ಮಂಗಳೂರು: ಕರಾವಳಿಯಲ್ಲಿ ಮೀನುಗಾರರ ಬೆಂಬಲವನ್ನೂ ದೊಡ್ಡಮಟ್ಟದಲ್ಲಿ ಪಡೆದು ಬಿಜೆಪಿ ಸರ್ಕಾರ ರಚಿಸಿದೆ. ಆದರೆ ಅವರಿಗೆ ಬೇಕಾದ ಸವಲತ್ತುಗಳನ್ನು ನೀಡುವಲ್ಲಿ ವಿಫಲವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಸಮುದ್ರದ ಜತೆಗಿನ ಬದುಕಿನಲ್ಲಿ ತಮ್ಮ ಜೀವವನ್ನೇ ಒತ್ತೆ ಇಟ್ಟು ಬದುಕುತ್ತಿರುವ ಸಮುದಾಯಕ್ಕೆ ಯಾವ ರೀತಿ ನೆರವಾಗಬಹುದು ಎಂದು ತಿಳಿಯಲು ಸ್ವತಃ ಬಂದಿದ್ದೇನೆ. ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು, ಆಗ ಮೊಗವೀರರ ವಿವಿಧ ಸಾಲಗಳಿಗೆ ಸರ್ಕಾರವೇ ಗ್ಯಾರಂಟಿ ನೀಡಲಿದೆ ಎಂದು ಅವರು ಹೇಳಿದರು.
ಸುಲ್ತಾನ್ ಬತ್ತೇರಿಯ ಬೋಳೂರು ಮೊಗವೀರ ಮಹಾಸಭಾ ಸಭಾಭವನದಲ್ಲಿ ಸೋಮವಾರ ಆಯೋಜನೆಗೊಂಡ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ಈಗ ಸರ್ಕಾರ ನಡೆಸುತ್ತಿರುವವರಿಗೆ ಮೀನುಗಾರರ ನೋವು ಗೊತ್ತಿಲ್ಲ, ಅದಕ್ಕೆ 2-3 ಸಾವಿರ ರೂ. ಪರಿಹಾರ ನೀಡುತ್ತಿದೆ. ಇಲ್ಲಿನ ಶಾಸಕರೂ ಗೆದ್ದ ಮತ್ತಿನಲ್ಲಿ ಎಲ್ಲರನ್ನೂ ಮರೆತಿದ್ದಾರೆ ಎಂದು ಆರೋಪಿಸಿದರು.
ಸಮುದ್ರ ತೀರದಿಂದ 150 ಮೀ. ಬಿಟ್ಟು ಮನೆ ಕಟ್ಟಬೇಕು ಎನ್ನುವುದು ಸರಿಯಲ್ಲ. ಇದನ್ನು 50 ಮೀ.ಗೆ ಇಳಿಸಬೇಕು. ಕುಂದಾಪುರದಲ್ಲೂ ಮೀನುಗಾರರ ಜತೆಗೆ ಸಭೆ ನಡೆಸಿ, ಸಂಪೂರ್ಣ ವರದಿ ಸಿದ್ಧಪಡಿಸಿ, ಸರ್ಕಾರದ ಗಮನ ಸೆಳೆಯಲಾಗುವುದು. ಮೀನುಗಾರರ ಬದುಕಿನ ಜತೆಗೆ ನಮ್ಮ ಬದುಕು ಇರಲಿದೆ ಎಂದರು. ನಮ್ಮದು ರಾಜಕೀಯ ಕಾರ್ಯಕ್ರಮ ಅಲ್ಲ, ಮೀನುಗಾರರ ಸಮಸ್ಯೆ ಆಲಿಸುವುದಕ್ಕೆ ಬಂದಿದ್ದೇನೆ ಎಂದೂ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಸಾದ್ ರಾಜ್ ಕಾಂಚನ್, ಮೀನುಗಾರ ಮುಖಂಡರಾದ ರಾಜಶೇಖರ ಕರ್ಕೇರ, ಯಶವಂತ ಮೆಂಡನ್, ದೇವದಾಸ ಬೊಳೂರು, ಸರಳಾ ಕಾಂಚನ್ ಉಪಸ್ಥಿತರಿದ್ದರು. ಶಾಸಕ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಮೊಯ್ದಿನ್ ಬಾವಾ, ಶಕುಂತಳಾ ಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ, ಮುಖಂಡ ಮಿಥುನ್ ರೈ ಮೊದಲಾದವರು ಭಾಗವಹಿಸಿದ್ದರು.
ಮೀನುಗಾರ ಪ್ರಮುಖರಾದ ಮೋಹನ್ ಬೆಂಗ್ರೆ, ಎಚ್.ಗಂಗಾಧರ್, ಸುಭಾಷ್ ಕುಂದರ್, ಚೇತನ್ ಬೆಂಗ್ರೆ, ಶರತ್ ಸಾಲ್ಯಾನ್, ಮಹಿಳೆಯರಾದ ಸ್ವರ್ಣಾ, ಸರಿತಾ ಪುತ್ರನ್, ಪ್ರವಿತಾ ತಮ್ಮ ಸಮಸ್ಯೆ ವಿವರಿಸಿದರು.
Click this button or press Ctrl+G to toggle between Kannada and English