1.5 ಕೋಟಿ ಕೋವಿಡ್ ಲಸಿಕೆಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮನವಿ

12:54 AM, Wednesday, July 7th, 2021
Share
1 Star2 Stars3 Stars4 Stars5 Stars
(No Ratings Yet)
Loading...

 

Sudhakar ನವದೆಹಲಿ : ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರನ್ನು ಭೇಟಿ ಮಾಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ರಾಜ್ಯಕ್ಕೆ ತಿಂಗಳಿಗೆ 1.5 ಕೋಟಿ ಡೋಸ್ ಕೋವಿಡ್ ಲಸಿಕೆ ಪೂರೈಸುವಂತೆ ಮನವಿ ಮಾಡಿದ್ದಾರೆ.

ಇಂದು ಕೇಂದ್ರದ ಆರೋಗ್ಯ ಸಚಿವರನ್ನು ಭೇಟಿ ಮಾಡಿದ ಸಚಿವ ಡಾ.ಕೆ.ಸುಧಾಕರ್, ರಾಜ್ಯದ ಆರೋಗ್ಯ ಕ್ಷೇತ್ರದ ಅಭಿವೃದ್ಧಿ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು.

ರಾಜ್ಯದಲ್ಲಿ ಕೋವಿಡ್ ಲಸಿಕಾಕರಣ ವೇಗವಾಗಿ ನಡೆಯುತ್ತಿದ್ದು, ಇದಕ್ಕಾಗಿ ಕೇಂದ್ರದಿಂದ ಪ್ರತಿ ತಿಂಗಳಿಗೆ ಪೂರೈಸುವ ಲಸಿಕೆ ಪ್ರಮಾಣವನ್ನು 1.5 ಕೋಟಿ ಡೋಸ್ ಗೆ ಹೆಚ್ಚಿಸಬೇಕು ಎಂದು ಸಚಿವರು ಕೋರಿದರು. ಇದಕ್ಕೂ ಮುನ್ನ ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪಾಲ್ ಅವರನ್ನು ಭೇಟಿ ಮಾಡಿದ ಸಚಿವರು, ಇದೇ ಮನವಿಯನ್ನು ಸಲ್ಲಿಸಿದರು.

ಪ್ರಾದೇಶಿಕ ಕೇಂದ್ರ ನಿರ್ಮಾಣಕ್ಕೆ ಕೋರಿಕೆ

ನಿಮ್ಹಾನ್ಸ್ ಮತ್ತು ಕಿದ್ವಾಯಿ ಆಸ್ಪತ್ರೆಗಳು ರಾಜ್ಯದ ಪ್ರತಿಷ್ಠಿತ ಸಂಸ್ಥೆಗಳಾಗಿವೆ. ಈ ಸಂಸ್ಥೆಗಳಿಗೆ ಹೊರರಾಜ್ಯಗಳಿಂದಲೂ ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗಿಗಳ ಸಂಖ್ಯೆ ಹೆಚ್ಚಿ ಸಂಸ್ಥೆಗಳ ಮೇಲೆ ಒತ್ತಡ ಹೆಚ್ಚಿರುವುದರಿಂದ ಈ ಎರಡೂ ಸಂಸ್ಥೆಗಳ ನಾಲ್ಕು ಪ್ರಾದೇಶಿಕ ಕೇಂದ್ರ ಆಸ್ಪತ್ರೆಗಳನ್ನು ಆರಂಭಿಸಬೇಕು ಎಂದು ಸಚಿವರು ಕೋರಿದರು.

ರಾಜ್ಯದಲ್ಲಿ ಕೇಂದ್ರ ಸರ್ಕಾರದ ಮಂಜೂರಾತಿಯಲ್ಲಿ ನಿರ್ಮಿಸುತ್ತಿರುವ ಹೊಸ ಮೆಡಿಕಲ್ ಕಾಲೇಜುಗಳಿಗೆ ಅನುದಾನ ಬಿಡುಗಡೆ ಮಾಡಬೇಕು. ರಾಜ್ಯದಲ್ಲಿ 250 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುತ್ತಿದ್ದು, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಇನ್ನೂ 250 ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಅನುದಾನ ನೀಡಬೇಕು ಎಂದು ಕೋರಿದರು.

