ಮಾಡಲು ಅವಕಾಶ ನೀಡಲಾಗಿದೆ ಆದರೆ ಕ್ರೀಡಾ ಸ್ಪರ್ಧೆಗಳನ್ನು ನಡೆಸುವಂತಿಲ್ಲ.
ಮದುವೆ ಹಾಗೂ ಇನ್ನಿತರೆ ಕೌಟುಂಬಿಕ ಶುಭ ಸಮಾರಂಭಗಳಿಗೆ 100 ಜನರೊಂದಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ. ಅಂತ್ಯ ಸಂಸ್ಕಾರಕ್ಕೆ 20 ಸದಸ್ಯರು ಭಾಗವಹಿಸಲು ಅವಕಾಶ ನೀಡಲಾಗಿದೆ.
ಸಾಮಾಜಿಕ, ಧಾರ್ಮಿಕ, ಮತ್ತು ರಾಜಕೀಯ ಸಭೆ ಸಮಾರಂಭಗಳಿಗೆ, ಪ್ರತಿಭಟನೆಗಳಿಗೆ ಹಾಗೂ ಇತರೆ ಸಮಾರಂಭಗಳಿಗೆ ಅವಕಾಶವಿಲ್ಲ. ಪಬ್ ಗಳು ಕಾರ್ಯನಿರ್ವಹಿಸಲು ಅವಕಾಶವಿಲ್ಲ. ಬಾರ್ ಗಳು ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ.
ಸರ್ಕಾರಿ/ಖಾಸಗಿ ಕಛೇರಿಗಳು ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆಗಳು ಶೇ. 100 ರಷ್ಟು ಸಿಬ್ಬಂದಿಗಳೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ.
ರಾಜ್ಯ ಸರ್ಕಾರದ ಪರಿಷ್ಕೃತ ಆದೇಶವು ರಾತ್ರಿ 9 ಗಂಟೆವರೆಗೆ ಆಸನಕ್ಕೆ ಸೀಮಿತವಾಗಿ ಮಾತ್ರ ಬಸ್ ಸಂಚಾರಕ್ಕೆ ಅನುಮತಿ ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಅವಧಿಯವರೆಗೆ ಖಾಸಗಿ ಬಸ್‌ಗಳು ಸಂಚರಿಸಲಿವೆ.
ಕೆಎಸ್‌ಆರ್‌ಟಿಸಿ ಸಂಚಾರದಲ್ಲಿ ಇರುವಷ್ಟೇ ಬಸ್‌ಗಳನ್ನು ಓಡಿಸಲು ನಿರ್ಧರಿಸಿದೆ. ಪ್ರಸ್ತುತ 250ರಷ್ಟು ಮಾರ್ಗಗಳಲ್ಲಿ ಬಸ್ ಸಂಚರಿಸುತ್ತಿದೆ. ಪ್ರಯಾಣಿಕರ ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿ ಬಸ್ ಬಿಡಲಾಗುತ್ತದೆ ಎಂದು ಹೇಳಲಾಗಿದೆ.
ಕೆಎಸ್‌ಆರ್‌ಟಿಸಿ ಮಂಗಳೂರು ಮತ್ತು ಪುತ್ತೂರು ವಿಭಾಗಗಳಿಂದ ಈಗಾಗಲೇ ಬೆಂಗಳೂರಿಗೆ ರಾತ್ರಿ ಬಸ್ ಸಂಚಾರ ಆರಂಭಗೊಂಡಿದೆ. ಭಾನುವಾರ ಕೂಡ ಬೆಂಗಳೂರಿಗೆ ಬಸ್‌ಗಳು ತೆರಳಿವೆ. ಆದರೆ, ಮೈಸೂರು, ಮಂಡ್ಯ ಮಾರ್ಗದಲ್ಲಿ ಬಸ್ ಸಂಚಾರಕ್ಕೆ ಅನುಮತಿ ದೊರೆತಿಲ್ಲ. ಕೊಡಗು ಜಿಲ್ಲಾಡಳಿತ ಅನುಮತಿ ನಿರಾಕರಿಸಿರುವ ಕಾರಣ ಮಡಿಕೇರಿ ಮಾರ್ಗವಾಗಿ ಹೋಗುವ ಬಸ್‌ಗಳನ್ನು ಓಡಿಸಲು ಸಾಧ್ಯವಾಗುತ್ತಿಲ್ಲ. ಪ್ರಯಾಣಿಕರ ಹಿತದೃಷ್ಟಿಯಿಂದ ರಾತ್ರಿ ನೇರ ಬಸ್ ಸಂಚಾರಕ್ಕೆ ಅವಕಾಶ ನೀಡುವಂತೆ ಕೆಎಸ್‌ಆರ್‌ಟಿಸಿ ಘಟಕಗಳು ವಿನಂತಿಸಿವೆ.
ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ವೈಯಕ್ತಿಕ ಅಂತರ ಕಾಪಾಡಿಕೊಳ್ಳಬೇಕು. ಕೋವಿಡ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿ, ಆರೋಗ್ಯ ರಕ್ಷಣೆಗೆ ಒತ್ತು ನೀಡಬೇಕು ಎಂದು ವಿನಂತಿಸಿದ್ದಾರೆ.
ಮಾಸ್ಕ್ ಧರಿಸದಿದ್ದರೆ ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ರೂ 250 ದಂಡ, ಹೊರವಲಯದಲ್ಲಿ ರೂ 100 ದಂಡ ವಿಧಿಸಲಾಗುವುದು.
ಅಗತ್ಯ ಚಟುವಟಿಕೆಗಳನ್ನು ಹೊರತು ಪಡಿಸಿ ರಾತ್ರಿ 9 ರಿಂದ ಬೆಳಗ್ಗೆ 5 ರ ವರೆಗೆ ಖಾಸಗಿ ವಾಹನಗಳಿಗೆ ಸಂಚಾರಕ್ಕೆ ಅನುಮತಿ ಇಲ್ಲ.
Click this button or press Ctrl+G to toggle between Kannada and English