ದಾಖಲೆ ಅವಧಿಯಲ್ಲಿ ನಿರ್ಮಾಣವಾದ ಮೇಕ್ ಶಿಫ್ಟ್ ಆಸ್ಪತ್ರೆಗೆ ಸಿಎಂ ಚಾಲನೆ

11:51 PM, Wednesday, July 7th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

makeshift ಬೆಂಗಳೂರು  : ದೊಡ್ಡಬಳ್ಳಾಪುರದಲ್ಲಿ ದಾಖಲೆ ಅವಧಿಯಲ್ಲಿ ನಿರ್ಮಾಣವಾದ ಮೇಕ್ ಶಿಫ್ಟ್ ಆಸ್ಪತ್ರೆಯನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ,”ದೊಡ್ಡಬಳ್ಳಾಪುರಕ್ಕೆ ಇವತ್ತು ಸುದಿನವಾಗಿದ್ದು, ಸುಸಜ್ಜಿತವಾದ ಮೇಕ್ ಶಿಫ್ಟ್ ಆಸ್ಪತ್ರೆ ತಲೆ ಎತ್ತಿ ನಿಂತಿದೆ. ನೆಲಮಂಗಲ, ದೇವನಹಳ್ಳಿ ಮತ್ತು ಹೊಸಕೋಟೆ ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮೂರು ವೈದ್ಯಕೀಯ ಕಾಲೇಜುಗಳಿವೆ. ಆದರೆ ದೊಡ್ಡಬಳ್ಳಾಪುರದಲ್ಲಿ ಇರಲಿಲ್ಲ. ಹೀಗಾಗಿ ನಾವು ಮೇಕ್ ಶಿಫ್ಟ್ ಆಸ್ಪತ್ರೆಯನ್ನು ಇಲ್ಲಿ ನಿರ್ಮಾಣ ಮಾಡುವುದಕ್ಕೆ ನಿರ್ಧರಿಸಿದೆವು. ದೇಶದಾದ್ಯಂತ ಒಟ್ಟು 50 ಮೇಕ್ ಶಿಫ್ಟ್ ಆಸ್ಪತ್ರೆಗಳ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿದ್ದು, ಅದರಲ್ಲಿ ಕರ್ನಾಟಕದಲ್ಲಿ ಮೂರು ಆಸ್ಪತ್ರೆಗಳನ್ನ ನಿರ್ಮಾಣ ಮಾಡಲಾಗುತ್ತದೆ. ಅದರಲ್ಲಿ ದೊಡ್ಡಬಳ್ಳಾಪುರ ಕೂಡಾ ಒಂದಾಗಿದ್ದು, ದೇಶದಲ್ಲೇ ಮೊದಲನೆಯದಾಗಿ ಉದ್ಘಾಟನೆಯಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಇದರ ಸಂಪೂರ್ಣ ಶ್ರೇಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಕೆ ಶ್ರೀನಿವಾಸ್ ಮತ್ತವರ ತಂಡಕ್ಕೆ ಸಲ್ಲಬೇಕು”, ಎಂದರು.

ಇಷ್ಟು ಕಡಿಮೆ ಅವಧಿಯಲ್ಲಿ ಆಸ್ಪತ್ರೆ ನಿರ್ಮಾಣ ಮಾಡಿದ್ದು, ದೇಶದಲ್ಲೇ ಇದು ಕ್ರಾಂತಿಕಾರಿ ಹೆಜ್ಜೆ ಎಂದೇ ಬಣ್ಣಿಸಬಹುದು. ಆಸ್ಪತ್ರೆಯಲ್ಲಿ ಎಲ್ಲಾ ವೈದ್ಯಕೀಯ ಸೌಲಭ್ಯಗಳು ಲಭ್ಯವಿರುತ್ತವೆ. ನಾವು ತ್ವರಿತವಾಗಿ ಮೂರನೇ ಅಲೆಯನ್ನು ಎದುರಿಸಲು ಅಗತ್ಯವಿರುವ ಎಲ್ಲ ತಯಾರಿಗಳನ್ನ ಈ ಆಸ್ಪತ್ರೆಯಲ್ಲಿ ಸಜ್ಜುಗೊಳಿಸುತ್ತಿದ್ದೇವೆ. ಅದರಲ್ಲೂ ವಿಶೇಷವಾಗಿ ತಜ್ಞರು ಮಕ್ಕಳಿಗೆ ಮೂರನೇ ಅಲೆ ಅಪಾಯಕಾರಿಯಾಗಿರಬಹುದು ಎಂದು ಅಭಿಪ್ರಾಯ ಪಟ್ಟಿದ್ದರಿಂದ ಹೆಚ್ಚಿನ ಕಾಳಜಿ ತೆಗೆದುಕೊಳ್ಳಲಾಗುತ್ತಿದೆ. ಈ ಆಸ್ಪತ್ರೆಯು ದೊಡ್ಡಬಳ್ಳಾಪುರ ಮತ್ತು ಸುತ್ತಲಿನ ಪ್ರದೇಶಗಳಿಗೆ ಸಂಜೀವಿನಿಯಾಗಲಿದೆ. ಇತ್ತೀಚಿಗೆ ಚಾಲನೆ ನೀಡಲಾದ ವೈದ್ಯರ ನಡೆ ಹಳ್ಳಿಯ ಕಡೆ ಎಂಬ ವಿನೂತನ ಕಾರ್ಯಕ್ರಮವು ಯಶಸ್ವಿಯಾಗಿದ್ದು, ಈ ಮೂಲಕ ಹಲವು ಕೋವಿಡ್ ಸೋಂಕಿತರನ್ನ ಗುರುತಿಸುವಲ್ಲಿ ನೆರವಾಗಿದೆ. ಈ ಮೂಲಕ ಅವರಿಗೆಲ್ಲಾ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿ ಮುಂದಾಗಲಿರುವ ಅಪಾಯ ತಪ್ಪಿಸಿದಂತಾಗಿದೆ”, ಎಂದು ಅಶೋಕ ಹೇಳಿದರು.