ಡೀಮ್ಡ್ ಮೆಡಿಕಲ್ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ಸೀಟುಗಳನ್ನು ನೀಡುತ್ತಿಲ್ಲವಾದ್ದರಿಂದ ಈ ಬಗ್ಗೆ ಕ್ರಮ ವಹಿಸಬೇಕಿದೆ. ಮೆಡಿಕಲ್ ಕಾಲೇಜುಗಳು ಇಲ್ಲದ ಜಿಲ್ಲೆಗಳಲ್ಲಿ ಪಿಪಿಪಿ ಮಾದರಿಯಲ್ಲಿ ಮೆಡಿಕಲ್ ಕಾಲೇಜು ಆರಂಭಿಸಬೇಕಿದ್ದು, ಈ ಬಗ್ಗೆಯೂ ಯೋಜನೆ ರೂಪಿಸಬೇಕಿದೆ. ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ವಿಜ್ಞಾನಗಳ ಸಂಸ್ಥೆ ಹಾಗೂ ನಸಿಂಗ್ ಸಂಸ್ಥೆ ಆರಂಭಿಸಬೇಕು. ಕೊರೊನಾ ಹೊಸ ವೈರಾಣು ಪತ್ತೆ ಮಾಡಲು ಜೀನೋಮ್ ಸೀಕ್ವೆನ್ಸ್ ಫಲಿತಾಂಶವನ್ನು ಶೀಘ್ರ ನೀಡಲು ಕ್ರಮ ಕೈಗೊಳ್ಳಬೇಕು. ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಖರೀದಿ ಪ್ರಮಾಣ ಹೆಚ್ಚಿಸಲು ಕ್ರಮ ವಹಿಸಬೇಕು ಎಂದು ಇದೇ ವೇಳೆ ಮನವಿ ಮಾಡಲಾಯಿತು.

ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪಾಲ್ ಅವರೊಂದಿಗಿನ ಭೇಟಿ ವೇಳೆ, ಪಾಲ್ ಅವರು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ರಾಜ್ಯ ಸರ್ಕಾರ ಯೋಜನೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಈ ಬಗ್ಗೆ ವೀಡಿಯೋ ಸಂವಾದ ನಡೆಸಿದರೆ, ದೇಶಾದ್ಯಂತ ಬೇರೆ ರಾಜ್ಯಗಳಿಗೂ ನೆರವಾಗಲಿದೆ ಎಂದು ಸಲಹೆ ನೀಡಿದರು. ಜೊತೆಗೆ ರಾಜ್ಯದ ಕೋವಿಡ್ ನಿರ್ವಹಣೆ ಬಗ್ಗೆ ಶ್ಲಾಘಿಸಿದರು.

ಚಿಕ್ಕಬಳ್ಳಾಪುರವನ್ನು ಕೈಗಾರಿಕಾ ಹಬ್ ಆಗಿಸಿ ಅಭಿವೃದ್ಧಿಪಡಿಸಿ

ರಾಜಧಾನಿ ಬೆಂಗಳೂರಿಗೆ ಸಮೀಪದಲ್ಲೇ ಇರುವ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಕೈಗಾರಿಕಾ ಹಬ್ ಆಗಿ ಬೆಳೆಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರಿಗೆ ಮನವಿ ಮಾಡಿದ್ದಾರೆ.

ನವದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಸಚಿವ ಡಾ.ಕೆ.ಸುಧಾಕರ್, ಈ ಕುರಿತು ಮನವಿ ಪತ್ರ ಸಲ್ಲಿಸಿದ್ದಾರೆ. ಬೆಂಗಳೂರು ನಗರ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲಿರುವ ಈ ಜಿಲ್ಲೆ, ಹೆಚ್ಚು ಕೈಗಾರಿಕಾಭಿವೃದ್ಧಿಯನ್ನು ಕಂಡಿಲ್ಲ. ಈ ಜಿಲ್ಲೆ ಎರಡು ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಬಂದರು ನಗರಗಳಾದ ಚೆನ್ನೈ ಹಾಗೂ ಮಂಗಳೂರಿಗೆ ಸಂಪರ್ಕ ಕಲ್ಪಿಸುತ್ತದೆ. ಜಿಲ್ಲೆಯ ಗಡಿಭಾಗಕ್ಕೆ 10 ಕಿ.ಮೀ. ದೂರದಲ್ಲೇ ವಿಮಾನ ನಿಲ್ದಾಣವಿದೆ. ಹಾಗೆಯೇ ರೈಲು ಸಂಪರ್ಕವನ್ನೂ ಹೊಂದಿದೆ. ಉದ್ಯಮಗಳಲ್ಲಿ ದುಡಿಯುವ ಪ್ರತಿಭಾವಂತರು ಚಿಕ್ಕಬಳ್ಳಾಪುರದಲ್ಲಿದ್ದು, ಬೆಂಗಳೂರಿನಲ್ಲಿರುವ ಉದ್ಯಮಗಳಲ್ಲಿ ಕೆಲಸ ಮಾಡಲು ತೆರಳುತ್ತಿದ್ದಾರೆ. ಭೂಮಿ, ಎತ್ತಿನಹೊಳೆ ಮೂಲಕ ಸಿಗುವ ನೀರು ಮೊದಲಾದ ನೈಸರ್ಗಿಕ ಸಂಪನ್ಮೂಲಗಳನ್ನು ಜಿಲ್ಲೆ ಹೊಂದಿದೆ ಎಂದು ಸಚಿವರು ಪತ್ರದಲ್ಲಿ ವಿವರಿಸಿದ್ದಾರೆ.

