ಚಿತ್ರದುರ್ಗ: ನಿಶ್ಚಿತಾರ್ಥ ಆಗಿ ಒಂದೇ ತಿಂಗಳಲ್ಲಿ ಸರ್ಕಾರಿ ಉದ್ಯೋಗಿ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ರೇಖಲಗೆರೆ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಮಾನಸ (22) ಎಂದು ಗುರುತಿಸಲಾಗಿದೆ.
ಮಾನಸ ಸರ್ಕಾರಿ ಉದ್ಯೋಗ ಸಿಕ್ಕಿ, ನಿಶ್ಚಿತಾರ್ಥಆಗಿ ಒಂದೇ ತಿಂಗಳಲ್ಲಿ ಅನುಮಾನಸ್ಪದವಾಗಿ ಆ್ಯಸಿಡ್ ಕುಡಿದು, ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಮಾನಸ ಒಂದಲ್ಲ, ಎರಡಲ್ಲ ಸತತ ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿ ಕೊನೆಗೂ ಇಂದು ಕರ್ತವ್ಯಕ್ಕೆ ತೆರಳುವ ಮಾರ್ಗ ಮಧ್ಯೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಈಚಲಗೆರೆ ಗ್ರಾಮದ ಬಳಿ ತನ್ನ ದ್ವಿಚಕ್ರ ವಾಹನವನ್ನು ರಸ್ತೆ ಬದಿಗೆ ನಿಲ್ಲಿಸಿ, ಕತ್ತನ್ನು ಕೊಯ್ದುಕೊಂಡು, ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದು, ಈಕೆಯ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.
ಮಾನಸ, ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಮದ ಪೋಸ್ಟ್ ಆಫೀಸ್‍ನಲ್ಲಿ ಪೋಸ್ಟ್ ಮಾಸ್ಟರ್ ಆಗಿ ಕರ್ತವ್ಯ ನಿರ್ವಹಿಸುತಿದ್ದಳು. ಕಳೆದ ಒಂದು ತಿಂಗಳ ಹಿಂದೆಯಷ್ಟೇ ಸರ್ಕಾರಿ ಉದ್ಯೋಗಿ ಯವಕನೊಂದಿಗೆ ನಿಶ್ಚಿತಾರ್ಥ ಆಗಿತ್ತು. ಆದರೆ ಇದೀಗ ಮಾನಸ ದಿಢೀರ್ ಎಂದು ಆತ್ಮಹತ್ಯೆಗೆ ಶರಣಾಗಿರುವುದು ಅನುಮಾನ ಮೂಡಿಸಿದೆ.
ಮಾನಸ ದಾರಿ ಮಧ್ಯೆ ಆ್ಯಸಿಡ್ ಸೇವಿಸಿದ ಪರಣಾಮ ಆಕೆಯ ದೇಹದ ಒಳಗಿನ ಭಾಗ ಸಂಪೂರ್ಣ ಸುಟ್ಟು ಹೋಗಿವೆ, ಅಲ್ಲದೇ ಕುತ್ತಿಗೆಯನ್ನು ಸಹ ಚಾಕುವಿನಿಂದ ಕೊಯ್ದಕೊಂಡಿದ್ದಾಳೆಂದು ವೈದ್ಯರು ತಿಳಿಸಿದ್ದಾರೆ. ಆದರೆ ದಿಢೀರ್ ಅಂತ ಈ ರೀತಿ ಸಾವಿಗೀಡಾದ ಪರಿಣಾಮ ಈ ಸಾವಿನ ಸುತ್ತ ಸಾರ್ವಜನಿಕವಾಗಿ ಬಾರಿ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಚಿತ್ರದುರ್ಗ ಎಸ್‍ಪಿ ರಾಧಿಕಾ ನೇತೃತ್ವದಲ್ಲಿ ನಿಗೂಢ ಸಾವಿನ ಬಗ್ಗೆ ತನಿಖೆಯನ್ನು ಚುರುಕುಗೊಳಿಸಲಾಗಿದೆ.
ಮಾನಸ ಹಲವು ದಿನಗಳಿಂದ ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಳು. ಹೀಗಾಗಿ ಆತ್ಮಹತ್ಯೆಗೆ ಶರಣಾಗಿರಬಹುದು ಎನ್ನಲಾಗಿದೆ.
Click this button or press Ctrl+G to toggle between Kannada and English