ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ವಸತಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಜರುಗಿತು.
ವಸತಿ ಸಚಿವ ವಿ.ಸೋಮಣ್ಣ, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್ , ಸಮಾಜ ಕಲ್ಯಾಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ: ನಾಗಾಂಬಿಕಾ ದೇವಿ, ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ, ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಡಾ: ಬಸವರಾಜ್, ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ವೆಂಕಟೇಶ್, ಕರ್ನಾಟಕ ಗೃಹ ಮಂಡಳಿ ಆಯುಕ್ತರು ಉಪಸ್ಥಿತರಿದ್ದರು.
1. ವಿವಿಧ ವಸತಿ ಯೋಜನೆಗಳಡಿ ಮುಂದಿನ ಎರಡು ವರ್ಷಗಳಲ್ಲಿ 9 ಲಕ್ಷ ಮನೆ ನಿರ್ಮಿಸಲು ನಿರ್ಧರಿಸಲಾಗಿದೆ.
2. ಇವುಗಳಲ್ಲಿ ರಾಜ್ಯದ ವಸತಿ ಯೋಜನೆಗಳಡಿ ನಿರ್ಮಿಸುವ 5 ಲಕ್ಷ ಮನೆ ಮತ್ತು ಕೇಂದ್ರ ಸರ್ಕಾರದ ಯೋಜನೆಗಳಡಿ 4 ಲಕ್ಷ ಮನೆ ಸೇರಿವೆ.
3. ಮನೆ ನಿರ್ಮಿಸಲು ಪರಿಶಿಷ್ಟ ಫಲಾನುಭವಿಗಳಿಗೆ 1.75 ಲಕ್ಷ ಮತ್ತು ಇತರರಿಗೆ 1.20 ಲಕ್ಷ ರೂ. ಸಹಾಯಧನ ದೊರೆಯುತ್ತದೆ.
4. ಕೇಂದ್ರದ ವಸತಿ ಯೋಜನೆಗಳಡಿ ಮಂಜೂರಾಗಿರುವ ಮನೆಗಳಿಗೆ ಫಲಾನುಭವಿಗಳಿಗೆ ಶೇ.60 ಅಂದರೆ 72,000 ಮತ್ತು ರಾಜ್ಯದ ಪಾಲು ಶೇ.40 ಅಂದರೆ 48,000 ರೂ. ಸಹಾಯಧನ ಲಭ್ಯವಿದೆ.
5. ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಲಾ 100 ಮನೆಗಳನ್ನು ಹಂಚಿಕೆ ಮಾಡಲಾಗುವುದು.
6. ಪ್ರಸ್ತುತ ನಿರ್ಮಾಣದ ವಿವಿಧ ಹಂತಗಳಲ್ಲಿರುವ ರಾಜ್ಯ ಸರ್ಕಾರದ ಬಸವ ವಸತಿ ಯೋಜನೆ, ಡಾ: ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆ, ದೇವರಾಜು ಅರಸು ವಸತಿ ಯೋಜನೆ ಹಾಗೂ ವಾಜಪೇಯಿ ನಗರ ವಸತಿ ಯೋಜನೆಗಳಡಿ ಮನೆಗಳನ್ನು ಪೂರ್ಣ ಮಾಡಲು 6,200 ಕೋಟಿ ರೂ.ಗಳ ಅಗತ್ಯವಿದೆ. ಹಂತ ಹಂತವಾಗಿ ಈ ಮೊತ್ತವನ್ನು ಬಿಡುಗಡೆ ಮಾಡಲಾಗುವುದೆಂದು ಮುಖ್ಯಮಂತ್ರಿಗಳು ಹೇಳಿದರು.
7. ಮುಖ್ಯಮಂತ್ರಿಗಳ 1 ಲಕ್ಷ ಬೆಂಗಳೂರು ಬಹು ಮಹಡಿ ಯೋಜನೆಯಡಿ ಆಗಸ್ಟ್ 15 ರಂದು ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ 5 ಸಾವಿರ ಮನೆಗಳ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ.
Click this button or press Ctrl+G to toggle between Kannada and English