ಜಿಲ್ಲೆಯಲ್ಲಿ ಕೈಗಾರಿಕಾ ಹಬ್ ನಿರ್ಮಾಣದಿಂದ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆಯಾಗಲಿದೆ. ಜೊತೆಗೆ ಮಾಲಿನ್ಯ, ಸಂಚಾರ ದಟ್ಟಣೆಯೂ ಕಡಿಮೆಯಾಗಲಿದೆ. ಆದ್ದರಿಂದ ಈ ಭಾಗದಲ್ಲಿ ಕೈಗಾರಿಕಾ ಹಬ್ ಆರಂಭಿಸಬೇಕೆಂದು ಸಚಿವರು ಕೋರಿದ್ದಾರೆ.

ಎತ್ತಿನಹೊಳೆಗೆ ಯೋಜನೆಗೆ ರಾಷ್ಟ್ರೀಯ ಸ್ಥಾನಮಾನ

ಇದೇ ವೇಳೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಸಚಿವ ಡಾ.ಕೆ.ಸುಧಾಕರ್ ಭೇಟಿ ಮಾಡಿ ಮನವಿ ಸಲ್ಲಿಸಿದರು. ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಬಯಲು ಸೀಮೆಯ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರೊದಗಿಸುವ ಎತ್ತಿನಹೊಳೆ ಯೋಜನೆಗೆ ರಾಷ್ಟ್ರೀಯ ಯೋಜನೆಯ ಸ್ಥಾನಮಾನ ನೀಡುವಂತೆ ಕೋರಿ ಸಚಿವರು ಮನವಿ ಪತ್ರ ಸಲ್ಲಿಸಿದರು.

ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳ ಹೂಳೆತ್ತಲು ವಿಶೇಷ ಯೋಜನೆ ರೂಪಿಸಬೇಕು. ಕೃಷ್ಣಾ ನದಿ ನೀರನ್ನು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಿಂದ ಕರ್ನಾಟಕದ ಗಡಿ ಜಿಲ್ಲೆಗಳಿಗೆ ಹಂಚಿಕೆ ವಿಸ್ತರಿಸಬೇಕು ಎಂದು ಸಚಿವರು ಮನವಿ ಮಾಡಿದರು.

ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ವಿಜ್ಞಾನಗಳ ಸಂಸ್ಥೆ ಹಾಗೂ ನರ್ಸಿಂಗ್ ಸಂಸ್ಥೆ ಆರಂಭಿಸಬೇಕು ಎಂದು ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಜೊತೆಗಿನ ಚರ್ಚೆ ವೇಳೆ ಪ್ರಸ್ತಾವ ಸಲ್ಲಿಸಲಾಯಿತು.