ದೇಶದಲ್ಲೇ ಕೋವಿಡ್ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳಲ್ಲಿ ಕರ್ನಾಟಕ ಮಾದರಿ ರಾಜ್ಯವಾಗಿದೆ. ನಾವು ಈಗಾಗಲೇ ಮೂರನೇ ಅಲೆಯನ್ನ ಹೇಗೆ ನಿಯಂತ್ರಿಸಬೇಕು ಎನ್ನುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸುತ್ತಿದ್ದೇವೆ. ಆ ನಿಟ್ಟಿನಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಅಂಕಿ ಅಂಶಗಳನ್ನ ಸಮೀಕ್ಷೆ ಮೂಲಕ ಕಲೆಹಾಕಲಾಗುತ್ತಿದೆ. ವೈದ್ಯರನ್ನ ಹಳ್ಳಿಗೆ ಕಳಿಸುವ ಮೂಲಕ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳನ್ನ ಗುರುತಿಸಲಾಗಿದ್ದು, ಅವರ ಸದೃಢ ಆರೋಗ್ಯಕ್ಕಾಗಿ ಪೋಷಕಾಂಶಯುಕ್ತ ಆಹಾರಗಳಾದ ಬಾದಾಮಿ ಪೌಡರ್, ಮಿಲ್ಕ್ ಪೌಡರ್, ಬಿಸ್ಕಟ್ಸ್, ಮಲ್ಟಿ ವಿಟಾಮಿನ್ ಸಿರಪ್ ಜೊತೆಗೆ ಬಾಹ್ಯ ರಕ್ಷಣೆಗಾಗಿ ಮಾಸ್ಕ್ ಮತ್ತು ಡೆಟಾಲ್ ಸೋಪ್ ನೀಡಲಾಗುತ್ತಿದೆ. ನಮ್ಮಲ್ಲಿ ಮಕ್ಕಳ ವೈದ್ಯರ ಕೊರತೆ ತೀವ್ರವಾಗಿರುವದರಿಂದ ಸಾಮಾನ್ಯ ವೈದ್ಯರಿಗೆ ತರಬೇತಿ ನೀಡಲಾಗುತ್ತಿದೆ. ಹಾಗೆಯೇ ನಾವು ರಾಜ್ಯದಾದ್ಯಂತ ಮಕ್ಕಳ ಆಸ್ಪತ್ರೆಗಳನ್ನ ಸಿದ್ಧಗೊಳಿಸುತ್ತಿದ್ದೇವೆ. ಈ ಹಿಂದೆ ಕೇರಳ ಮಾದರಿಯನ್ನ ಎಲ್ಲರೂ ಪ್ರಶಂಸೆ ಮಾಡಿದ್ದರು ಆದರೆ ಅಲ್ಲಿ ಈಗಲೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ನನ್ನ ಪ್ರಕಾರ ಮಾನ್ಯ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಅವರು ಸೂಕ್ತ ಸಮಯದಲ್ಲಿ ಅತ್ಯುತ್ತಮ ನಿರ್ಧಾರಗಳನ್ನ ತೆಗೆದುಕೊಂಡಿದ್ದು, ಇದು ಕೋವಿಡ್ ನಿಯಂತ್ರಣದಲ್ಲಿ ನಿಜವಾದ ಮಾದರಿ ಕ್ರಮಗಳಾಗಿವೆ”, ಎಂದು ಸಚಿವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ ಟಿ ಬಿ ನಾಗರಾಜ್, ಬಿ ಡಿ ಎ ಅಧ್ಯಕ್ಷರಾದ ಎಸ್ ಆರ್ ವಿಶ್ವನಾಥ, ಶಾಸಕರಾದ ವೆಂಕಟರಮಣಯ್ಯ, ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣ ಸ್ವಾಮಿ, ಜಿಲ್ಲಾಧಿಕಾರಿ ಶ್ರೀನಿವಾಸ್ ಇನ್ನಿತರರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English