2024 ರ ವೇಳೆಗೆ ಪ್ರತಿ ಹಳ್ಳಿಗೆ ನೀರು

ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಜೊತೆಗಿನ ಚರ್ಚೆ ವೇಳೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, “ಎತ್ತಿನಹೊಳೆ ಯೋಜನೆಯಿಂದ ಒಂದು ಕೋಟಿಗೂ ಹೆಚ್ಚು ಜನರಿಗೆ ನೆರವಾಗಲಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಹೆಚ್ಚು ಅನುಕೂಲವಾಗಲಿದೆ. ಆದ್ದರಿಂದ ಈ ಯೋಜನೆಗೆ ರಾಷ್ಟ್ರೀಯ ಸ್ಥಾನಮಾನ ನೀಡುವುದು ಸೂಕ್ತವಾಗಿದೆ. ಜೊತೆಗೆ ಈ ಮೂರು ಜಿಲ್ಲೆಗಳಲ್ಲಿ ಕೆರೆಗಳ ಹೂಳೆತ್ತಲು ಮಹಾತ್ಮಗಾಂಧಿ ನರೇಗ, ಜಲಶಕ್ತಿ ಹಾಗೂ 15 ನೇ ಹಣಕಾಸು ಆಯೋಗದ ಅನುದಾನವನ್ನು ಒಟ್ಟುಮಾಡಿ ವಿಶೇಷ ಅನುದಾನ ನೀಡಬೇಕು. ಹಾಗೆಯೇ ಆಂಧ್ರಪ್ರದೇಶದಿಂದ ಕೃಷ್ಣಾ ನದಿ ನೀರು ಹಂಚಿಕೆ ಸಂಬಂಧ ಮಧ್ಯಪ್ರವೇಶಿಸಿ ನೆರವಾಗಬೇಕು. ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಆಶಯದಂತೆಯೇ 2024 ರ ವೇಳೆಗೆ ಪ್ರತಿ ಹಳ್ಳಿಗೆ ನೀರು ಒದಗಿಸುವುದು ನನ್ನ ದೂರದೃಷ್ಟಿಯೂ ಆಗಿದೆ” ಎಂದು ವಿವರಿಸಿದರು.

ಬೈಪಾಸ್ ನಿರ್ಮಾಣಕ್ಕೆ ಮನವಿ

ರಾಷ್ಟ್ರೀಯ ಹೆದ್ದಾರಿ-234 ನಲ್ಲಿ ಚಿಕ್ಕಬಳ್ಳಾಪುರ-ಚಿಂತಾಮಣಿ ಬೈಪಾಸ್ ನಿರ್ಮಾಣ ಕುರಿತು ಸಚಿವ ಡಾ.ಕೆ.ಸುಧಾಕರ್ ಅವರು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಿದರು.

ಈ ಯೋಜನೆ ಕುರಿತ ಡಿಪಿಆರ್ ಅನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಲ್ಲಿಸಿದ್ದು, ಇದು ಚಿಕ್ಕಬಳ್ಳಾಪುರದ ಸಂಚಾರ ದಟ್ಟಣೆ ನಿವಾರಿಸಲಿದೆ. ಕೃಷಿ ಹಾಗೂ ಕೈಗಾರಿಕಾ ಸಂಬಂಧಿತ ಉತ್ಪನ್ನಗಳನ್ನು ಸಾಗಿಸಲು ಇದು ನೆರವಾಗಲಿದೆ. ಮುಖ್ಯವಾಗಿ ತರಕಾರಿ, ಹೂವು, ಹಣ್ಣು ಮೊದಲಾದ ಕೃಷಿ ಆಧಾರಿತ ಕೈಗಾರಿಕೆಗೆ ಇದು ಹೆಚ್ಚು ಅನುಕೂಲವಾಗಲಿದೆ. ಈ ಬೈಪಾಸ್, ಎನ್‍ಎಚ್-234 ನಲ್ಲಿ 395 ಕಿ.ಮೀ. ನಿಂದ ಆರಂಭವಾಗಿ 407 ಕಿ.ಮೀ.ಗೆ ಮುಕ್ತಾಯಗೊಳ್ಳಲಿದೆ. ಒಟ್ಟು 12.756 ಕಿ.ಮೀ. ಉದ್ದದ ರಸ್ತೆಯ ಈ ಯೋಜನೆ ಇದಾಗಿದೆ. ಚಿಂತಾಮಣಿ ಬೈಪಾಸ್ 428 ಕಿ.ಮೀ. ನಿಂದ ಆರಂಭವಾಗಿ 442 ಕಿ.ಮೀ.ಗೆ ಮುಕ್ತಾಯಗೊಳ್ಳಲಿದೆ. ಇದು ಒಟ್ಟು 14.370 ಕಿ.ಮೀ. ಉದ್ದದ ರಸ್ತೆಯ ಯೋಜನೆಯಾಗಿದೆ ಎಂದು ಸಚಿವರು ಮನವಿ ಪತ್ರದಲ್ಲಿ ವಿವರಿಸಿದ್ದಾರೆ.

ಆದ್ದರಿಂದ ಡಿಪಿಆರ್ ಅನ್ನು ಶೀಘ್ರ ಪರಿಗಣಿಸಿ ಅಗತ್ಯ ಕ್ರಮಗಳನ್ನು ವಹಿಸಬೇಕೆಂದು ಸಚಿವರು ಕೋರಿದ್ದಾರೆ.

ಶೀಘ್ರ ಕಾಮಗಾರಿಗೆ ಮನವಿ

ಎನ್‍ಎಚ್-234 ರಲ್ಲಿ ಗೌರಿಬಿದನೂರಿನಿಂದ ಚಿಕ್ಕಬಳ್ಳಾಪುರವರೆಗೆ ಸೇತುವೆ, ರಸ್ತೆ ಮೊದಲಾದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಯನ್ನು 2015 ರ ಜುಲೈ ನಿಂದ ಆರಂಭಿಸಿದ್ದು, 2017 ರ ಮಧ್ಯಭಾಗಕ್ಕೆ ಮುಗಿಯಬೇಕಿತ್ತು. ಆದರೆ ದುರದೃಷ್ಟದಂತೆ 2018 ರಿಂದ ಕಾಮಗಾರಿ ಸ್ಥಗಿತಗೊಂಡಿದೆ. ಇದರಿಂದಾಗಿ ಜನಸಾಮಾನ್ಯರು, ಮುಖ್ಯವಾಗಿ ರೈತರು ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಕಷ್ಟಪಡುತ್ತಿದ್ದಾರೆ. 2021 ರ ಜೂನ್ ಗೆ ಕಾಮಗಾರಿ ಪೂರ್ಣಗೊಳ್ಳುವುದಾಗಿ ತಿಳಿಸಿದ್ದರೂ, ಸ್ಥಳದಲ್ಲಿ ಯಾವುದೇ ಕಾಮಗಾರಿ ಆರಂಭವಾಗಿಲ್ಲ. ಕೂಡಲೇ ಕಾಮಗಾರಿ ಆರಂಭಿಸಲು ಸೂಕ್ತ ಪರಿಶೀಲನೆ, ಸಭೆಗಳನ್ನು ನಡೆಸಬೇಕೆಂದು ಕೆಲ ತಜ್ಞರು ಹೇಳಿದ್ದಾರೆ. ಆದ್ದರಿಂದ ಇದಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ವಹಿಸಬೇಕೆಂದು ಸಚಿವ ಡಾ.ಕೆ.ಸುಧಾಕರ್ ಕೋರಿದ್ದಾರೆ.

ನಂದಿ ಬೆಟ್ಟ ರಸ್ತೆ ವಿಸ್ತರಣೆ

ನಂದಿ ಬೆಟ್ಟ ಜನಪ್ರಿಯ ಪ್ರವಾಸಿ ತಾಣವಾಗಿದ್ದು, ಪ್ರಮುಖ ಆತಿಥ್ಯ ಕ್ಷೇತ್ರವಾಗಿ ಬೆಳೆಯುತ್ತಿದೆ. ಆದರೆ ನಂದಿ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಿರಿದಾಗಿದೆ. ಆದ್ದರಿಂದ ಎನ್‍ಎಚ್-7 ಹಾಗೂ ನಂದಿ ಬೆಟ್ಟ ಸಂಪರ್ಕಿಸುವ ರಸ್ತೆಯನ್ನು ನಾಲ್ಕು ಪಥಗಳ ರಸ್ತೆಯಾಗಿ ವಿಸ್ತರಣೆ ಮಾಡುವಂತೆ ಸಚಿವ ಡಾ.ಕೆ.ಸುಧಾಕರ್ ಮನವಿ ಸಲ್ಲಿಸಿದ್ದಾರೆ.

ಮೆಟ್ರೊ, ಉಪನಗರ ರೈಲು

ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿದ ವೇಳೆ, ಮೆಟ್ರೊ ಹಾಗೂ ಉಪನಗರ ರೈಲು ಯೋಜನೆಗಳ ಮಾರ್ಗಗಳನ್ನು ಚಿಕ್ಕಬಳ್ಳಾಪುರವರೆಗೆ ವಿಸ್ತರಣೆ ಮಾಡಬೇಕೆಂದು ಸಚಿವ ಡಾ.ಕೆ.ಸುಧಾಕರ್ ಕೋರಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English